ಬೆಂಗಳೂರು:
ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಮೇ 6, 7ರಂದು ಬೆಂಗಳೂರಿನಲ್ಲಿ ‘ನಮ್ಮ ಬೆಂಗಳೂರು, ನಮ್ಮ ಹೆಮ್ಮೆ’ ಬೃಹತ್ ರೋಡ್ ಶೋ ನಡೆಸಲಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ರೋಡ್ ಶೋ ಕುರಿತು ವಿವರಿಸಿದ ಕೇಂದ್ರ ಸಚಿವೆ ಹಾಗೂ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರಾದ ಕು.ಶೋಭಾ ಕರಂದ್ಲಾಜೆ, ರಾಜಧಾನಿಯ ಎಲ್ಲರನ್ನೂ ನೋಡಬೇಕು, 17 ಕ್ಷೇತ್ರಗಳಿಗೆ ಭೇಟಿ ನೀಡಬೇಕು ಎಂಬ ಆಶಯದೊಂದಿಗೆ ಪ್ರಧಾನಿಯವರು ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಒಂದೇ ದಿನ ರೋಡ್ ಶೋ ನಡೆಸಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಎರಡು ದಿನ ರೋಡ್ ಶೋ ನಡೆಸಲಾಗುತ್ತಿದೆ. ಸಾರ್ವಜನಿಕರ ಭಾವನೆಗಳಿಗೆ ಗೌರವ ಕೊಟ್ಟು ಪ್ರಧಾನಿಯವರು ಎರಡು ದಿನ ರೋಡ್ ಶೋ ನಡೆಸುತ್ತಿದ್ದಾರೆ ಎಂದು ಹೇಳಿದರು.
6ರಂದು ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ರೋಡ್ ಶೋ ಹೊಸ ತಿಪ್ಪಸಂದ್ರದ ಕೆಂಪೇಗೌಡ ಪ್ರತಿಮೆಯಿಂದ ಹೊರಟು ಬ್ರಿಗೇಡ್ ರಸ್ತೆಯ ಯುದ್ಧ ಸ್ಮಾರಕದಲ್ಲಿ ಕೊನೆಗೊಳ್ಳಲಿದೆ. ಮೇ 7ರಂದು ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ರೋಡ್ ಶೋ ಬ್ರಿಗೇಡ್ ರಸ್ತೆಯ ಯುದ್ಧ ಸ್ಮಾರಕದಿಂದ ಹೊರಟು ಮಲ್ಲೇಶ್ವರದ ಸ್ಯಾಂಕಿ ಕೆರೆ ಬಳಿ ಮುಕ್ತಾಯಗೊಳ್ಳಲಿದೆ. ರೋಡ್ ಶೋ ಮಾರ್ಗದ ವಿವರಗಳನ್ನು ಸಾರ್ವಜನಿಕರಿಗೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಮೇ 5ರಂದು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಪ್ರಧಾನಿಯವರು ಬಳ್ಳಾರಿಯಲ್ಲಿ, ಸಂಜೆ 4.30ಕ್ಕೆ ತುಮಕೂರು ಗ್ರಾಮಾಂತರದಲ್ಲಿ ಬೃಹತ್ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಮೇ 6ರಂದು ಬೆಂಗಳೂರಿನಲ್ಲಿ ರೋಡ್ ಶೋ ಮುಗಿಸಿದ ನಂತರ ಪ್ರಧಾನಿಯವರು ಸಂಜೆ 4 ಗಂಟೆಗೆ ಬಾದಾಮಿಯಲ್ಲಿ, ಸಂಜೆ 7 ಗಂಟೆಗೆ ಹಾವೇರಿಯಲ್ಲಿ ಚುನಾವಣಾ ಸಮಾವೇಶಗಳಲ್ಲಿ ಭಾಗಿಯಾಗಲಿದ್ದಾರೆ.
ಮೇ 7ರಂದು ಭಾನುವಾರ ಬೆಂಗಳೂರಿನಲ್ಲಿ ರೋಡ್ ಶೋ ಮುಗಿಸಿದ ನಂತರ ಪ್ರಧಾನಿಯವರು ಸಂಜೆ 4 ಗಂಟೆಗೆ ಶಿವಮೊಗ್ಗದಲ್ಲಿ ಸಂಜೆ 7 ಗಂಟೆಗೆ ನಂಜನಗೂಡಿನಲ್ಲಿ ಸಾರ್ವಜನಿಕ ಸಭೆಗಳನ್ನುದ್ದೇಶಿ ಭಾಷಣ ಮಾಡಲಿದ್ದಾರೆ. ನಂಜನಗೂಡಿನಲ್ಲಿ ಸಾರ್ವಜನಿಕ ಸಭೆ ನಂತರ ಪ್ರಧಾನಿಯವರು ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ ಎಂದು ಕು.ಶೋಭಾ ಕರಂದ್ಲಾಜೆ ವಿವರಿಸಿದರು