ಬೆಂಗಳೂರು: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಯಾವುದೇ ಸಡಿಲಿಕೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಬೆಂಗಳೂರು ಕೇಂದ್ರ ನಗರ ನಿಗಮದ ಆಯುಕ್ತ ರಾಜೇಂದ್ರ ಚೋಳನ್, ನೋಟಿಸ್ ನೀಡಿದರೂ ತೆರಿಗೆ ಪಾವತಿಸದ ಆಸ್ತಿಗಳಿಗೆ ಬೀಗ ಹಾಕುವಂತೆ ಆದೇಶಿಸಿದ್ದಾರೆ.
ಬಿಎಂಆರ್ಡಿಎ ಕಚೇರಿಯಲ್ಲಿ ನಡೆದ ವಿವಿಧ ವಿಭಾಗಗಳ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ನಗರ ನಿಗಮ ವ್ಯಾಪ್ತಿಯಲ್ಲಿನ ಎಲ್ಲಾ ತೆರಿಗೆ ಬಾಕಿದಾರರ ಪಟ್ಟಿಯನ್ನು ತಯಾರಿಸಿ, ಕಾನೂನುಬದ್ಧ ನೋಟಿಸ್ ಜಾರಿಗೊಳಿಸಿ, ಬಾಕಿ ತೆರಿಗೆ ಪಾವತಿಯಾಗದಿದ್ದಲ್ಲಿ ಆಸ್ತಿ ಲಾಕಿಂಗ್ ಕ್ರಮ ಕೈಗೊಳ್ಳುವಂತೆ ಆದಾಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.
“ನಗರ ಆಡಳಿತ ಸುಸೂತ್ರವಾಗಿ ನಡೆಯಲು ತೆರಿಗೆ ಸಂಗ್ರಹ ಅತ್ಯಂತ ಅವಶ್ಯ. ಉದ್ದೇಶಪೂರ್ವಕವಾಗಿ ತೆರಿಗೆ ತಪ್ಪಿಸುವವರ ವಿರುದ್ಧ ಕಠಿಣ ಕ್ರಮ ಅನಿವಾರ್ಯ,” ಎಂದು ಆಯುಕ್ತರು ಎಚ್ಚರಿಸಿದರು.
ಇಂಜಿನಿಯರ್ಗಳಿಗೆ ಜವಾಬ್ದಾರಿ ಕಾರ್ಯಶೈಲಿ
ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದ ಆಯುಕ್ತರು, ಪ್ರತಿ ವಾರ ಸ್ವಯಂ ನಿರ್ಧರಿತ ಕೆಲಸದ ಗುರಿಗಳನ್ನು ನಿಗದಿಪಡಿಸಿ, ಅವುಗಳ ಅನುಷ್ಠಾನಕ್ಕೆ ಸ್ಪಷ್ಟ ಕಾರ್ಯಯೋಜನೆ ರೂಪಿಸಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.
ನವೀನ ಚಿಂತನೆ, ಸಮಯಬದ್ಧ ನಿರ್ವಹಣೆ ಮತ್ತು ಪ್ರೋಆಕ್ಟಿವ್ ಕಾರ್ಯಶೈಲಿಯೇ ನಗರಾಭಿವೃದ್ಧಿಗೆ ಅವಶ್ಯ ಎಂದು ಅವರು ಹೇಳಿದರು.
ಆಯುಕ್ತರ ಕುರ್ಚಿಯಲ್ಲಿ ನಿವೃತ್ತ ಪೌರಕಾರ್ಮಿಕರು
ಇದೇ ಸಂದರ್ಭದಲ್ಲಿ, ಡಿಸೆಂಬರ್ 2025ರಲ್ಲಿ ನಿವೃತ್ತರಾದ ಅಧಿಕಾರಿಗಳು ಹಾಗೂ ಪೌರಕಾರ್ಮಿಕರಿಗೆ ಆಯುಕ್ತರ ನೇತೃತ್ವದಲ್ಲಿ ಗೌರವ ಸಮಾರಂಭ ಹಾಗೂ ವಿದಾಯ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ನಗರದ ಸ್ವಚ್ಛತೆಯಲ್ಲಿ ಪೌರಕಾರ್ಮಿಕರ ಪಾತ್ರ ಅಮೂಲ್ಯ ಎಂದು ಶ್ಲಾಘಿಸಿದ ಆಯುಕ್ತರು, ತಮ್ಮದೇ ಕುರ್ಚಿಯಲ್ಲಿ ನಿವೃತ್ತ ಪೌರಕಾರ್ಮಿಕರನ್ನು ಕುಳ್ಳಿರಿಸಿ ಗೌರವ ಸಲ್ಲಿಸಿದರು. ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಶುಭಾಶಯ ಕೋರಿದರು.
ಈ ಕಾರ್ಯಕ್ರಮದಲ್ಲಿ ಉಪ ಆಯುಕ್ತ (ಆದಾಯ) ರಾಜು, ಅತಿರಿಕ್ತ ಆಯುಕ್ತ (ಅಭಿವೃದ್ಧಿ) ದಲ್ಜಿತ್ ಕುಮಾರ್, ಸಂಯುಕ್ತ ಆಯುಕ್ತರು ಕೆ. ರಂಗನಾಥ್, ಹೇಮಂತ್ ಶರಣ್, ಮುಖ್ಯ ಇಂಜಿನಿಯರ್ ವಿಜಯಕುಮಾರ್ ಹರಿದಾಸ್, ಸೇರಿದಂತೆ ಅಧೀಕ್ಷಕ, ಕಾರ್ಯನಿರ್ವಾಹಕ ಇಂಜಿನಿಯರ್ಗಳು ಹಾಗೂ ಆದಾಯಾಧಿಕಾರಿಗಳು ಭಾಗವಹಿಸಿದ್ದರು.
