ಬೆಂಗಳೂರು/ಹುಬ್ಬಳ್ಳಿ:
ಭಾರತೀಯ ರೈಲ್ವೆಯಲ್ಲಿನ ವಿವಿಧ ಹುದ್ದೆಗಳಿಗಾಗಿ ರೈಲ್ವೆ ನೇಮಕಾತಿ ಮಂಡಳಿ ಡಿ 15 ರಿಂದ ನಡೆಸಲಿರುವ ಪರೀಕ್ಷೆಗಳಿಗಾಗಿ ನೈರುತ್ಯ ರೈಲ್ವೆಯ ಬೆಂಗಳೂರು ಭಾಗದ 86,000 ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗುವ ನಿರೀಕ್ಷೆ ಇದೆ ಎಂದು ಅಧಿಕೃತ ಪ್ರಕಟಣೆ ಶನಿವಾರ ತಿಳಿಸಿದೆ.
ರೈಲ್ವೆಯು ದೇಶಾದ್ಯಂತ ತನ್ನ 21 ನೇಮಕಾತಿ ಮಂಡಳಿಗಳ (ಆರ್‌ಆರ್‌ಬಿ) ಮೂಲಕ ಡಿ 15 ರಿಂದ ಮೂರು ಹಂತಗಳಲ್ಲಿ ನಡೆಸುತ್ತಿರುವ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ)ಗಳ ಭಾಗ ಇದಾಗಿದೆ. ಸುಮಾರು 1.4 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಲಾಗಿದ್ದು, ದೇಶದ ವಿವಿಧ ನಗರಗಳಲ್ಲಿ 2.44 ಕೋಟಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಒಟ್ಟು ಖಾಲಿ ಇರುವ ಹುದ್ದೆಗಳ ಪೈಕಿ ನೈರುತ್ಯ ರೈಲ್ವೆಯಲ್ಲಿ 2,573 ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
ಕರ್ನಾಟಕದಲ್ಲಿ ಬೆಂಗಳೂರು, ಹುಬ್ಬಳ್ಳಿ, ಮತ್ತು ಮೈಸೂರು ನಗರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಗುಲ್ಬರ್ಗಾ ನಗರದಲ್ಲಿ ಕೇಂದ್ರ ರೈಲ್ವೆಯ ಮುಂಬೈನ ನೇಮಕಾತಿ ಮಂಡಳಿ .ಪರೀಕ್ಷೆಗಳನ್ನು ನಡೆಸಲಿದೆ.
ಬೆಂಗಳೂರಿನ ಐದು,ಹುಬ್ಬಳ್ಳಿ ಮತ್ತು ಮೈಸೂರಿನ ತಲಾ ಒಂದು ಕೇಂದ್ರದಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು.