ಪಡುಬಿದ್ರಿ (ಉಡುಪಿ):
ಪಡುಬಿದ್ರಿ ಸಮೀಪದ ಯಳ್ಳೂರಿನಲ್ಲಿರುವ ಅದಾನಿ-ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್ ಆವರಣದಲ್ಲಿ ಕಟ್ಟಡವನ್ನು ಕಿತ್ತುಹಾಕುವ ಪ್ರಕ್ರಿಯೆ ವೇಳೆ ಕಟ್ಟಡದ ಬೀಮ್ ಕುಸಿದು ಗುತ್ತಿಗೆ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಈ ಘನೆಯಲ್ಲಿ ಇತರ ಮೂವರು ಮಂದಿ ಗಾಯಗೊಂಡಿದ್ದಾರೆ.
ರಾಜಸ್ಥಾನ ರಾಜ್ಯದ ಮುಲಾರಾಮ್ ಸಿಂಗ್ (21) ಮೃತ ವ್ಯಕ್ತಿ. ಗಾಯಗೊಂಡವರು ಪಂಜಾಬ್ ಮೂಲದ ಸುಕ್ವಿಂದರ್ ಸಿಂಗ್ ಮತ್ತು ಬಲ್ಜೀರ್ ಸಿಂಗ್ ಮತ್ತು ರಾಜಸ್ಥಾನದ ರಾಮಚಂದ್ರ ಮೀನಾ.
ಮೂಲಗಳ ಪ್ರಕಾರ ಅದಾನಿ ಪವರ್ ಕಂಪನಿಯು ಇಂಧನ ಗ್ಯಾಸ್ ಡಿಸ್ಮ್ಯಾಂಟ್ಲರ್ (ಸಲ್ಫರ್ ಗ್ಯಾಸ್) ನ ಹಳೆಯ ರಚನೆಯನ್ನು ಕೆಡವುವ ಗುತ್ತಿಗೆಯನ್ನು ಗುತ್ತಿಗೆದಾರನಿಗೆ ನೀಡಿದ್ದು, ಅವರು ಮತ್ತೊಬ್ಬರಿಗೆ ಕಾರ್ಯವನ್ನು ವಹಿಸಿದ್ದರು. ಉಪ ಗುತ್ತಿಗೆದಾರರು ಉತ್ತರ ಭಾರತದಿಂದ ಸುಮಾರು 50 ಜನರನ್ನು ನೇಮಿಸಿಕೊಂಡಿದ್ದರು ಮತ್ತು ಕಳೆದ ಆರು ತಿಂಗಳಿಂದ ಇದನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಲಾಗಿದೆ.
ಶುಕ್ರವಾರ ನಾಲ್ವರು ಕಾರ್ಮಿಕರು ಕ್ರೇನ್ ಸಹಾಯದಿಂದ ಬೀಮ್ ತೆಗೆಯುತ್ತಿದ್ದಾಗ ಬೀಮ್ ಕುಸಿದು ಬಿದ್ದಿದೆ. ಅದು ಕುಸಿದು ಬೀಳುತ್ತಿದ್ದಂತೆ ಮುಲಾರಾಮ್ ಸಿಂಗ್ ಹಾಕಿಕೊಂಡಿದ್ದ ಸುರಕ್ಷತಾ ಹಗ್ಗ ತುಂಡಾಗಿ ಸುಮಾರು 100 ಅಡಿ ಎತ್ತರದಿಂದ ಬಿದ್ದು ಸಾವನ್ನಪ್ಪಿದ್ದಾನೆ.
ಉಪಗುತ್ತಿಗೆದಾರನ ವಿರುದ್ಧ ಐಪಿಸಿ ಅಡಿಯಲ್ಲಿ ಪ್ರಕರಣವನ್ನು ಪಡುಬಿದ್ರಿ ಪೊಲೀಸರು ದಾಖಲಿಸಿದ್ದಾರೆ.