ಬೆಂಗಳೂರು: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ–2026 ಹಿನ್ನೆಲೆಯಲ್ಲಿ ಪೂರ್ವ ತಯಾರಿಯಾಗಿ 2002ರ ಮತದಾರರ ಪಟ್ಟಿಯನ್ನು 2025ರ ಪ್ರಸ್ತುತ ಮತದಾರರ ಪಟ್ಟಿಯೊಂದಿಗೆ ತಾಳೆ ಮ್ಯಾಪಿಂಗ್ ಮಾಡುವ ಕಾರ್ಯ ಆರಂಭಿಸಲಾಗಿದೆ ಎಂದು ಬೆಂಗಳೂರು ನಗರ ಅಪರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜಿ.ಜಗದೀಶ ತಿಳಿಸಿದ್ದಾರೆ.
ಈ ಮ್ಯಾಪಿಂಗ್ ಕಾರ್ಯವನ್ನು ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ 7 ವಿಧಾನಸಭಾ ಕ್ಷೇತ್ರಗಳು — ಯಲಹಂಕ (150), ಬ್ಯಾಟರಾಯನಪುರ (152), ಯಶವಂತಪುರ (153), ದಾಸರಹಳ್ಳಿ (155), ಮಹದೇವಪುರ (174), ಬೆಂಗಳೂರು ದಕ್ಷಿಣ (176) ಮತ್ತು ಆನೇಕಲ್ (177) ಕ್ಷೇತ್ರಗಳಲ್ಲಿ ಹಂತ ಹಂತವಾಗಿ ಕೈಗೊಳ್ಳಲಾಗುತ್ತಿದೆ.
2002ರ ಮತದಾರರ ಪಟ್ಟಿಯಲ್ಲಿರುವ ಆದರೆ 2025ರ ಪಟ್ಟಿಯೊಂದಿಗೆ ತಾಳೆಯಾಗದೇ ಇರುವ ಮತದಾರರನ್ನು ಗುರುತಿಸುವ ಸಲುವಾಗಿ, ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆಮನೆಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿ ಮ್ಯಾಪಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದ್ದಾರೆ.
ಭಾರತ ಚುನಾವಣಾ ಆಯೋಗದ 15.12.2025ರ ನಿರ್ದೇಶನದಂತೆ, ಪ್ರಸ್ತುತ ಮತದಾರರ ಪಟ್ಟಿಯಲ್ಲಿ ಇರುವ ಮಸುಕಾದ ಭಾವಚಿತ್ರಗಳು, ಅತಿಸಣ್ಣ ಫೋಟೋಗಳು, ಹೆಸರು–ಲಿಂಗ–ವಿಳಾಸದ ಲೋಪದೋಷಗಳನ್ನು ಪತ್ತೆಹಚ್ಚಿ ನಿಯಮಾನುಸಾರ ಸರಿಪಡಿಸಲು ಕ್ರಮ ವಹಿಸಲಾಗುತ್ತಿದೆ.
ಇದೇ ಪ್ರಕ್ರಿಯೆಯನ್ನು ಆಯೋಗದ 13.01.2026ರ ಸೂಚನೆಯಂತೆ ಮುಂದಿನ ಮೂರು ವಾರಗಳ ಕಾಲ ವಿಸ್ತರಿಸಲಾಗಿದ್ದು, ಈ ಅವಧಿಯಲ್ಲಿ ಬಿಎಲ್ಓಗಳು ಮತದಾರರ ಮನೆಗಳಿಗೆ ಭೇಟಿ ನೀಡಿ ಬಿಎಲ್ಓ ಆಪ್ ಮೂಲಕ ಅಥವಾ ನಮೂನೆ–8 ಅರ್ಜಿ ಸ್ವೀಕರಿಸುವ ಮೂಲಕ ದೋಷ ಸರಿಪಡಿಸುವ ಕಾರ್ಯ ನಡೆಸಲಿದ್ದಾರೆ.
ಈ ಹಿನ್ನೆಲೆಯಲ್ಲಿ, ಬೆಂಗಳೂರು ನಗರ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಎಲ್ಲಾ ಮತದಾರರು, ಬಿಎಲ್ಓಗಳು ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಗತ್ಯ ಮಾಹಿತಿಯನ್ನು ಸರಿಯಾಗಿ ಒದಗಿಸಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ ಮನವಿ ಮಾಡಿದ್ದಾರೆ.
ಮತದಾರರು ತಮ್ಮ ವಿವರಗಳಲ್ಲಿ ಇರುವ ದೋಷಗಳನ್ನು ಸ್ವತಃ ಸರಿಪಡಿಸಿಕೊಳ್ಳಲು, ಭಾರತ ಚುನಾವಣಾ ಆಯೋಗದ NVSP ಪೋರ್ಟಲ್ https://voters.eci.gov.in/ ಇಲ್ಲಿ ನಮೂನೆ–8 ಸಲ್ಲಿಸಬಹುದಾಗಿದೆ.
ಅಲ್ಲದೆ, NVSP ಪೋರ್ಟಲ್ನಲ್ಲಿ ಲಭ್ಯವಿರುವ “Book a Call with BLO” ಸೌಲಭ್ಯವನ್ನು ಬಳಸಿಕೊಂಡು ಮತದಾರರ ಪಟ್ಟಿ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
