ಬೆಂಗಳೂರು:
ಬಿಜೆಪಿ ಕಾರ್ಯಕರ್ತರಾಗುವ ದ್ವಿಗುಣ ಗೌರವ. ಜವಾಬ್ದಾರಿಯೂ ಹೆಚ್ಚಾಗಿದೆ. ಬಸವಣ್ಣನವರ ನಾಡು ನಿಮ್ಮದು. ಗರಿಷ್ಠ ದಾಖಲೆಯ ಸೀಟುಗಳಿಂದ ಬಿಜೆಪಿ ಗೆಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದರು.
‘ಲೈವ್ ವರ್ಚುವಲ್ ರ್ಯಾಲಿ’ಯಲ್ಲಿ ಮಾತನಾಡಿದ ಅವರು, ಬೂತ್ ಗೆಲುವು ರಾಜ್ಯದ ಗೆಲುವಿಗೆ ಪೂರಕ. ಮತ್ತೆ 2 ದಿನಗಳಲ್ಲಿ ಕರ್ನಾಟಕದ ಜನರ ದರ್ಶನಕ್ಕಾಗಿ, ಆಶೀರ್ವಾದ ಪಡೆಯಲು ಬರಲಿದ್ದೇನೆ.
ಕರ್ನಾಟಕದ ಎಲ್ಲಿ ಹೋದರೂ ಜನರ ಉತ್ಸಾಹ ಕಾಣುತ್ತಿದೆ. ಕರ್ನಾಟಕಕ್ಕೆ ಬಂದ ನಾಯಕರು, ಮುಖಂಡರು ಜನರ ವಿಶ್ವಾಸದ ಮಾತನಾಡುತ್ತಿದ್ದಾರೆ. ಇದಕ್ಕಾಗಿ ಕರ್ನಾಟಕ ಬಿಜೆಪಿಗೆ ಅಭಿನಂದನೆಗಳು. ಸಂಘಟನೆಯ ಶಕ್ತಿ ಅನಾವರಣಗೊಂಡಿದೆ ಎಂದರು.
ಹೆಚ್ಚು ಮತದಿಂದ ಗೆಲುವಿಗೆ ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯನ್ನು ವಿಭಿನ್ನ ಪಕ್ಷವಾಗಿ ಗೆಲ್ಲಿಸಿ. ಬೂತ್‍ಗಳಲ್ಲಿ 10 ಮಹಿಳಾ, 10 ಪುರುಷ ಕಾರ್ಯಕರ್ತರನ್ನು ಜೊತೆಗೂಡಿಸಿ. ಡಬಲ್ ಎಂಜಿನ್ ಸರಕಾರಗಳ ಸಾಧನೆಯನ್ನು ಜನರಿಗೆ ತಿಳಿಸಿ. ಹಿರಿಯರಿಗೆ ಗೌರವ ಸಲ್ಲಿಸಿ. ಕಿರಿಯರನ್ನು ಪ್ರೀತಿಯಿಂದ ಮಾತನಾಡಿಸಿ. ಬೂತ್ ಗೆಲುವು ಎಂದರೆ ಕುಟುಂಬಗಳ ಜೊತೆ ಮಾತುಕತೆ ಮತ್ತು ಜನರ ಒಲವಿನ ಗೆಲುವಾಗಲಿ ಎಂದು ಆಶಿಸಿದರು.
25 ವರ್ಷಗಳಲ್ಲಿ ಬಡತನಮುಕ್ತ, ವಿಕಸಿತ ದೇಶ ನಮ್ಮ ಗುರಿ. ಕೇವಲ ಅಧಿಕಾರ ಪಡೆಯುವುದಷ್ಟೇ ನಮ್ಮ ವಿರೋಧಿಗಳ ಗುರಿ ಎಂದು ತಿಳಿಸಿದರು. ಕರ್ನಾಟಕದಲ್ಲಿ ಬೆಂಗಳೂರಿನಂಥ ಅನೇಕ ಸ್ಟಾರ್ಟಪ್ ಹಬ್‍ಗಳ ನಿರ್ಮಾಣ ಆಗಲಿ. ಪೂರ್ಣ ಬಹುಮತದ ಸ್ಥಿರ ಸರಕಾರಕ್ಕಾಗಿ ಮತ ಕೇಳಬೇಕು. ದೆಹಲಿಯಲ್ಲಿ 9 ವರ್ಷಗಳಿಂದ ಸ್ಥಿರ ಸರಕಾರದಿಂದ ಆದ ಲಾಭ ಮತ್ತು ಅಸ್ಥಿರ ಸರಕಾರದ ವೈಫಲ್ಯಗಳನ್ನು ಅನಾವರಣಗೊಳಿಸಿ ಎಂದು ತಿಳಿಸಿದರು.
Delighted to speak to our hardworking Karyakartas from Karnataka. People trust BJP's good governance. https://t.co/UfZmHfVoR3
— Narendra Modi (@narendramodi) April 27, 2023
ಡಬಲ್ ಎಂಜಿನ್ ಸರಕಾರ ಎಂದರೆ ವಿಕಾಸದ ಹಾದಿ. ಡಬಲ್ ಎಂಜಿನ್ ಸರಕಾರ ಇದ್ದಾಗ ಬಡವರ ಕಲ್ಯಾಣದ ಕಾರ್ಯಕ್ರಮಗಳು ಬೇಗನೆ ಜನರನ್ನು ತಲುಪುತ್ತವೆ. ವಿಪಕ್ಷದ ಸರಕಾರ ಇದ್ದಾಗ ಕೇಂದ್ರದ ಯೋಜನೆಗಳು ವಿಫಲವಾಗುತ್ತವೆ. ಯೋಜನೆಯ ಹೆಸರು ಬದಲಿಸುವುದು, ಯೋಜನೆ ವಿಫಲ ಆಗುವಂತೆ ನೋಡಿಕೊಳ್ಳುತ್ತಾರೆ ಎಂದು ವಿವರಿಸಿದರು.
ಕರ್ನಾಟಕದಲ್ಲಿ ಕಿಸಾನ್ ಸಮ್ಮಾನ್‍ನಡಿ ಪ್ರತಿ ಅರ್ಹ ರೈತರಿಗೆ ಒಟ್ಟು 10 ಸಾವಿರ ನೀಡಲಾಗುತ್ತಿದೆ. ಕರ್ನಾಟಕಕ್ಕೆ ಗರಿಷ್ಠ ಲಾಭ ಲಭಿಸಿದೆ. ವಿಕಾಸದ ವೇಗ ವರ್ಧನೆಗೆ ಬಿಜೆಪಿ ಗೆಲ್ಲಬೇಕಿದೆ ಎಂದು ನುಡಿದರು.
ಸ್ವಾಸ್ಥ್ಯ ಸೇವೆಯಲ್ಲಿ ಯುಪಿಎ ಸರಕಾರದ ನಿಧಾನಗತಿಯಿಂದ ಜನರಿಗೆ ಸಮಸ್ಯೆ ಆಗಿತ್ತು. ಏಮ್ಸ್ ಸಂಖ್ಯೆ ಗಮನಾರ್ಹ ಹೆಚ್ಚಳ (20ಕ್ಕೆ ಏರಿಕೆ), ವೈದ್ಯಕೀಯ ಕಾಲೇಜುಗಳ ಸಂಖ್ಯೆಯೂ 600ಕ್ಕೆ ಏರಿದೆ. ಭ್ರಷ್ಟಾಚಾರ ದೂರವಿಡಲು ಕಾಂಗ್ರೆಸ್ ಪ್ರಯತ್ನ ಮಾಡಲಿಲ್ಲ. 2014ರ ಬಳಿಕ ಭ್ರಷ್ಟಾಚಾರ ದೂರವಿಡಲು ಜನ್‍ಧನ್, ಆಧಾರ್ ಮೂಲಕ ಡಿಬಿಟಿಯಡಿ ಹಣ ವರ್ಗಾವಣೆ ಆಗುತ್ತಿದೆ. ಭ್ರಷ್ಟಾಚಾರ ತಪ್ಪಿಸಿದ್ದೇವೆ ಎಂದು ವಿವರಿಸಿದರು.
ಕರ್ನಾಟಕವು ಭಾಷೆ, ಸಂಸ್ಕøತಿ, ಸಾಹಿತ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅತ್ಯಂತ ಸಮೃದ್ಧ ರಾಜ್ಯವಾಗಿದೆ. ಆಧ್ಯಾತ್ಮಿಕತೆಗೆ ಸರಿಸಾಟಿ ಇಲ್ಲ. ಕನಕದಾಸರ ಭಕ್ತಿ, ಶಿವಶರಣರ ವಚನಗಳು ಸಮಾಜದ ನಿರ್ಮಾಣಕ್ಕೆ ಬಳಕೆ ಆಗಿವೆ. ಸಮಯದ ಜೊತೆ ಕೆಲವೊಮ್ಮೆ ಆಧುನಿಕತೆಯ ಜೊತೆಗೂಡಿ ಮುನ್ನಡೆಯುವ ಜನತೆ ಇಲ್ಲಿದ್ದಾರೆ. ಇಲ್ಲಿನ ಯುವಜನರು ಕನ್ನಡ ಸಾಹಿತ್ಯ ಓದುತ್ತಾರೆ. ನನ್ನ ಮತ್ತು ಕರ್ನಾಟಕದ ನಡುವಿನ ಬಾಂಧವ್ಯ ಹಲವು ದಶಕಗಳಷ್ಟು ಹಿಂದೆಯದು. ಪಕ್ಷದ ಕಾರ್ಯಕರ್ತನಾಗಿ ಭೇಟಿ ಕೊಡುತ್ತಿದೆ. ಇದಕ್ಕಾಗಿ ಮನ್ ಕಿ ಬಾತ್‍ನಡಿ ಕರ್ನಾಟಕದ ಪ್ರಸ್ತಾಪ ಮಾಡುತ್ತ ಇರುತ್ತೇನೆ ಎಂದರು.
ಕೆಲವು ಪಕ್ಷಗಳು ರಾಜಕೀಯವನ್ನು ಭ್ರಷ್ಟಾಚಾರಕ್ಕೆ ಬಳಸಿಕೊಂಡಿದ್ದವು. ಅವರಿಗೆ ಯುವಜನರ ಚಿಂತೆ ಇಲ್ಲ. ಸರಕಾರವು ವರ್ತಮಾನದ ಜೊತೆ ಭವಿಷ್ಯದ ಕುರಿತು ಚಿಂತಿಸಬೇಕು. ಸಂಪತ್ತಿನ ವೃದ್ಧಿ, ಜನಕಲ್ಯಾಣದ ಕುರಿತು ಯೋಚಿಸಬೇಕು. ಬಿಜೆಪಿ ಶಾರ್ಟ್ ಕಟ್ ಬದಲಾಗಿ ವಿಕಸಿತ ದೇಶಕ್ಕಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಕೋವಿಡ್ ವ್ಯಾಕ್ಸಿನ್ ಉಚಿತವಾಗಿ ಕೊಟ್ಟಿದ್ದೇವೆ. ಜನರು ಹಸಿವಿನಿಂದ ಬಳಲಬಾರದೆಂದು ಉಚಿತ ಪಡಿತರ ಕೊಡಲಾಯಿತು. ಆದರೆ, ದೇಶ ಮುನ್ನಡೆಸಲು ಉಚಿತ ಸಂಸ್ಕøತಿಯಿಂದ ದೂರ ಆಗುವುದು ಅನಿವಾರ್ಯ. ಮೂಲಸೌಕರ್ಯಗಳ ಹೆಚ್ಚಳ, ಐಐಟಿ, ವೈದ್ಯಕೀಯ ಕಾಲೇಜುಗಳ ಸಂಖ್ಯೆ ಹೆಚ್ಚಳಕ್ಕೆ ಆದ್ಯತೆ ಕೊಡಲಾಗಿದೆ. ಹಿಂದಿನ ಆಡಳಿತಗಾರರು ದೂರದೃಷ್ಟಿ ಹೊಂದಿರಲಿಲ್ಲ. ಉಚಿತ ಕುರಿತ ಆಶ್ವಾಸನೆ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡುವವರನ್ನು ದೂರವಿಡಿ ಎಂದು ವಿನಂತಿಸಿದರು.
ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಸುಳ್ಳು ಆಶ್ವಾಸನೆ ನೀಡಿ ಅನುಷ್ಠಾನಕ್ಕೆ ತಾರದೆ ಇದ್ದುದನ್ನು ಜನರಿಗೆ ತಿಳಿಸಬೇಕು.
ಹಿಮಾಚಲ ಪ್ರದೇಶ, ರಾಜಸ್ಥಾನಗಳಲ್ಲಿ ಭ್ರಷ್ಟಾಚಾರ, ಕುಟುಂಬ ರಾಜಕೀಯದ ಗ್ಯಾರಂಟಿಯನ್ನಷ್ಟೇ ನೀಡಬಲ್ಲದು. ಕಾಂಗ್ರೆಸ್ ವಾರಂಟಿ ಈಗಾಗಲೇ ಎಕ್ಸ್‍ಪೈರ್ ಆಗಿದೆ ಎಂದು ವ್ಯಂಗ್ಯವಾಗಿ ತಿಳಿಸಿದರು.
800 ವರ್ಷಗಳ ಗುಲಾಮಿತನದ ಬಳಿಕ 1947ರಲ್ಲಿ ಸ್ವಾತಂತ್ರ್ಯ ಲಭಿಸಿತು. 25 ವರ್ಷಗಳ ಪ್ರಮುಖ ಆಂದೋಲನ ಅದರ ಹಿಂದಿತ್ತು. ಇದೀಗ 75 ವರ್ಷಗಳ ಬಳಿಕ ಅಮೃತ ಕಾಲಕ್ಕಾಗಿ ಪ್ರಯತ್ನ ಆರಂಭವಾಗಿದೆ. ಕರ್ನಾಟಕದ ವಿಕಾಸದ ಮೂಲಕ ಭಾರತದ ಅಭಿವೃದ್ಧಿ ಆಗಲಿದೆ. ಶಿವಮೊಗ್ಗ ಮತ್ತಿತರ ಕಡೆ ವಿಮಾನನಿಲ್ದಾಣ ಆರಂಭವಾಗಿದೆ. ಇದು ಇನ್ನಷ್ಟು ವೇಗ ಪಡೆಯಲು ಬಹುಮತದ ಬಿಜೆಪಿ ಸರಕಾರ ಬೇಕಿದೆ ಎಂದು ತಿಳಿಸಿದರು.
ಜನರ ಮನೆಮನೆಗೆ ತೆರಳಿ ಸರಕಾರದ ಸಾಧನೆಗಳನ್ನು ಮುಂದಿಡಬೇಕು; ಇದು ಬಿಜೆಪಿ ಗೆಲುವಿಗೆ ಪೂರಕವಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಚುನಾವಣೆ ಸಮರ ಆರಂಭವಾಗಿದೆ. ಬಿಜೆಪಿ ಗೆಲುವು ಖಚಿತವಾಗಿದೆ. ಮಹಾಪ್ರಚಾರ ಅಭಿಯಾನದ ಮನೆಮನೆ ಭೇಟಿಯ ಮಧ್ಯೆ ಕಾರ್ಯಕರ್ತರಿಗೆ ಪ್ರೇರಣೆ ನೀಡಿ ಶಕ್ತಿವಂತರಾಗಿ ಉತ್ಸಾಹದಿಂದ ದುಡಿಯಲು ಶ್ರೇಷ್ಠ ಜನನಾಯಕ ಮೋದಿ ಅವರು ಸಂವಾದದಲ್ಲಿ ಭಾಗವಹಿಸುತ್ತಿದ್ದಾರೆ.
15 ಬಾರಿ ಪ್ರವಾಸ ಮಾಡಿದ ಪ್ರಧಾನಿಯವರು ರಾಜಕೀಯ ಚಿತ್ರಣ ಬದಲಾಯಿಸಿದ್ದಾರೆ. ಕಾರ್ಯಕರ್ತರಲ್ಲಿ ಬಹುಮತದ ಸರಕಾರದ ವಿಶ್ವಾಸ ಲಭಿಸಿದೆ ಎಂದು ತಿಳಿಸಿದರು.
ಶಿವಮೊಗ್ಗದ ವಿರೂಪಾಕ್ಷಪ್ಪ, ಚಿತ್ರದುರ್ಗದ ಫಕೀರಪ್ಪ, ಚಂದ್ರಶೇಖರ್ ವಿಜಯನಗರ, ದಕ್ಷಿಣ ಕನ್ನಡದ ಅರುಣ್ ಸೇಠ್, ಬೆಂಗಳೂರಿನ ಬಿ.ಆರ್.ಯೋಗೀಶ್ ಅವರ ಪ್ರಶ್ನೆಗಳಿಗೆ ಪ್ರಧಾನಿಯವರು ಉತ್ತರ ನೀಡಿದರು.