ಬೆಂಗಳೂರು: ಯಲಹಂಕ ಹಳೆ ನಗರ ಕೆಂಪೇಗೌಡ ವಾರ್ಡ್ ನಂ.01ರಲ್ಲಿ ಕಾಂಗ್ರೆಸ್ ಸರ್ಕಾರದ ಅವೈಜ್ಞಾನಿಕ ಮತ್ತು ಕಳಪೆ ಡಾಂಬರೀಕರಣ ಕಾಮಗಾರಿಗಳ ಪರಿಣಾಮ, ರಸ್ತೆಗಳಲ್ಲಿ ಈಗಾಗಲೇ ಅನೇಕ ಗುಂಡಿಗಳು ಉಂಟಾಗಿದ್ದು, ಇದರಿಂದ ಅನೇಕ ರಸ್ತೆ ಅಪಘಾತಗಳು ಮತ್ತು ಸಾವುಗಳು ಸಂಭವಿಸಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರ ನೇತೃತ್ವದಲ್ಲಿ ‘ಗುಂಡಿ ಮುಚ್ಚುವ ಅಭಿಯಾನ’ ಮತ್ತು ರಸ್ತೆ ತಡೆ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಈ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನಾಕಾರರು ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯದಿಂದ ಕಳಪೆ ರಸ್ತೆ ಕಾಮಗಾರಿ ನಡೆಸಿದೆ ಎಂದು ಆರೋಪಿಸಿ, ಗುಣಮಟ್ಟದ ರಸ್ತೆ ಕಾಮಗಾರಿ, ಸುರಕ್ಷಿತ ಸಾರಿಗೆ ಮತ್ತು ಅಪಘಾತ ತಡೆಗೆ ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
