Home ಬೆಂಗಳೂರು ನಗರ ಕೋವಿಡ್ ನಿಯಂತ್ರಣಕ್ಕೆ ಖಾಸಗಿ ಸಂಘ ಸಂಸ್ಥೆಗಳ ಸಹಭಾಗಿತ್ವ ಅತ್ಯಗತ್ಯ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಕೋವಿಡ್ ನಿಯಂತ್ರಣಕ್ಕೆ ಖಾಸಗಿ ಸಂಘ ಸಂಸ್ಥೆಗಳ ಸಹಭಾಗಿತ್ವ ಅತ್ಯಗತ್ಯ: ಗೃಹ ಸಚಿವ ಬಸವರಾಜ ಬೊಮ್ಮಾಯಿ

44
0

ಬೆಂಗಳೂರು:

ಖಾಸಗಿ ಸಂಘಸಂಸ್ಥೆಗಳ ಸಹಭಾಗಿತ್ವ ಇದ್ದಾಗ ಮಾತ್ರ ಕೋವಿಡ್ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಮಾಡಲು ಸಾಧ್ಯ. ಹೀಗಾಗಿ ಕೋವಿಡ್ ವಿರುದ್ಧ ಹೋರಾಟಕ್ಕೆ ಮುಂದಾಗುವ ಖಾಸಗಿ ಸಂಘ-ಸಂಸ್ಥೆಗಳಿಗೆ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗುರುವಾರ ಬೆಂಗಳೂರಿನ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿನ ರಾಜೀವ್ ಗಾಂಧಿ ಮಹಾವಿದ್ಯಾಲಯದಲ್ಲಿ ಆರಂಭವಾಗಿರುವ ಕೋವಿಡ್ ಕೇರ್ ಸೆಂಟರ್ ಅನ್ನು ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆಂಗಳೂರಿನಲ್ಲಿ ಪಕ್ಷಾತೀತವಾಗಿ ಕೋವಿಡ್ ವಿರುದ್ಧ ಹೋರಾಟ ಆರಂಭವಾಗಿದೆ. ಖಾಸಗಿ ಸಂಘ ಸಂಸ್ಥೆಗಳು ಕೋವಿಡ್ ನಿಯಂತ್ರಣಕ್ಕೆ ಶಕ್ತಿಮೀರಿ ಪ್ರಯತ್ನ ಮಾಡುತ್ತಿವೆ. ಇದು ನಿಜಕ್ಕೂ ಶ್ಲಾಘನೀಯವಾದದ್ದು. ಎಲ್ಲ ಪಕ್ಷಗಳ ಶಾಸಕರು ಪಕ್ಷಬೇಧ ಮರೆತು ಖಾಸಗಿ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಕೊರೊನಾ ನಿಯಂತ್ರಣಕ್ಕೆ ಹರಸಾಹಸ ಮಾಡುತ್ತಿದ್ದಾರೆ. ಇದಕ್ಕೆ ಹೆಬ್ಬಾಳದ ರಾಜೀವ್ ಗಾಂಧಿ ದಂತ ಮಹಾವಿದ್ಯಾಲಯ ಕೋವಿಡ್ ಕೇರ್ ಕೇಂದ್ರವಾಗಿರುವುದೇ ನಿದರ್ಶನ. ಈ ಸೆಂಟರ್ ಸ್ಥಾಪನೆಗೆ ಬಿಬಿಎಂಪಿ ಎಲ್ಲ ರೀತಿಯ ಸಹಕಾರ ನೀಡಿದೆ ಎಂದು ಅವರು ಹೇಳಿದರು.

ಕೇವಲ ಬೆಂಗಳೂರು ಅಷ್ಟೇ ಅಲ್ಲ. ರಾಜ್ಯಾದ್ಯಂತ ಖಾಸಗಿ ಸಹಭಾಗಿತ್ವದಲ್ಲಿ ಕೊರೊನಾ ನಿಯಂತ್ರಣಕ್ಕೆ ದೊಡ್ಡ ಮಟ್ಟದ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎಂದು ಅವರು ತಿಳಿಸಿದರು

ಅವರ ಪ್ರಶಂಸೆ- ನಮಗೆ ಪ್ರೋತ್ಸಾಹ

ರಾಜ್ಯದಲ್ಲಿ ಕೊರೊನಾ ವಿರುದ್ಧ ಹೋರಾಟದಲ್ಲಿ ಹಗಲಿರುಳು ಕೆಲಸ ಮಾಡುತ್ತಿರುವ ಪೊಲೀಸರ ಕರ್ತವ್ಯವನ್ನು ಹೈಕೋರ್ಟ್ ಮುಕ್ತಕಂಠದಿಂದ ಪ್ರಶಂಸೆ ಮಾಡಿದೆ. ಮಳೆ, ಗಾಳಿ, ಬಿಸಿಲು ಎನ್ನದೆ ದಿನದ 24×7 ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಅವರು ಜನರ ಪ್ರೀತಿ ವಿಶ್ವಾಸವನ್ನು ಗಳಿಸುತ್ತಾರೆ. ತಪ್ಪು ಮಾಡಿದವರಿಗೆ ಶಿಕ್ಷೆಯನ್ನು ನೀಡುತ್ತಾರೆ. ಹೈಕೋರ್ಟ್ ನ ಈ ಪ್ರಶಂಸೆ ನಮಗೆ ಪ್ರೋತ್ಸಾಹ ಎಂದು ಬೊಮ್ಮಾಯಿ ತಿಳಿಸಿದರು.

ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಸಂದರ್ಭದಲ್ಲಿ ವಸತಿ ಸಚಿವ ವಿ ಸೋಮಣ್ಣ, ಹೆಬ್ಬಾಳ ಶಾಸಕ ಬೈರತಿ ಸುರೇಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here