ಬೆಂಗಳೂರು: ನಗರದ ಬನಶಂಕರಿ ಪ್ರದೇಶದಲ್ಲಿರುವ ಪಿಇಎಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿಯನ್ನು ‘ಟೆರರಿಸ್ಟ್’ ಎಂದು ಕರೆದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿವಾದ ತಲೆದೋರಿದ್ದು, ಈ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ತರಗತಿ ವೇಳೆ ಸುಮಾರು 60 ವಿದ್ಯಾರ್ಥಿಗಳ ಎದುರು ಪ್ರಾಧ್ಯಾಪಕ ಡಾ. ಮುರಳಿಧರ ದೇಶ್ಪಾಂಡೆ ಅವರು ಅಸಭ್ಯ ಪದಗಳನ್ನು ಬಳಸಿ, ಒಬ್ಬ ಅಲ್ಪಸಂಖ್ಯಾತ ವಿದ್ಯಾರ್ಥಿಯನ್ನು ಗುರಿಯಾಗಿಸಿಕೊಂಡು ‘ಟೆರರಿಸ್ಟ್’ ಎಂದು ಕರೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಎರಡು ದಿನಗಳ ಹಿಂದೆ ನಡೆದಿದ್ದು, ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತರಗತಿಯಲ್ಲಿ ವಿದ್ಯಾರ್ಥಿಗಳ ಗಲಾಟೆಯಿಂದ ಬೇಸತ್ತ ಪ್ರಾಧ್ಯಾಪಕರು ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎನ್ನಲಾಗುತ್ತಿದೆಯಾದರೂ, ವಿದ್ಯಾರ್ಥಿಯನ್ನು ಟಾರ್ಗೆಟ್ ಮಾಡಿ ಈ ರೀತಿಯ ಪದಗಳನ್ನು ಬಳಸಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ.
Controversy erupts in #Bengaluru. @NSUIKarnataka lodged a police complaint against an adjunct professor for allegedly calling a student a terrorist when class was in session. Dr Muralidhar Deshpande was suspended by PES University on VC's orders. @BlrCityPolice @seemantsingh96 pic.twitter.com/QoxafVEDeI
— Prajwal D'Souza (@prajwaldza) March 28, 2026
ಈ ಸಂಬಂಧ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್ಎಸ್ಯುಐ) ವಿದ್ಯಾರ್ಥಿ ಸಂಘಟನೆ ಪೊಲೀಸ್ ಠಾಣೆಯಲ್ಲಿ ಹಾಗೂ ಕಾಲೇಜು ಆಡಳಿತದ ಗಮನಕ್ಕೂ ದೂರು ನೀಡಿದೆ. ವಿದ್ಯಾರ್ಥಿಯೂ ಸಹ ಈ ಕುರಿತು ಅಧಿಕೃತವಾಗಿ ದೂರು ಸಲ್ಲಿಸಿದ್ದಾನೆ ಎಂದು ತಿಳಿದುಬಂದಿದೆ.
ದೂರು ದಾಖಲಾಗುತ್ತಿದ್ದಂತೆ ಕಾಲೇಜು ಆಡಳಿತವು ಪ್ರಾಧ್ಯಾಪಕರನ್ನು ಅಮಾನತು ಮಾಡಿ, ಪ್ರಕರಣದ ಕುರಿತು ಆಂತರಿಕ ತನಿಖೆ ಆರಂಭಿಸಿರುವುದಾಗಿ ತಿಳಿಸಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೂಡ ಮಾಹಿತಿ ಕಲೆಹಾಕುತ್ತಿದ್ದು, ನಿಖರ ಕಾರಣ ಮತ್ತು ಹಿನ್ನೆಲೆ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಘಟನೆ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ನಡೆ-ನುಡಿ, ವಿದ್ಯಾರ್ಥಿಗಳೊಂದಿಗೆ ವರ್ತನೆ ಮತ್ತು ಸಮಾನತೆಯ ವಾತಾವರಣದ ಅಗತ್ಯತೆ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.
