Home ಬೆಂಗಳೂರು ನಗರ ಅಮೃತ ಕಾಲದಲ್ಲಿ ರಾಷ್ಟ್ರದ ಪ್ರಗತಿಗೆ ಭದ್ರ ಬುನಾದಿ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಅಮೃತ ಕಾಲದಲ್ಲಿ ರಾಷ್ಟ್ರದ ಪ್ರಗತಿಗೆ ಭದ್ರ ಬುನಾದಿ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

31
0

ಬೆಂಗಳೂರು:

ಅಮೃತ ಕಾಲದಲ್ಲಿ ರಾಷ್ಟ್ರದ ಪ್ರಗತಿಗೆ ಭದ್ರ ಬುನಾದಿ ಹಾಕುವ ಎಲ್ಲ ಅಂಶಗಳಿದ್ದು, ಸಮಗ್ರ ಅಭಿವೃದ್ಧಿಯ ದೃಷ್ಟಿಕೋನದ ಪ್ರಗತಿಪರ ಬಜೆಟ್ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕೇಂದ್ರ ಬಜೆಟ್ ಗೆ ಸಂಬಂಧಿಸಿದಂತೆ ಪತ್ರಿಕಾ ಗೋಷ್ಠಿ ನಡೆಸಿದರು. ಪ್ರಧಾನ ಮಂತ್ರಿಯವರು ಭಾರತವನ್ನು ಅತ್ಯಂತ ವೇಗವಾಗಿ ಪ್ರಗತಿಯತ್ತ ಒಯ್ಯುವ ಗುರಿಯನ್ನು ಹೊಂದಿದ್ದಾರೆ. ಸ್ವಚ್ಛಭಾರತ ದಿಂದ ಹಿಡಿದು ಆರ್ಥಿಕ ಸುಧಾರಣೆಗಾಗಿ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.ಕೇಂದ್ರ ಬಜೆಟ್ ನಲ್ಲಿನ ಎಲ್ಲ ಯೋಜನೆಗಳಿಂದ ಕರ್ನಾಟಕದ ಪಾಲು ಬರಲಿದೆ. ಎಂಎಸ್ ಎಂ ಇ, ಜಲಜೀವನ ಮಿಷನ್, ಗ್ರಾಮೀಣಾಭಿವೃದ್ಧಿ,ಪ್ರಧಾನ ಮಂತ್ರಿ ಆವಾಸ ಯೋಜನೆ, ನಗರಮೂಲ ಸೌಕರ್ಯ ಸೇರಿದಂತೆ ಹಲವು ಯೋಜನೆಗಳಿಂದ ಕರ್ನಾಟಕಕ್ಕೆ ಪಾಲು ದೊರೆಯಲಿದೆ. ಕರ್ನಾಟಕ ಪ್ರಗತಿಪರ ರಾಜ್ಯವಾಗಿದ್ದು, ಮೂಲಭೂತಸೌಕರ್ಯಕ್ಕೆ ಮಹತ್ವ ನೀಡಲಾಗುತ್ತಿದೆ ಎಂದರು.

ಆರೋಗ್ಯಕರ ಜಿಡಿಪಿ :
ಇಂದು ಭಾರತ ದೇಶದ ಆರ್ಥಿಕ ಸ್ಥಿತಿಯನ್ನು ವಿಶ್ವದ ಇತರ ಪ್ರಗತಿ ಹೊಂದಿರುವ ದೇಶಗಳಿಗೆ ಹೋಲಿಸಿದಾಗ ನಮ್ಮ ದೇಶ ಪ್ರಗತಿಯಾಗುತ್ತಿರುವುದು ಕಂಡುಬರುತ್ತದೆ. ನಮ್ಮ ಬೆಳವಣಿಗೆಪ್ರಮಾಣ 6ರಿಂದ 6.8 ರಷ್ಟಿದೆ. ಬೇರೆ ಅಭಿವೃದ್ಧಿ ಹೊಂದಿದ ದೇಶಗಳ ಪ್ರಗತಿ ಕೇವಲ 2% ರಷ್ಟಿದೆ. ದೇಶದ ಆರ್ಥಕತೆಗೆ ಭದ್ರ ಬುನಾದಿಯಿದೆ. ಕೃಷಿ, ಸೇವಾ ಹಾಗೂ ಉತ್ಪದನಾ ವಲಯದಲ್ಲಿ ಅಭಿವೃದ್ಧಿಯನ್ನು ಕಾಣುತ್ತಿದ್ದು, ಒಟ್ಟಾರೆ ಜಿಡಿಪಿ ಆರೋಗ್ಯಕರವಾಗಿದೆ ಈ ಬಜೆಟ್ನ ಪರಿಣಾಮಗಳ ಬಗ್ಗೆ ತಿಳಿಯುವುದು ಮುಖ್ಯ. ಈಗಿರುವ ಅಭಿವೃದ್ಧಿಗೆ ಇನ್ನಷ್ಟು ಬಲ ತುಂಬುವ ಮೂಲಭೂತ ಬದಲಾವಣೆಗಳು ಆಗಿವೆ ಎಂದರು.

ಸಕಾರಾತ್ಮಕ ಅಭಿವೃದ್ಧಿ :
ಕೇಂದ್ರದ ಬಜೆಟ್ ನಲ್ಲಿ ಕ್ಯಾಪಿಟಲ್ ಔಟ್ ಲೇ 10 ಲಕ್ಷ‌ ಕೋಟಿ ಹೆಚ್ಚಳವಾಗಿದೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ನೋಡಿದಾಗ 25000 ದಷ್ಟು ಹೆಚ್ಚಳವಾಗುತ್ತಿತ್ತು. ಈಗಿನ ಹೆಚ್ಚಳ ಮಾದರಿ ಬದಲಾವಣೆಯಾಗಿದ್ದು, ದೇಶದ ಅಭಿವೃದ್ಧಿಯ ವೇಗವನ್ನೂ ಹೆಚ್ಚಿಸಲಿದೆ. ಈ ಹೆಚ್ಚಳದಿಂದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯೂ ಸಾಧ್ಯವಾಗುತ್ತದೆ.ಇದಲ್ಲದೇ ಸಾಮಾಜಿಕ ಮೂಲಸೌಕರ್ಯಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದ್ದು, ಬರುವಂತ ದಿನಗಳಲ್ಲಿ ಸಕಾರಾತ್ಮಕ ಅಭಿವೃದ್ಧಿ ನೋಡಲು ಸಾಧ್ಯವಾಗುತ್ತದೆ ಎಂದರು.

ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ :
ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಬಜೆಟ್ ನಲ್ಲಿ ಒತ್ತು ನೀಡಲಾಗಿದ್ದು, ಹಳ್ಳಿಗಾಡಿನಲ್ಲಿ ಮನೆಗಳ ನಿರ್ಮಾಣಕ್ಕೆ ಹೆಚ್ಚಿನ ಪ್ರಮಾಣದ ಅನುದಾನ, ಗ್ರಾಮೀಣ ಮನೆಗಳಿಗೆ ಕುಡಿಯುವ ನೀರು ಯೋಜನೆಗೆ 70 ಸಾವಿರ ಕೋಟಿ ರೂ. ಅನುದಾನ ಇರಿಸಲಾಗಿದೆ. 2024-25ರೊಳಗೆ ಎಲ್ಲ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಗುರಿ ಸಾಧಿಸಲು ಹಾಗೂ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಅನುದಾನ ಹೆಚ್ಚಳ ಮಾಡಿದ್ದಾರೆ‌. ಪ್ರತಿಬಾರಿ ಸಣ್ಣ ಉದ್ಯಮಗಳಿಗೆ ಮಹತ್ವ ಕೊಡುತ್ತಿಲ್ಲ ಎಂಬ ಆರೋಪವಿತ್ತು. ಎಂಎಸ್ ಎಂ ಇಗಳಿಗೆ ಮಿತಿಗಳನ್ನು ಹೆಚ್ಚಿಸಿದ್ದಾರೆ. 3 ಕೋಟಿ ರೂ ವರೆಗಿನ ಉದ್ಯಮಗಳಿಗೆ ತೆರಿಗೆ ಲಾಭವನ್ನು ನೀಡಿದ್ದಾರೆ. ಸಣ್ಣ ಉದ್ಯಮಗಳಿಗೆ 2 ಲಕ್ಷ ಕೋಟಿಯಷ್ಟು ಕೊಲಾಟರಲ್ ಗ್ಯಾರಂಟಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಸಾಲದ ಬಡ್ಡಿಯನ್ನು ಶೇ. 1 ರಷ್ಟು ಕಡಿಮೆ ಮಾಡಲಾಗಿದೆ. ಈ ಎಲ್ಲ ಕ್ರಮಗಳಿಂದ ಸಣ್ಣ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡಲಾಗಿದೆ ಎಂದರು.

ಕೃಷಿಗೆ 1 ಲಕ್ಷ ಕೋಟಿ ಗಿಂತ ಹೆಚ್ಚಿನ ಅನುದಾನ :
ಆರೋಗ್ಯ ಮತ್ತು ಶಿಕ್ಷಣದ ಅನುದಾನವನ್ನು ಹೆಚ್ಚಿಸಲಾಗಿದೆ. ಮಹಿಳೆಯರ ಸ್ವಸಹಾಯ ಗುಂಪುಗಳಿಗೆ ಆರ್ಥಿಕ ಸಹಾಯ ನೀಡಿ, ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಯೋಜನೆಯ ಮೂಲಕ ಮಹಿಳೆಯರ ಸಾಮರ್ಥ್ಯ ಉಪಯೊಗ ಮಾಡಿಕೊಳ್ಳುವ ಕೆಲಸವನ್ನು ಮಾಡಿದ್ದಾರೆ. ಉದ್ಯೋಗ ಹೆಚ್ಚಳ ಹಾಗೂ ಕೌಶಲ್ಯ ಅಭಿವೃದ್ದಿಗೆ ಆದ್ಯತೆ ನೀಡಿದ್ದಾರೆ. ಕೃಷಿಗೆ 1 ಲಕ್ಷ ಕೋಟಿ ಗಿಂತ ಹೆಚ್ಚಿನ ಅನುದಾನ ನೀಡಿ ಕೃಷಿಗೆ ಆದ್ಯತೆ ನೀಡಲಾಗಿದೆ ಎಂದರು.

ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. :
ಭದ್ರಾ ಮೇಲ್ದಂಡೆ ಯೋಜನೆ 1964 ರಿಂದಲೇ ಬೇಡಿಕೆಯಿದ್ದರೂ, 2008 ರ ವರೆಗೂ ಯಾವುದೇ ನಿರ್ಧಿಷ್ಟ ಕ್ರಮ ಆಗಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಈ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಪಕ್ಷದವರು ಈ ಯೋಜನೆಗೆ ಈ ವರ್ಷ ಹಣ ಬರುವುದಿಲ್ಲ ಎನ್ನುತ್ತಾರೆ. ಆಯವ್ಯಯ ಇರುವುದೇ 2023-24 ನೇ ಸಾಲಿಗೆ. ಮೊದಲು 16 ಟಿಎಂಸಿ ಇದ್ದದ್ದು, ಈಗ 23 ಟಿಎಂಸಿ ನೀರು ಹೆಚ್ಚಿಗೆ ಮಾಡಿದ್ದರಿಂದ ಯೋಜನೆಯ ವೆಚ್ಚವೂ ಹೆಚ್ಚಾಗಿದೆ. ರಾಷ್ಟ್ರೀಯ ಯೋಜನೆ ಘೋಷಣೆಯಾಗುವುದಕ್ಕೆ ಜಲಸಂಪನ್ಮೂಲ ಇಲಾಖೆ, ಸಿಡಬ್ಲ್ಯೂಸಿ, ಆರ್ಥಿಕ ಇಲಾಖೆಯ ಕ್ಲಿಯರೆನ್ಸ್ ದೊರೆತು, ಸಚಿವಸಂಪುಟದಲ್ಲಿಯೂ ಅನುಮೋದನೆ ಪಡೆದು, ಬಜೆಟ್ ನಲ್ಲಿಯೂ ಘೋಷಣೆಯಾಗಿರುವುದುದರಿಂದ ರಾಷ್ಟ್ರೀಯ ಯೋಜನೆ ಒಪ್ಪಿಗೆಯನ್ನು ಕೊಟ್ಟಂತೆಯೇ ಎಂದು ತಿಳಿಸಿದರು.

ಮೊದಲು ಎಐಬಿಪಿ ಕಾರ್ಯಕ್ರಮದಂತೆ ನೀರಾವರಿ ಯೋಜನೆಗಳ ಪ್ರಗತಿಯಂತೆ ಹಣ ಬಿಡುಗಡೆಯಾಗುತ್ತಿದ್ದು, ಯುಪಿಎ ಸರ್ಕಾರ 2012ರಲ್ಲಿ ಅನುದಾನ ಖರ್ಚು ಮಾಡಿದ ಮೇಲೆಯೇ ಹೆಚ್ಚಿನ ಅನುದಾನ ನೀಡುವ ನಿರ್ಬಂಧ ಹಾಕಿದ್ದರ ಕಾರಣ, ಎಐಬಿಪಿಯಲ್ಲಿ ಹಲವಾರು ಕರ್ನಾಟಕ ಯೋಜನೆಗಳು ಅನುದಾನವೇ ಬರಲಿಲ್ಲ. ನಂತರ ಎನ್ ಡಿ ಎ ಸರ್ಕಾರ ಬಂದ ನಂತರ ಈ ಪರಿಸ್ಥಿತಿಯನ್ನು ಬದಲಾಯಿಸಿ, ಯೋಜನೆಗಳಿಗೆ ನೇರವಾಗಿ ಅನುದಾನ ಬಿಡುಗಡೆ ಮಾಡುವ ವ್ಯವಸ್ಥೆಯಾಗಿದೆ. ಆದ್ದರಿಂದ ಕೇಂದ್ರದಿಂದ ಯಾವುದೇ ಕರಾರಿಲ್ಲದೇ 5300 ಕೋಟಿ ರೂ. ಅನುದಾನ ನೀಡಿದೆ. ಈಗಾಗಲೇ ನಮ್ಮ ಸರ್ಕಾರ 13000 ಕೊಟಿ ವೆಚ್ಚ ಮಾಡಿದೆ.‌ ಮುಂದಿನ‌ ದಿನಗಳಲ್ಲಿ ಕೇಂದ್ರದಿಂದ ಬರುವ ಹಣ ಬಳಸಿಕೊಳ್ಳಲಾಗುವುದು. ನಂತರದ ಕಾಡಾ ಕೆಲಸಗಳಿಗೆ ಪುನ: ಅನುದಾನವನ್ನು ನೀಡಲಿದ್ದಾರೆ.ರಾಜ್ಯದ ಒಂದೇ ಯೋಜನೆಗೆ ಇಷ್ಟೊಂದು ಹಣ ಬಂದಿರುವುದಕ್ಕೆ ಸಂತೋಷ ಪಡಬೇಕು.‌ ರಾಜ್ಯದ ಯೋಜನೆಗೆ ಇಷ್ಟು ದೊರೆತಿರುವುದಕ್ಕೆ ಪ್ರತಿಪಕ್ಷದವರಿಗೆ ನಿರಾಸೆಯಾಗಿರುವುದಕ್ಕೆ ಈ ರೀತಿಯ ವ್ಯಾಖ್ಯಾನ ಮಾಡುತ್ತಿದ್ದಾರೆ ಎಂದರು.

ಸರ್ವ ಸ್ಪರ್ಶಿ, ಸರ್ವ ವ್ಯಾಪ್ತಿ ಬಜೆಟ್ :
ನಗರ‌ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಘನತ್ಯಾಜ್ಯ ನಿರ್ವಹಣೆಗೆ ವಿಶೇಷ ಅನುದಾನ ನೀಡಿದ್ದು, ಈ ಎಲ್ಲ ಯೋಜನೆಗಳಿಗೆ ರಾಜ್ಯಕ್ಕೆ ಅನುಕೂಲವಾಗಲಿದೆ. ವೈಯಕ್ತಿಕ ಆದಾಯ ತೆರಿಗೆ ವಿಚಾರದಲ್ಲಿಯೂ ವಿನಾಯಿತಿ ನೀಡಿದ್ದರಿಂದ ಆರ್ಥಿಕ ಬೆಳವಣಿಗೆಗೆ ಆದ್ಯತೆ ದೊರೆಯಲಿದೆ. ಜನರ ಬಳಿ ಹೆಚ್ಚು ಹಣವಿದ್ದರೆ ಖರೀದಿ ಶಕ್ತಿ ಹೆಚ್ಚುತ್ತದೆ., ಸರ್ವ ಸ್ಪರ್ಶಿ, ಸರ್ವ ವ್ಯಾಪ್ತಿ ಆಗಿರುವ ಬಜೆಟ್ ಆಗಿದ್ದು, ಎಲ್ಲರ ಬದುಕಿಗೂ ಸಹಾಯ ಮಾಡುವಂತಹ ಬಜೆಟ್ ನ್ನು ಕೇಂದ್ರ ಸರ್ಕಾರ ಮಂಡಿಸಿದೆ ಎಂದು ತಿಳಿಸಿದರು.

ಮುಖ್ಯವಾಗಿರುವ ಯೋಜನೆಗಳಿಗೆ ಬಜೆಟ್ ಹೆಚ್ಚಾಗಿದೆ. ಕೃಷಿ ಆರ್ಥಿಕತೆ ಹೆಚ್ಚಾಗಲಿದ್ದು, ರಾಜ್ಯಕ್ಕೆ ಇದರ ಲಾಭ ದೊರೆಯಲಿದೆ. ಗ್ರಾಮೀಣ ಭಾಗದ ಅಭಿವೃದ್ಧಿ ಗೆ ಆದ್ಯತೆ ನೀಡಲಾಗಿದೆ.ಯುವಕರಿಗೆ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ರೈಲ್ವೆ ಯೋಜನೆಗಳಿಗೆ 1 ಲಕ್ಷ ಕೋಟಿ ಹೆಚ್ಚು ಮೀಸಲಿಟ್ಟಿದ್ದು, ರಾಜ್ಯದ ಯೋಜನೆಗಳಿಗೆ ಅನುಕೂಲವಾಗಲಿದೆ ಎಂದರು.

ನರೇಗಾ ಕ್ಕೆ ದೊಡ್ಡ ಪ್ರಮಾಣದ ಮೊತ್ತವೇನೂ ಕಡಿಮೆಯಾಗಿಲ್ಲ :

ಎಲ್ಲಾ ಯೋಜನೆಗಳಿಗೂ ಒಂದು ಕಾಲಾವಧಿ ಇರುತ್ತೆ. ಸರ್ವಶಿಕ್ಷಣ ಅಭಿಯಾನಕ್ಕೆ 10 ವರ್ಷಗಳ ಕಾಲಮಿತಿಯನ್ನು ನಿಗದಿ ಮಾಡಲಾಗಿತ್ತು. ಪ್ರಾಥಮಿಕ ಶಿಕ್ಷಣಕ್ಕೆ 10 ವರ್ಷವಿತ್ತು ನಂತರ ಮಾಧ್ಯಮಿಕ ಶಿಕ್ಷಣಕ್ಕೆ ನೀಡಬೇಕು ಎಂದಿತ್ತು. ಇದನ್ನು ಯೋಜನಾ ಆಯೋಗಗಳು ಮಾಡುತ್ತವೆ. ಒತ್ತಾಯದ ನಂತರ 2012 ನೇ ಸಾಲಿನವರೆಗೆ ವಿಸ್ತಾರಣೆಯಾಯಿತು. ಹೀಗೆ ಎಲ್ಲದ್ದಕ್ಕೂ ಕಾಲಮಿತಿ ಇರುತ್ತದೆ. ನರೇಗಾ ಕ್ಕೆ ದೊಡ್ಡ ಪ್ರಮಾಣದ ಮೊತ್ತವೇನೂ ಕಡಿಮೆಯಾಗಿಲ್ಲ. ಗ್ರಾಮೀಣ ಮೂಲಸೌಕರ್ಯದಲ್ಲಿ ಈಗಾಗಲೇ ಆಸ್ತಿ ಸೃಜನೆಯಾಗಿದೆ. ಆಸ್ತಿ ಸೈಜನೆಗೆ ಯಾವುದೇ ತೊಂದರೆಯಾಗುವುದಿಲ್ಲ. ಹಲವಾರು ಯೋಜನೆಗಳನ್ನು ನರೇಗಾದೊಂದಿಗೆ ಸೇರಿಸಿ ಮಾಡುತ್ತಿರುವುದರಿಂದಯಾವುದೇ ರೀತಿಯ ಗ್ರಾಮೀಣ ಆಸ್ತಿ ಸೃಜನೆಗೆ ತೊಂದರೆಯಾಗುವುದಿಲ್ಲವೆಂಬ ವಿಶ್ವಾವಿದೆ ಎಂದರು.

ಮೆಟ್ರೋ 2 ನೇ ಹಂತ 2024 ಕ್ಕೆ ಪೂರ್ಣ :
ಮೆಟ್ರೋ 2 ನೇ ಹಂತದ ಕಾಮಗಾರಿಗೆ 23 ಕೋಟಿ ರೂ.ಗಳ ಅನುದಾನ ದೊರೆತಿದೆ. ವಿಸ್ತರಣೆ ಮಾಡುವುದು 4 ನೇ ಹಂತದ ವ್ಯಾಪ್ತಿಗೆ ಬರಲಿದೆ. ನಂತರ ಡಿಪಿಆರ್ ಆಗಬೇಕು. 2024 ಕ್ಕೆ 2 ನೇ ಹಂತದ ಎಲ್ಲಾ ಕಾಮಗಾರಿಗಳೂ ಮುಗಿಯಲಿವೆ. ನಂತರ 3 ನೇ ಹಂತ ಕೈಗೆತ್ತಿಕೊಳ್ಳಲಾಗುವುದು. ನಂತರ 4 ನೇ ಹಂತದ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು. ನಂತರ ಅನುದಾನ ಬರಲಿದೆ. 3ನೇ ಹಂತದಲ್ಲಿ ಸೇರ್ಪಡೆಯಾಗಿರುವ ಬೆಂಗಳೂರಿಗೆ ಗ್ರಾಮೀಣ ಪ್ರದೇಶಗಳಿಗೆ ಹಾಗೂ 4 ನೇ ಹಂತದಲ್ಲಿ ಮಾಗಡಿ ಮುಂತಾದ ಊರುಗಳಿಗೆ ಮೆಟ್ರೋ ವಿಸ್ತರಣೆ ಮಾಡಲಾಗುವುದು ಎಂದರು.

ಮೇಕೆದಾಟು ಯೋಜನೆ: ಡಿಪಿಆರ್ ಅನುಮತಿ
ಮೇಕೆದಾಟು ಯೋಜನೆ ಕುರಿತು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮೇಕೆದಾಟು ಯೋಜನೆ ಪ್ರಾರಂಭ ಮಾಡುವಾಗಲೇ ಸರ್ಕಾರ ತಪ್ಪು ಮಾಡಿದೆ. ಹೀಗಾಗಿ ಅದು ಅಂತರರಾಜ್ಯ ವಿವಾದದಲಿ ಸಿಕ್ಕಿಹಾಕಿಕೊಂಡಿದೆ. ಅಂದಿನ ಸರ್ಕಾರ ಮೇಕೆದಾಟು ವಿವಾದವೇ ಇಲ್ಲ ಎಂದರು ಆಗ. ಈಗ ಸುಪ್ರೀಂಕೋರ್ಟಿನಲ್ಲಿ ಸಿಕ್ಕಿಕೊಂಡಿದೆ. ಸುಪ್ರೀಂಕೋರ್ಟ್ ನಿಂದ ಅಕಸ್ಮಾತ್ ಅನುಮತಿ ಬಂದರೆ ಹಣಕಾಸಿನ ವ್ಯವಸ್ಥೆ ಬಜೆಟ್ ನಲ್ಲಿ ಇರಲಿ ಎಂದು ಅವಕಾಶ ಮಾಡಿಕೊಳ್ಳಲಾಗಿದೆ. ಅನುಮತಿ ಬಂದರೆ ನಾವು ಅನುದಾನ ಬಳಕೆ ಮಾಡಿಕೊಳ್ಳುತ್ತೇವೆ ಡಿಪಿಆರ್ ಅನುಮತಿ ಇಲ್ಲದೇ ಏನೂ ಮಾಡಲು ಸಾಧ್ಯವಿಲ್ಲ. ಡಿಪಿಆರ್ ಅನುಮತಿ ದೊರೆತರೆ, ಆದಷ್ಟೂ ಬೇಗನೆ ಕೆಲಸ ಪ್ರಾರಂಭವಾಗುತ್ತದೆ ಎಂದರು.

LEAVE A REPLY

Please enter your comment!
Please enter your name here