ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪ್ರಕರಣ ವಿಚಾರ ಏನಿದ್ದರೂ ತನಿಖೆ ಮಾಡುತ್ತಿರುವ ಎಸ್ ಐಟಿ ಹಾಗೂ ಸರಕಾರಕ್ಕೆ ಬಿಟ್ಟಿದ್ದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು.
ಪ್ರಜ್ವಲ್ ಘಟನೆಯಲ್ಲಿ ಏನೆಲ್ಲಾ ನಡೆಯಿತು ಎಂಬುದನ್ನು ಒಂದು ತಿಂಗಳಿಂದ ನೋಡಿದ್ದೇನೆ. ಅವರು ವಿದೇಶದಿಂದ ವಾಪಸ್ ಬಂದು ಎಸ್ ಐಟಿ ಮುಂದೆ ಹಾಜರಾಗಬೇಕು ಎಂದು ನಾನು ಮತ್ತು ದೇವೇಗೌಡರು ಹೇಳಿದ್ದೆವು. ಜತೆಗೆ ದೇವೇಗೌಡರು ಕೊನೆಯ ಎಚ್ಚರಿಕೆ ನೀಡಿದ್ದರು. ನಮ್ಮ ಮಾತಿನಂತೆ ಅವರು ಬಂದು ಹಾಜರಾಗಿದ್ದಾರೆ. ಅಲ್ಲಿಗೆ ನಮ್ಮ ಕುಟುಂಬದ ಪಾತ್ರ ಮುಗಿಯಿತು. ಇನ್ನು ಎಸ್ ಐಟಿ ಮತ್ತು ಸರ್ಕಾರದ್ದೇ ಜವಾಬ್ದಾರಿ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಈಗ ಅವರು ವಾಪಸ್ ಬಂದಿದ್ದಾರೆ. ತನಿಖೆ ನಡೆಯುತ್ತಿದೆ. ಅವರು ಗೆದ್ದ ಮೇಲೆ ಏನೂ ಅಂತ ನೋಡೋಣ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.
ಭಾವಾನಿ ರೇವಣ್ಣ ಅವರಿಗೆ ನೋಟೀಸ್ ನೀಡಿರುವ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು; ಕಾನೂನು ಪ್ರಕಾರ ಭವಾನಿ ರೆವಣ್ಣ ಅವರಿಗೆ ನೋಟೀಸ್ ಕೊಟ್ಟಿದ್ದಾರೆ. ಅದರ ಬಗ್ಗೆ ನಾನು ಪದೇ ಪದೆ ಮಾತನಾಡುವುದಿಲ್ಲ ಎಂದರು.