ಸುವರ್ಣಸೌಧ ಬೆಳಗಾವಿ:
ಡಿ.23 ರಂದು ನಡೆಯಬೇಕಿದ್ದ 545 ಪಿ.ಎಸ್.ಐ ನೇಮಕಾತಿಯ ಮರು ಪರೀಕ್ಷೆಯನ್ನು ಜ.23 ರಂದು ನಡೆಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಸೋಮವಾರ ಬೆಳಗಾವಿ ಅಧಿವೇಶನದ ಶೂನ್ಯ ವೇಳೆಯಲ್ಲಿ ಶಾಸಕ ಬಸವನಗೌಡ ಯತ್ನಾಳ 545 ಪಿ.ಎಸ್.ಐ ನೇಮಕಾತಿ ಮರುಪರೀಕ್ಷೆ ಕುರಿತು ಪ್ರಸ್ತಾಪಿಸಿದ ವಿಷಯದ ಮೇಲೆ ಉತ್ತರಿಸಿ ಅವರು ಮಾತನಾಡಿದರು.
ದಿನಾಂಕ 3.10.2021 ರಂದು 545 ಪಿ.ಎಸ್.ಐ ನೇಮಕಾತಿಗೆ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿತ್ತು. ಲಿಖಿತ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಕೆ ಹಾಗೂ ಓ.ಎಂ.ಆರ್ ತಿದ್ದುಪಡಿಯಂತಹ ಅಕ್ರಮ ಬೆಳಕಿಗೆ ಬಂದಿದ್ದರಿAದ, ಹಿಂದಿನ ಸರ್ಕಾರ ಮರುಪರೀಕ್ಷೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕೆಲ ಅಭ್ಯರ್ಥಿಗಳು ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದರು. ಸಂಪೂರ್ಣ ವಿಚಾರಣೆ ಬಳಿಕ ಉಚ್ಛ ನ್ಯಾಯಾಲಯವು ದಿನಾಂಕ 10.11.2023 ರಂದು ಮರುಪರೀಕ್ಷೆ ಸಮ್ಮತಿಸಿ ನೀಡಿ ಆದೇಶಿಸಿದೆ. ನ್ಯಾಯಾಲಯದ ಆದೇಶದಂತೆ ಪೊಲೀಸ್ ಇಲಾಖೆ ಬದಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಲಿಖಿತ ಪರೀಕ್ಷೆಯನ್ನು ನಡೆಸಲು ಸರ್ಕಾರ ತೀರ್ಮಾನ ಕೈಗೊಂಡಿದೆ.
ಈ ಬೆಳವಣಿಗೆಗಳ ನಡುವೆ ಸರ್ಕಾರ 403 ಪಿ.ಎಸ್.ಐ ನೇಮಕಾತಿ ಹೊಸ ಅಧಿಸೂಚನೆ ಹೊರಡಿಸಿದೆ. 600 ಪಿ.ಎಸ್.ಐ ಗಳ ನೇಮಕಾತಿಗೆ ಹಣಕಾಸು ಇಲಾಖೆ ಅನುಮೋದನೆ ನೀಡಿದೆ. ಈ ಎಲ್ಲಾ ಪಿ.ಎಸ್.ಐ ನೇಮಕಾತಿಗಳ ನಡುವೆ ಜೇಷ್ಠತೆ ಗೊಂದಲ ಉಂಟಾಗಬಾರದು ಎನ್ನುವ ಕಾರಣಕ್ಕೆ 545 ಪಿ.ಎಸ್.ಐ ಗಳ ನೇಮಕಾತಿಯನ್ನು ಡಿ.23 ಕ್ಕೆ ನಡೆಸಲು ಸಿದ್ಧತೆ ಮಾಡಲಾಗಿತ್ತು. ಒಟ್ಟು 54301 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಅಕ್ರಮ ತಡೆಗಟ್ಟುವ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಮಾತ್ರ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.
ಈ ಉತ್ತರಕ್ಕೆ ಸದನದ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಆಕ್ಷೇಪಿಸಿ, ಲಿಖಿತ ಪರೀಕ್ಷೆಗೆ ಒಂದು ತಿಂಗಳ ಅವಕಾಶ ನೀಡಿರುವುದು ಪ್ರತಿಭಾಂತ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಲಿಖಿತ ಪರೀಕ್ಷೆ ಮುಂದೂಡಬೇಕು ಎಂದು ಗೃಹ ಸಚಿವರಲ್ಲಿ ಕೋರಿದರು.
ಇದಕ್ಕೆ ಸ್ಪಂದಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಡಿ.23 ರ ಬದಲಿಗೆ ಮುಂದಿನ ತಿಂಗಳು ಜ. 23 ನೇಮಕಾತಿ ಮರು ಪರೀಕ್ಷೆಯನ್ನು ನಡೆಸಲು ಒಪ್ಪಿದರು. ರಾಜ್ಯದಲ್ಲಿ ಸುಮಾರು 1500 ಹೆಚ್ಚು ಪಿ.ಎಸ್.ಐ ಹುದ್ದೆಗಳು ಖಾಲಿಯಿವೆ. ಇದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ತೊಂದರೆ ಉಂಟಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅನುಮತಿ ಪಡೆದು 450 ಎ.ಎಸ್.ಐ ಗಳಿಗೆ ನಿಯಮ 32ರ ಅಡಿ ಪಿ.ಎಸ್.ಐ ಪ್ರಭಾರೆಯನ್ನು ನೀಡಲಾಗಿದೆ ಎಂದರು.
ಪರೀಕ್ಷಾ ಅಕ್ರಮವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನೇಮಕಾತಿ ಹಗರಣದಲ್ಲಿ ಯಾರೇ ಭಾಗಿಯಾಗಿದ್ದರು ರಕ್ಷಿಸುವ ಪ್ರಮೇಯವಿಲ್ಲ. ವಿರೋಧ ಪಕ್ಷದ ಸದಸ್ಯರ ಮನದ ಇಚ್ಛೆಯಂತೆ ಅಕ್ರಮದಲ್ಲಿ ಭಾಗಿಯಾದವರಿಗೆ ತಕ್ಕ ಶಿಕ್ಷೆ ಆಗಲಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯಿತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಶಾಸಕ ಬಸವನಗೌಡ ಯತ್ನಾಳ್ ಅವರ ಪ್ರಶ್ನೆಗೆ ಉತ್ತರಿಸಿದರು.