Home ಅಪರಾಧ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣ: ಆರೋಪಿಯನ್ನು ಕರೆತಂದು ಎನ್‍ಐಎ ಸ್ಥಳ ಮಹಜರು

ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣ: ಆರೋಪಿಯನ್ನು ಕರೆತಂದು ಎನ್‍ಐಎ ಸ್ಥಳ ಮಹಜರು

24
0
Rameshwaram Cafe

ಬೆಂಗಳೂರು : ನಗರದ ಐಟಿಪಿಎಲ್ ರಸ್ತೆಯ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಬಂಧಿತ ಆರೋಪಿ ಮುಸಾವಿರ್ ಹುಸೇನ್ ಶಾಜೀಬ್‍ನನ್ನು ಸೋಮವಾರ ಕೆಫೆ ಬಳಿ ಕರೆತಂದು ಎನ್‍ಐಎ ಅಧಿಕಾರಿಗಳು ಆರೋಪಿಯ ಕೃತ್ಯದ ಮರುಸೃಷ್ಟಿ ಮಾಡಿಸಿ ಮಹಜರು ಪ್ರಕ್ರಿಯೆ ನಡೆಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮುಸಾವಿರ್ ಹುಸೇನ್ ಶಾಜೀಬ್, ಘಟನೆಯ ದಿನ ಕ್ಯಾಪ್ ಧರಿಸಿ ಕೆಫೆಗೆ ಹೇಗೆ ಬಂದ?, ಎಷ್ಟು ನಿಮಿಷಗಳ ಕಾಲ ಕೆಫೆಯಲ್ಲಿ ಕುಳಿತಿದ್ದ?, ಕುಳಿತಿದ್ದಷ್ಟು ಕಾಲ ಏನೇನು ಆರ್ಡರ್ ಮಾಡಿದ್ದ?, ನಂತರ ಸ್ಫೋಟಕಗಳಿದ್ದ ಬ್ಯಾಗ್ ಹೇಗೆ ಇರಿಸಿ ವಾಪಸ್ ತೆರಳಿದ ಎಂಬ ಘಟನಾವಳಿಗಳನ್ನು ಆತನಿಂದಲೇ ಮರುಸೃಷ್ಟಿಸಿ ಮಹಜರು ಮಾಡಲಾಗಿದೆ ಎಂದು ಎನ್‍ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಮರುಸೃಷ್ಠಿಯ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ರಾಮೇಶ್ವರಂ ಕೆಫೆಯ ಸುತ್ತಲೂ 50ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.

ಪ್ರಕರಣದ ಹಿನ್ನೆಲೆ: ಮಾ.1ರಂದು ನಗರದ ಐಟಿಪಿಎಲ್ ರಸ್ತೆಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಕೆಫೆ ಸಿಬ್ಬಂದಿ, ಗ್ರಾಹಕರ ಸಹಿತ ಒಟ್ಟು 9 ಜನ ಗಾಯಗೊಂಡಿದ್ದರು. ಬಳಿಕ ಮಾ.3ರಂದು ಪ್ರಕರಣ ದಾಖಲಿಸಿಕೊಂಡಿದ್ದ ಎನ್‍ಐಎ ತನಿಖೆ ವೇಳೆ ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವಿರ್ ಹುಸೇನ್ ಶಾಜೀಬ್ ಎಂಬುವರನ್ನು ಪ್ರಕರಣದ ಆರೋಪಿಗಳೆಂದು ಗುರುತಿಸಿ ಬಳಿಕ ಪಶ್ಚಿಮ ಬಂಗಾಳದ ಮೇದಿನಿಪುರದಲ್ಲಿ ಅಡಗಿದ್ದ ಈ ಇಬ್ಬರೂ ಆರೋಪಿಗಳನ್ನು ಎ.12ರಂದು ಎನ್‍ಐಎ ತಂಡ ಬಂಧಿಸಿತ್ತು.

LEAVE A REPLY

Please enter your comment!
Please enter your name here