ಬೆಂಗಳೂರು: ನಗರದ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ಇಬ್ಬರು ಆರೋಪಿಗಳನ್ನು ಎನ್‍ಐಎ ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳನ್ನು ಎನ್‍ಐಎ ಕಸ್ಟಡಿಗೆ ನೀಡಿದೆ. ಇಬ್ಬರೂ ಆರೋಪಿಗಳನ್ನು 10 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ಒಪ್ಪಿಸಲಾಗಿದೆ.
ಆರೋಪಿಗಳನ್ನು ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ ಹಿನ್ನೆಲೆ ನ್ಯಾಯಾಧೀಶರ ಮನೆಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಎನ್‍ಐಎ ಪರವಾಗಿ ಎಸ್‍ಪಿಪಿ ಪ್ರಸನ್ನಕುಮಾರ್ ಹಾಜರಾಗಿದ್ದು, ವಾದ ಮಂಡಿಸಿದರು. ಈ ವೇಳೆ ಎನ್‍ಐಎ ಎಸ್ಪಿ ಶಿವವಿಕ್ರಮ್ ಕೂಡ ಹಾಜರಿದ್ದರು.
ಆರೋಪಿಗಳನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿತ್ತು. ಬಳಿಕ ಕೋಲ್ಕತ್ತಾದಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಶಂಕಿತರಾದ ಅಬ್ದುಲ್ ಮತೀನ್ ತಾಹ, ಮುಸಾವಿರ್ ಹುಸೇನ್‍ನನ್ನು ಎನ್‍ಐಎ ಪೊಲೀಸರು ಕರೆತಂದಿದ್ದರು. ಇಬ್ಬರನ್ನೂ ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ.