ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ತಮ್ಮ ದಿನಚರಿ ಕುರಿತು ಅವರು ಆಗಾಗ ಅಪ್ಡೇಟ್ ನೀಡುತ್ತಾ ಇರುತ್ತಾರೆ. ತಮ್ಮ ಸಿನಿಮಾಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಕೆಲವು ಬ್ರ್ಯಾಂಡ್ಗಳ ಪ್ರಚಾರಕ್ಕೂ ಅವರ ಇನ್ಸ್ಟಾಗ್ರಾಮ್ (Rashmika Mandanna Instagram) ಖಾತೆ ಬಳಕೆ ಆಗುತ್ತದೆ. ಮೂರೂವರೆ ಕೋಟಿಗೂ ಅಧಿಕ ಜನರು ರಶ್ಮಿಕಾ ಮಂದಣ್ಣ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಫಾಲೋ ಮಾಡುತ್ತಿದ್ದಾರೆ. ಆ ಪೈಕಿ ಹಲವರಿಗೆ ಇತ್ತೀಚೆಗೆ ಅಚ್ಚರಿ ಆಗಿದೆ. ರಶ್ಮಿಕಾ ಮಂದಣ್ಣ ಅವರ ಹೆಸರು ಉಲ್ಟಾ ಕಾಣಿಸಿದೆ. ಇದು ಹ್ಯಾಕರ್ಗಳ (Hacker) ಕೈವಾಡ ಎಂದೇ ಅನೇಕರು ಭಾವಿಸಿದ್ದರು. ಆದರೆ ಅಸಲಿ ವಿಚಾರ ಏನು ಎಂಬುದನ್ನು ಈಗ ಸ್ವತಃ ರಶ್ಮಿಕಾ ಮಂದಣ್ಣ ಅವರೇ ವಿವರಿಸಿದ್ದಾರೆ.
ಖಾಸಗಿ ಕಂಪನಿಯೊಂದರ ಜೊತೆಗೆ ರಶ್ಮಿಕಾ ಮಂದಣ್ಣ ಕೈ ಜೋಡಿಸಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಅವರು ಅಭಿಯಾನ ಕೈಗೊಂಡಿದ್ದಾರೆ. ಅದರ ಅಂಗವಾಗಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಹೆಸರು ಉಲ್ಟಾ ಕಾಣುವಂತೆ ಮಾಡಿದ್ದಾರೆ. ಅದರ ಸ್ಕ್ರೀನ್ ಶಾಟ್ ಹಂಚಿಕೊಂಡು, ‘ಓದಲು ಬಾರದ ಹೆಣ್ಣು ಮಕ್ಕಳಿಗೆ ಇದೇ ರೀತಿ ಅನಿಸುತ್ತದೆ’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲ ಆಗಲಿದೆ ಎಂಬ ಕಾರಣಕ್ಕೆ ಅವರು ಈ ಅಭಿಯಾನದಲ್ಲಿ ಕೈ ಜೋಡಿಸಿದ್ದಾರೆ. ಅವರ ಕಾರ್ಯಕ್ಕೆ ಅಭಿಮಾನಿಗಳು ಭೇಷ್ ಎಂದಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಕರುನಾಡಿನಲ್ಲಿ ಅವರು ಟ್ರೋಲ್ ಆಗಿದ್ದೇ ಹೆಚ್ಚು ಎನ್ನಬಹುದು. ತಮ್ಮ ಮೊದಲ ಸಿನಿಮಾದ ನಿರ್ಮಾಣ ಸಂಸ್ಥೆಯ ಹೆಸರು ಹೇಳದೇ ಇರುವುದಕ್ಕೆ, ‘ಕಾಂತಾರ’ ಚಿತ್ರ ನೋಡಿಲ್ಲ ಅಂತ ಹೇಳಿದ್ದಕ್ಕೆ.. ಹೀಗೆ ಹಲವು ಕಾರಣದಿಂದ ಅವರನ್ನು ಜನರು ಟ್ರೋಲ್ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಅವರನ್ನು ಬ್ಯಾನ್ ಮಾಡಬೇಕು ಎಂದು ಕೂಡ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದುಂಟು.
ಇದನ್ನೂ ಓದಿ: ಪ್ರಪಂಚದಲ್ಲೇ 2ನೇ ಸ್ಥಾನ ಪಡೆದ ರಶ್ಮಿಕಾ ಮಂದಣ್ಣ ಹೊಸ ಸಾಂಗ್ ‘ರಂಜಿದಮೆ..’
ವೃತ್ತಿಜೀವನದಲ್ಲಿ ರಶ್ಮಿಕಾ ಮಂದಣ್ಣ ಅವರು ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಿದ್ದಾರೆ. ದಳಪತಿ ವಿಜಯ್ ಜೊತೆಗೆ ಅವರು ನಟಿಸಿರುವ ‘ವಾರಿಸು’ ಸಿನಿಮಾ 2023ರ ಜನವರಿ 12ರಂದು ಬಿಡುಗಡೆ ಆಗಲಿದೆ. ಈ ಚಿತ್ರದಿಂದ ರಶ್ಮಿಕಾ ಅವರ ವೃತ್ತಿಜೀವನಕ್ಕೆ ದೊಡ್ಡ ಮೈಲೇಜ್ ಸಿಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಕನ್ನಡ ಚಿತ್ರರಂಗದಿಂದ ಬ್ಯಾನ್, ಸ್ಪಷ್ಟನೆ ನೀಡಿದ ರಶ್ಮಿಕಾ ಮಂದಣ್ಣ
ಅಲ್ಲು ಅರ್ಜುನ್ ಜೊತೆ ‘ಪುಷ್ಪ 2’ ಸಿನಿಮಾದಲ್ಲೂ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಆದಷ್ಟು ಬೇಗ ಈ ಚಿತ್ರದ ಬಗ್ಗೆ ಅಪ್ಡೇಟ್ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಹಲವು ಹೊಸ ಆಫರ್ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.