ಬೆಂಗಳೂರು:
ಗ್ರಾಮಸ್ಥರು ವಿವಿಧ ಸೌಲಭ್ಯಗಳಿಗೆ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಹಾಗೂ ಜನರ ಮನೆಬಾಗಿಲಿಗೇ ಬಂದು ಅಹವಾಲು ಸ್ವೀಕರಿಸಿ ಸ್ಥಳದಲ್ಲೇ ಸಮಸ್ಯೆ ಬಗೆಹರಿಸುವ ಸಲುವಾಗಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜೆ ಮಂಜುನಾಥ್ ಹೇಳಿದರು.
ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯ ಹನಿಯೂರು ಗ್ರಾಮದಲ್ಲಿ ಇಂದು ತಮ್ಮ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಗರದಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ಗಡಿ ಗ್ರಾಮವಾದ ಹನಿಯೂರನ್ನು ಗ್ರಾಮ ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಂಡಿದ್ದು, ಗ್ರಾಮದ ಜನರು ಮುಕ್ತಮನಸ್ಸಿನಿಂದ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರ ಪಡೆಯಬಹುದು ಎಂದು ಕೋರಿದರು. ಗ್ರಾಮೀಣ ಭಾಗದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ಒದಗಿಸಬೇಕು ಎಂಬುದೇ ಜಿಲ್ಲಡಳಿತದ ಉದ್ದೇಶ ಎಂದು ಅವರು ತಿಳಿಸಿದರು.
ಈಗಾಗಲೇ ಗ್ರಾಮದಿಂದ ಸ್ವೀಕರಿಸಲಾದ ಅರ್ಜಿ ಅಹವಾಲುಗಳನ್ನು ಪರಿಶೀಲಿಸಿ ಇಂದು ಅರ್ಹರಿಗೆ ಸೌಲಭ್ಯ ವಿತರಣೆ ಮಾಡುವುದರೊಂದಿಗೆ, ಇಂದು ಸ್ವೀಕರಿಸಲಾಗುವ ಅರ್ಜಿಗಳನ್ನು ಇಲ್ಲೇ ವಿಲೆವಾರಿ ಮಾಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಸಂಧ್ಯಾ ಸುರಕ್ಷಾ ಯೋಜನೆ, ಭಾಗ್ಯಲಕ್ಷ್ಮೀ ಬಾಂಡ್, ಪಡಿತರ ಚೀಟಿ, ವಾಸ ದೃಢೀಕರಣ ಪತ್ರ ಸೇರಿದಂತೆ ಕಂದಾಯ ಇಲಾಖೆಯ ವಿವಿಧ ಯೋಜನೆಗಳಡಿ ಸೌಲಭ್ಯಗಳನ್ನು ಇಲ್ಲಿ ನೀಡುವ ಕಾರ್ಯಕ್ರಮ ಇಂದು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಇಂದು ನಡೆಯುವ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿಶ್ವನಾಥ್, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ನ ಅಧ್ಯಕ್ಷರಾದ ಮರಿಸ್ವಾಮಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.