ಬೆಂಗಳೂರು:
ಸೋಷಿಯಲ್ ಮೀಡಿಯದಲ್ಲಿ ಕ್ರಿಯಾಶೀಲರಾಗಿರುವ ನಮ್ಮ ಕಾರ್ಯಕರ್ತರನ್ನು ಹೆದರಿಸುವ ಮತ್ತು ಕಿರುಕುಳ ನೀಡುವ ಕಾರ್ಯವನ್ನು ರಾಜ್ಯದ ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಆರೋಪಿಸಿದರು.
ಉನ್ನತ ಪೊಲೀಸ್ ಅಧಿಕಾರಿಗಳನ್ನು ಇಂದು ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮಂಡ್ಯದಲ್ಲಿ ನಿನ್ನೆ ಇಬ್ಬರನ್ನು ಬಂಧಿಸಿದ್ದಾರೆ. ಹಾಸನದಲ್ಲಿ ನಾಲ್ಕು ಜನ ಕಾರ್ಯಕರ್ತರನ್ನು ಕಸ್ಟಡಿಗೆ ಪಡೆದಿದ್ದಾರೆ. ತುಮಕೂರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಶಕುಂತಳಾ ಎಂಬ ಕಾರ್ಯಕರ್ತೆಯನ್ನು ಕಸ್ಟಡಿಗೆ ಕಸ್ಟಡಿಗೆ ತೆಗೆದುಕೊಂಡಿದ್ದರು ಎಂದರು.
ಅವರು 10, 12, 15 ಗಂಟೆ ವಿಚಾರಣೆ ನಡೆಸಿ ಬಿಡುತ್ತಿದ್ದಾರೆ. ಆದರೆ, ರಾಜ್ಯ ಸರಕಾರದ ಭ್ರಷ್ಟಾಚಾರ, ಲಂಚಗುಳಿತನವನ್ನು ಪ್ರಶ್ನಿಸುವ ಮತ್ತು ಟೀಕಿಸುವ ಅಭಿವ್ಯಕ್ತಿ ಮಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಮ್ಮ ಕಾರ್ಯಕರ್ತರ ಮನೆಗೆ ಹೋಗಿ ಕರೆದೊಯ್ಯುವುದು, ಅರೆಸ್ಟ್ ಮಾಡಿಲ್ಲ ಎನ್ನುವುದು ನಡೆದಿದೆ. ಮಾಹಿತಿ ಪಡೆಯುತ್ತಿದ್ದೇವೆ ಎಂದು ಸರಕಾರ ಹೇಳುತ್ತಿದೆ. ಈ ವಿಷಯವನ್ನು ಕಮಿಷನರ್ ಬಳಿ ಮಾತನಾಡಲು ಬಂದಿದ್ದೇವೆ ಎಂದು ಅವರು ತಿಳಿಸಿದರು.
ಸೋಷಿಯಲ್ ಮೀಡಿಯದಲ್ಲಿ ಕಾಂಗ್ರೆಸ್ಸನ್ನು ಟೀಕಿಸಿದ್ದೇವೆ; ಭ್ರಷ್ಟ ಕಾಂಗ್ರೆಸ್, ಎಟಿಎಂ ಎಂದು ಪೋಸ್ಟ್ ಮಾಡಿದ್ದಾಗಿ ಹೇಳುತ್ತಾರೆ. ಅಲ್ಲದೆ ಸುಳ್ಳು ಸುಳ್ಳೇ ಪೋಸ್ಟ್ ಹಾಕಿದ್ದಾಗಿ ಆರೋಪಿಸಿದ್ದಾರೆ. ಇವುಗಳ ಬಗ್ಗೆ ಬೇಕಿದ್ದರೆ ತನಿಖೆ ಮಾಡಲಿ. ಆದರೆ, ಕಾರ್ಯಕರ್ತರನ್ನು ಕರೆದುಕೊಂಡು ಬಂದು ಬೆದರಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕ್ರೈಂ ಡಿಸಿಪಿ ಬದ್ರಿನಾಥ್ ಅವರನ್ನು ಭೇಟಿ ಮಾಡಿದ್ದೇವೆ. ‘ಮಾಹಿತಿ ಪಡೆದು ಬಿಟ್ಟು ಕಳಿಸಿದ್ದೇವೆ’ ಎಂದು ತಿಳಿಸಿದ್ದಾರೆ. ಏನೇ ಇದ್ದರೂ ನಮ್ಮನ್ನು ಸಂಪರ್ಕಿಸಿ ಎಂದಿದ್ದೇವೆ. ಕಾರ್ಯಕರ್ತರನ್ನು ಹೆದರಿಸಬೇಡಿ ಎಂದು ತಿಳಿಸಿದ್ದಾಗಿ ಹೇಳಿದರು. ಬೆಂಗಳೂರಿನಲ್ಲಿ ಯಾರನ್ನೂ ಅರೆಸ್ಟ್ ಮಾಡಿಲ್ಲ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.
ಬಿಬಿಎಂಪಿ ಕಚೇರಿಯ ಅಗ್ನಿ ಅವಘಡದ ಕುರಿತ ಪ್ರಶ್ನೆಗೆ ಉತ್ತರ ನೀಡಿದ ಅವರು, ಬೆಂಕಿ ಹತ್ತಿಕೊಂಡಿತೇ ಅಥವಾ ಬೆಂಕಿ ಹಚ್ಚಿದ್ದಾರಾ ಎಂಬ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು. ಯಾವುದಾದರೂ ಫೈಲ್ ನಾಶ ಮಾಡಲು ಬೆಂಕಿ ಹಚ್ಚಿದರೇ ಎಂಬ ವಿವರ ಹೊರಬರಬೇಕಿದೆ ಎಂದ ಅವರು, ತನಿಖೆ ನಡೆಯಲಿ; ಯಾರೇ ತಪ್ಪು ಮಾಡಿದರೂ ಅವರನ್ನು ಜೈಲಿಗೆ ಕಳಿಸಿ ಸರಿಯಾದ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಶ್ವತ್ಥನಾರಾಯಣ್, ಸಿದ್ದರಾಜು, ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಅವರು ಈ ನಿಯೋಗದಲ್ಲಿದ್ದರು.