Home ಬೆಂಗಳೂರು ನಗರ ಹೈಕೋರ್ಟ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಪಿಎಸ್‌ಐ ಟಿಪ್ಪು ಸುಲ್ತಾನ್‌ ನಾಯಕವಾಡಿ ಅಮಾನತು

ಹೈಕೋರ್ಟ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಪಿಎಸ್‌ಐ ಟಿಪ್ಪು ಸುಲ್ತಾನ್‌ ನಾಯಕವಾಡಿ ಅಮಾನತು

343
0
PSI Tipu Sultan Nayakwadi suspended for assaulting High Court staff

ಬೆಂಗಳೂರು:

ಹೈಕೋರ್ಟ್‌ನ ಸಿಬ್ಬಂದಿ ಮೇಲೆ ಹೈಕೋರ್ಟ್‌ ಆವರಣದಲ್ಲೇ ಇರುವ ಭದ್ರತಾ ಪೊಲೀಸ್‌ ಠಾಣೆಯಲ್ಲಿ ಗಂಭೀರ ಹಲ್ಲೆ ನಡೆಸಿದ ಆರೋಪದಡಿ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಟಿಪ್ಪು ಸುಲ್ತಾನ್‌ ನಾಯಕವಾಡಿ ಅವರನ್ನು ಅಮಾನತು ಮಾಡಿ ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಆದೇಶ ಹೊರಡಿಸಿದ್ದಾರೆ.

ಹಲ್ಲೆಗೆ ಸಹಕರಿಸಿದ ಆರೋಪದಡಿ ಕಾನ್‌ಸ್ಟೆಬಲ್‌ಗಳಾದ ಎಂ.ಡಿ. ವೆಂಕಟೇಶ್, ಸಿದ್ದಣ್ಣ ಕಳಕೂರು ಮತ್ತು ಶಶಿಕುಮಾರ್ ಅವರನ್ನೂ ಹೈಕೋರ್ಟ್‌ ವಿಭಾಗದಿಂದ ಎತ್ತಂಗಡಿ ಮಾಡ ಲಾಗಿದೆ.

ಹೈಕೋರ್ಟ್ ಆವರಣದಲ್ಲಿನ ಮುಖ್ಯ ನ್ಯಾಯಮೂರ್ತಿಗಳ ಕೊಠಡಿ, ಕೋರ್ಟ್‌ ಹಾಲ್‌–1ರ ಕೆಳಗಿರುವ ಹೈಕೋರ್ಟ್ ಭದ್ರತಾ ವಿಭಾಗದ ಪೊಲೀಸ್ ಠಾಣೆಯಲ್ಲಿ ಐವರು ಸಿಬ್ಬಂದಿ ಮೇಲೆ ಮಂಗಳವಾರ ಮಾ.8ರ ಸಂಜೆ ಕೋರ್ಟ್ ಕಲಾಪ ಮುಗಿದ ನಂತರದ ಅವಧಿಯಲ್ಲಿ ಗಂಭೀರವಾಗಿ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ರಾಜ್ಯ ಪ್ರಾಸಿಕ್ಯೂಷನ್‌ ವಿಭಾಗದಲ್ಲಿನ ಕ್ರಿಮಿನಲ್‌ ಪ್ರಕರಣವೊಂದು ಮಾರ್ಚ್‌ 8ರಂದು ವಿಚಾರಣೆಗೆ ನಿಗದಿಯಾಗಿತ್ತು. ಇದರ ಫೈಲ್‌ ನೀಡುವಂತೆ ಎಸ್‌ಪಿಪಿ–2 ವಿ.ಎಸ್‌. ಹೆಗಡೆ ಪ್ರಾಸಿಕ್ಯೂಷನ್‌ ಕಚೇರಿ ಸಿಬ್ಬಂದಿಗೆ ಸೂಚಿಸಿದ್ದರು. ಆದರೆ, — ಫೈಲ್‌ ಇಲ್ಲ — ಎಂದು ಸಿಬ್ಬಂದಿ ತಿಳಿಸಿದ್ದರು. ಹೆಗಡೆ ಬರಿಗೈಯಲ್ಲೇ ಕೋರ್ಟ್‌ ಹಾಲ್‌ಗೆ ತೆರಳಿದ್ದರು. ವಿಚಾರಣೆಗೆ ಬಂದ ಪ್ರಕರಣಕ್ಕೆ ನ್ಯಾಯಪೀಠ ತಡೆ ಆದೇಶ ನೀಡಿತ್ತು.

ಕುಪಿತರಾಗಿ ಕಚೇರಿಗೆ ಬಂದ ಹೆಗಡೆ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಕಡೆಗೆ ಕಚೇರಿಯ ಎಲ್ಲೆಡೆ ಹುಡುಕಿಸಿದಾಗ, ಒಂದು ಬೀರುವಿನ ಹಿಂದೆ ರಿಟ್‌ ಪಿಟಿಷನ್‌ಗಳ ಕಡತದಲ್ಲಿ ಅಗತ್ಯವಿರುವ ಫೈಲ್‌ ಸಿಕ್ಕಿತ್ತು. ‘ಇದು ಹೇಗೆ ಇಲ್ಲಿ ಸೇರಿತು’ ಎಂದು ವಿಚಾರಿಸಿದಾಗ ಸಿಬ್ಬಂದಿ, ‘ನಮಗೆ ಗೊತ್ತಿಲ್ಲ’ ಎಂದು ಹೇಳಿದ್ದರು.

ತಕ್ಷಣವೇ ವಿ.ಎಸ್‌.ಹೆಗಡೆ ಮತ್ತು ಪ್ರಾಸಿಕ್ಯೂಷನ್‌ ವಿಭಾಗದ ಶಾಖಾಧಿಕಾರಿ ಹೈಕೋರ್ಟ್‌ ಭದ್ರತಾ ಪೊಲೀಸರನ್ನು ಕರೆಸಿ, ‘ಫೈಲ್‌ ಹೇಗೆ ಕಾಣೆಯಾಗಿತ್ತು ಎಂಬುದರ ಬಗ್ಗೆ ಇವರನ್ನು ಸ್ವಲ್ಪ ವಿಚಾರಿಸಿ’ ಎಂದು ತಾಕೀತು ಮಾಡಿ ಸಿಬ್ಬಂದಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಈ ಹಿನ್ನೆಲೆಯಲ್ಲಿ ಟಿಪ್ಪು ಸುಲ್ತಾನ್‌, ರಿಟ್‌ ಮತ್ತು ಪ್ರಾಸಿಕ್ಯೂಷನ್‌ ವಿಭಾಗದ ಎಂಟು ಜನರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದರು. ‘ಎಂಟು ಜನರಲ್ಲಿ ಮೂವರು ರಾಜ್ಯ ಸರ್ಕಾರಿ ನೌಕರರು ಎಂಬ ಕಾರಣಕ್ಕೆ ಅವರನ್ನು ವಾಪಸು ಕಳುಹಿಸಿ, ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದ ಉಳಿದವರ ಮೇಲೆ ಗಂಭೀರ ಹಲ್ಲೆ ನಡೆಸಿದ್ದರು’ ಎಂಬುದು ಪ್ರಕರಣದ ಸಾರಾಂಶ.

‘ತಮ್ಮ ವ್ಯಾಪ್ತಿಗೆ ಬಾರದ ವಿಷಯ ದಲ್ಲಿ ಹಸ್ತಕ್ಷೇಪ ನಡೆಸಿದ ಮತ್ತು ಕರ್ತವ್ಯಲೋಪ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಟಿಪ್ಪು ಸುಲ್ತಾನ್‌ ಅವರನ್ನು ವಿಧಾನಸೌಧ ಭದ್ರತಾ ವಿಭಾ ಗದ ಡಿಸಿಪಿ ಅಮಾನತು ಮಾಡಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here