ಬೆಂಗಳೂರು, ಮಾರ್ಚ್ 21 (ಕರ್ನಾಟಕ ವಾರ್ತೆ) : ಸನ್ಮಾನ್ಯ ಮುಖ್ಯಮಂತ್ರಿಗಳು ಇತ್ತೀಚೆಗೆ ಮಂಡಿಸಿರುವ 2025-26ನೇ ಸಾಲಿನ ಆಯವ್ಯಯವನ್ನು ಉತ್ತರ ಕರ್ನಾಟಕದ ಜನತೆ ಬಹಳ ವಿಶೇಷವಾಗಿ ಹೃದಯ ಪೂರ್ವಕವಾಗಿ ಸ್ವಾಗತಿಸಿದರು.
ಆಯವ್ಯಯದ ಬಗ್ಗೆ ವಿರೋಧ ಪಕ್ಷಗಳ ನಾಯಕರು ಮಾಡುವ ಟೀಕೆ ಟಿಪ್ಪಣಿಗಳಿಗೆ ಯಾರೂ ತಲೆ ಕೆಡಿಸಿಕೊಳ್ಳಬಾರದು ವಿರೋಧ ಪಕ್ಷದವರು ಮಾಡುವ ಟೀಕೆಗಳಿಗೆ ಮಾನ್ಯ ಮುಖ್ಯಮಂತ್ರಿಗಳು ಸದನದಲ್ಲಿ ಎಲ್ಲಾ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರವನ್ನು ನೀಡಲಿದ್ದಾರೆ.
ಈಗಾಗಲೇ ಉತ್ತರ ಕರ್ನಾಟಕ ಜನತೆಯ ಬಹುದಿನಗಳ ಬೇಡಿಕೆಯಾದ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳು ಸಕಾರಾತ್ಮಕವಾಗಿ ಸ್ಪಂದಿಸಿ ಬೆಳಾವಿಯಲ್ಲಿ ಮೆಡಿಕಲ್ ಸ್ಥಾಪನೆಗೆ ಕ್ರಮವಹಿಸಿದ್ದಾರೆ. ಇದಕ್ಕೆ ನಾನು ಉತ್ತರ ಕರ್ನಾಟಕ ಜನತೆ ಹಾಗೂ ವಿದ್ಯಾರ್ಥಿಗಳ ಪರವಾಗಿ ಅಭಿನಂದನೆಯನ್ನು ಸಲ್ಲಿಸುತ್ತೇನೆ.
ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಲು ಮನವಿ: ಉತ್ತರ ಕರ್ನಾಟಕದ ಭಾಗದಲ್ಲಿ ಯಾವುದೇ ಕ್ಯಾನ್ಸರ್ ಆಸ್ಪತ್ರೆ ಇರುವುದಿಲ್ಲ. ಇಲ್ಲಿನ ಜನರು ಹಲವಾರು ಬಗೆಯ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಅದರಲ್ಲಿ ಕ್ಯಾನ್ಸರ್ ಕಾಯಿಲೆಗೆ ಬಹಳಷ್ಟು ಜನ ತುತ್ತಾಗುತ್ತಿದ್ದಾರೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ಒಂದು ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಲು ಮುಂದಾಗಬೇಕು. ಆಸ್ಪತ್ರೆ ನಿರ್ಮಾಣಕ್ಕಾಗಿ 10 ಎಕರೆ ಜಮೀನನ್ನು ಸಹ ನಾವು ಸರ್ಕಾರಕ್ಕೆ ನೀಡಲು ಸಿದ್ದರಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಆಸಕ್ತಿ ವಹಿಸಬೇಕು ಎಂದು ಮನವಿ ಮಾಡಿದರು.
ಕಳ್ಳಂಬಾಡಿ ಡ್ಯಾಂ ನಿಂದ ನೀರು ಬಿಡಲು ಮನವಿ: ಸನ್ಮಾನ್ಯ ಮುಖ್ಯಮಂತ್ರಿಗಳು ಜನಪರವಾದ ಬಜೆಟ್‍ನ್ನು ಮಂಡಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ಹಾಗೂ ನಮ್ಮ ಉತ್ತರ ಕರ್ನಾಟಕ ಸಚಿವರು ಮತ್ತು ಶಾಸಕರಿಗೆ ರೈತರ ಮೇಲೆ ಅಪಾರ ಕಾಳಜಿ ಗೌರವವಿದೆ. ರೈತರಿಗಾಗಿ, ರೈತ ಪರ ಚಟುವಟಿಕೆಗಳಿಗಾಗಿ 2025-26ನೇ ಆಯವ್ಯಯದಲ್ಲಿ ಅನೇಕ ಯೋಜನೆಗಳನ್ನು ನೀಡಿದ್ದಾರೆ. ಇದಕ್ಕಾಗಿ ನಾನು ಉತ್ತರ ಕರ್ನಾಟಕ ರೈತ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಅದರೆ ಉತ್ತರಕರ್ನಾಟಕ ಭಾಗದ ರೈತರಿಗೆ ಅನುಕೂಲವಾಗುವಂತೆ ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಗಳ ಒಪ್ಪಂದದಂತೆ ಕಳ್ಳಂಬಾಡಿ ಡ್ಯಾಂ ನಿಂದ 4 ಟಿ.ಎಂ.ಸಿ ನೀರನ್ನು ವೇದ ಗಂಗಾ ಮತ್ತು ದೂದ್ ಗಂಗಾಗೆ ಹರಿಸಬೇಕಿತ್ತು. ಆದರೆ ಮಹಾರಾಷ್ಟ್ರ ಸರ್ಕಾರ ನೀರನ್ನು ಹರಿಸುತ್ತಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.
ಬೆಳಗಾವಿ ಜಿಲ್ಲೆಯ ಅತಿದೊಡ್ಡ ಪಟ್ಟಣವಾಗಿರುವ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಲು ಮನವಿ: ಚಿಕ್ಕೋಡಿ ಗಡಿಭಾಗದ ಜನರು ತಮ್ಮ ಕೆಲಸ ಕಾರ್ಯಗಳಿಗೆ 190 ಕಿಲೋಮೀಟರ್ ದೂರದ ಜಿಲ್ಲಾ ಕೇಂದ್ರ ಬೆಳಗಾವಿಗೆ ಬರಬೇಕಾಗಿದೆ. ಪ್ರತಿನಿತ್ಯ ತಮ್ಮ ಸಣ್ಣ ಸಣ್ಣ ಕೆಲಸಗಳಿಗೂ ಇಷ್ಟು ದೂರ ಪ್ರಯಾಣ ಮಾಡುವುದು ಸಾಧ್ಯವಿಲ್ಲ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ಚಿಕ್ಕೋಡಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಲು ಸೂಕ್ತ ಪಟ್ಟಣವಾಗಿದ್ದು, ಚಿಕ್ಕೋಡಿ ಜಿಲ್ಲೆಯಾದಲ್ಲಿ ಎಲ್ಲಾ ಕಚೇರಿಗಳು ಆಭಾಗಕ್ಕೆ ಬರಲಿದ್ದು, ಜನರ ಅಲೆದಾಟ ತಪ್ಪುತ್ತದೆ. ಆ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳುತ್ತಾ, ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಆ ಭಾಗದ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ, ಕೂಡಲೇ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.