ಬೆಂಗಳೂರು:
ಶಿಕ್ಷಣ ಕ್ಷೇತ್ರದಲ್ಲಿ ಸಮಗ್ರ ಸುಧಾರಣೆ ತಂದರೆ ಉಳಿದ ಕ್ಷೇತ್ರಗಳು ತಮ್ಮಿಂದ ತಾವೇ ಸರಿ ಹೋಗುತ್ತವಲ್ಲದೆ, ಇಡೀ ದೇಶ ಅಭಿವೃದ್ಧಿ ಹೊಂದುತ್ತದೆ. ಆದ್ದರಿಂದ ಶಿಕ್ಷಣ ಕ್ಷೇತ್ರವು ಸಂಪೂರ್ಣ ವೃತ್ತಿಪರವಾಗಬೇಕಾಗಿದ್ದು, ತಂತ್ರಜ್ಞಾನ ಮತ್ತು ಅನ್ವೇಷಣೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಬೆಂಗಳೂರು ಉತ್ತರ ವಲಯವು ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಸುಧಾರಣೆ ಕುರಿತ ಸಂವಾದ ಮತ್ತು ಸರಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗಕ್ಕೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಶುಕ್ರವಾರ ಮಾತನಾಡಿದರು.
ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಅಂಗವಾಗಿ ನಾಲ್ಕು ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳೇ ಉಪಗ್ರಹವನ್ನು ತಯಾರಿಸಲು ಅವಕಾಶ ಮಾಡಿಕೊಡಲಾಗಿದೆ. ಈ ಮೂಲಕ ನವೋದ್ಯಮ ಮತ್ತು ನಾವೀನ್ಯತೆಗಳಿಗೆ ಒತ್ತು ಕೊಡುವ ಗುರಿ ಇದೆ. ಇಸ್ರೇಲ್ ಹೇಗೆ `ನವೋದ್ಯಮಗಳ ರಾಷ್ಟ್ರ’ವಾಗಿದೆಯೋ ಹಾಗೆ ನಾವು ಕೂಡ ಸಾಧನೆ ಮಾಡಬೇಕು ಎಂದು ಅವರು ಉತ್ತೇಜಿಸಿದರು.
ನಮ್ಮ ಮಲ್ಲೇಶ್ವರದ 2021-22ನೇ ಸಾಲಿನ SSLC ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಸುಧಾರಣೆ ಹಾಗೂ ಕೋವಿಡ್ ಸುರಕ್ಷತೆ ಕುರಿತು ಶಿಕ್ಷಕ ವೃಂದದ ಜತೆ ಸಂವಾದ ನಡೆಸಿದೆ.
— Dr. Ashwathnarayan C. N. (@drashwathcn) January 14, 2022
ಕಲಿಕೆಯ ಗುಣಮಟ್ಟದ ಸುಧಾರಣೆಗಾಗಿ #NEP2020 ಅಳವಡಿಸಲಾಗುತ್ತಿದೆ. ನಮ್ಮ ಮಲ್ಲೇಶ್ವರದ ವಿದ್ಯಾರ್ಥಿಗಳಿಗೆ ಸ್ಯಾಟಲೈಟ್ ತಯಾರಿಸುವ ಅವಕಾಶ ಕಲ್ಪಿಸಲು ಕ್ರಮ ವಹಿಸಲಾಗುತ್ತಿದೆ. pic.twitter.com/qMoxCJh3VV
ದೇಶದಲ್ಲಿ ಮೂರೂವರೆ ದಶಕಗಳ ನಂತರ ಹೊಸ ಶಿಕ್ಷಣ ನೀತಿ ಜಾರಿಯಾಗಿದೆ. ಕಲೆ, ವಿಜ್ಞಾನ ಮತ್ತು ವಾಣಿಜ್ಯ ಶಿಕ್ಷಣ ಕ್ರಮಗಳೇನೇ ಇರಲಿ, ಗುಣಮಟ್ಟದ ಬೋಧನೆ ಮುಖ್ಯವಾಗಿದೆ. ಇದರ ಜತೆಗೆ ಗಣಿತದ ಬೋಧನೆ ಕೂಡ ಅತ್ಯುತ್ತಮವಾಗಿ ಇರಬೇಕು. ಅದರಲ್ಲೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವೇ ಮಾದರಿಯಾಗಿರಬೇಕು. ಭಾರತದಲ್ಲಿ ಅತ್ಯುತ್ತಮ ಶಿಕ್ಷಣ ಪಡೆದುಕೊಂಡವರೇ ಇವತ್ತು ಇಡೀ ಅಮೆರಿಕದ ಬೆನ್ನೆಲುಬಾಗಿದ್ದಾರೆ ಎಂದು ಅವರು ಹೇಳಿದರು.
ಮುಂದುವರಿದ ದೇಶಗಳಲ್ಲಿ ಅಂಕಗಳಿಗೆ ಯಾವ ಬೆಲೆಯೂ ಇಲ್ಲ. ಅಲ್ಲಿ ಒಂದು ಮಗು ಶಾಲೆಗೆ ಬಂದ ಕೂಡಲೇ ಅದನ್ನು ದೇಶದ ಆಸ್ತಿ ಎಂದು ಪರಿಗಣಿಸುತ್ತಾರೆ. ನಮ್ಮಲ್ಲೂ ಇಂತಹ ಪ್ರಜ್ಞೆ ಬರಬೇಕಾಗಿದೆ. ದೇಶವನ್ನು ಕಟ್ಟುವುದೆಂದರೆ ಶೇ.95ರಷ್ಟು ಗಮನ ನಮ್ಮ ಮಕ್ಕಳ ಪರಿಪೂರ್ಣ ವ್ಯಕ್ತಿತ್ವದ ಕಡೆಗೆ ಇರಬೇಕು. ಎನ್ಇಪಿ ಇದನ್ನೆಲ್ಲ ಸಾಕಾರಗೊಳಿಸಲಿದೆ ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಪ್ರೌಢ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾರಾಯಣ, ಬಿಇಒಗಳಾದ ಉಮಾದೇವಿ, ಜಯಪ್ರಕಾಶ್, ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.
*ಚಿತ್ರಶೀರ್ಷಿಕೆ: ನಗರದ ವೈಯಾಲಿಕಾವಲ್ ನಲ್ಲಿ ಬೆಂಗಳೂರು ಉತ್ತರ ವಲಯದ ಪ್ರೌಢಶಾಲಾ ಸಹ ಶಿಕ್ಷಕರ ಸಂಘವು ಏರ್ಪಡಿಸಿದ್ದ ಕಾರ್ಯಕ್ರಮವನ್ನು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಉದ್ಘಾಟಿಸಿದರು. ಜತೆಯಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಉಪನಿರ್ದೇಶಕ ನಾರಾಯಣ, ಬಿಇಒಗಳಾದ ಉಮಾದೇವಿ, ಜಯಪ್ರಕಾಶ್ ಮುಂತಾದವರು ಇದ್ದರು.