ಬೆಂಗಳೂರು:
ಬಿಬಿಎಂಪಿ ವಾರ್ಡ್‌ಗಳ ಮರು ವಿಂಗಡಣೆಗಾಗಿ ಸರ್ಕಾರವು ಮುಖ್ಯ ಆಯುಕ್ತರ ನೇತೃತ್ವದ ಆಯೋಗವನ್ನು ಪುನರ್ ರಚಿಸಿದೆ. ನಿಗದಿತ ಅವಧಿಯೊಳಗೆ ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.
ಬಿಬಿಎಂಪಿ ಮುಖ್ಯ ಆಯುಕ್ತರು ಆಯೋಗದ ಅಧ್ಯಕ್ಷರು, ಬಿಡಿಎ ಆಯುಕ್ತರು, ಬೆಂಗಳೂರು ನಗರ ಜಿಲ್ಲಾಧಿಕಾರಿ ಸದಸ್ಯರು, ಬಿಬಿಎಂಪಿ ಕಂದಾಯ ಇಲಾಖೆಯ ವಿಶೇಷ ಆಯುಕ್ತರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
ಜೂನ್ 19ರಂದು ವಾರ್ಡ್ ಪುನರ್ ವಿಂಗಡಣೆಗೆ ಹೈಕೋರ್ಟ್ 12 ವಾರಗಳ ಕಾಲಾವಕಾಶ ನೀಡಿತ್ತು. ಈ ಅವಧಿಯೊಳಗೆ ವಾರ್ಡ್ ಗಳನ್ನು ಮರು ಹಂಚಿಕೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಹಿನ್ನೆಲೆ: ಜನವರಿ 29, 2021 ರಂದು ಬಿಬಿಎಂಪಿ ವಾರ್ಡ್‌ಗಳ ಮರು ವಿಂಗಡಣೆಗಾಗಿ ‘ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆ ಆಯೋಗ’ವನ್ನು ರಚಿಸಲಾಯಿತು. ಆಯೋಗವು ಜೂನ್ 6, 2022 ರಂದು ತನ್ನ ವರದಿಯನ್ನು ಸಲ್ಲಿಸಿತು, ಇದರ ಆಧಾರದ ಮೇಲೆ ಜುಲೈ 14, 2022 ರಂದು ಅಧಿಸೂಚನೆಯನ್ನು ಹೊರಡಿಸಿ, 2011 ರ ಜನಗಣತಿ ಆಧರಿಸಿ ವಾರ್ಡ್‌ಗಳ ಮರುವಿಂಗಡಣೆಯನ್ನು ಅಂತಿಮಗೊಳಿಸಲಾಯಿತು.
ಈ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು 2022ರ ಸೆಪ್ಟೆಂಬರ್ 16ರಂದು ಹೈಕೋರ್ಟ್ ವಜಾಗೊಳಿಸಿತ್ತು. ಹೈಕೋರ್ಟ್ ನೀಡಿದ ಆದೇಶದ ವಿರುದ್ಧ ಬಿ.ಎನ್. ಮಂಜುನಾಥ್ ರೆಡ್ಡಿ ಮತ್ತಿತರರು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಜೂನ್ 19, 2023 ರಂದು ಅದರ ವಿಚಾರಣೆಯ ಸಂದರ್ಭದಲ್ಲಿ, ಹೈಕೋರ್ಟ್ ವಾರ್ಡ್‌ಗಳ ಮರುಹಂಚಿಕೆಗೆ 12 ವಾರಗಳ ಸಮಯವನ್ನು ನೀಡಿತು.
ಹೈಕೋರ್ಟ್ ನೀಡಿದ ಆದೇಶದಂತೆ ವಾರ್ಡ್ ಗಳ ಪುನರ್ ವಿಂಗಡಣೆಗೆ ಈ ಹಿಂದೆ ರಚಿಸಲಾಗಿದ್ದ ‘ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣಾ ಆಯೋಗ’ವನ್ನು ಸರ್ಕಾರ ಜೂನ್ 23ರಂದು ಪುನರ್ ರಚನೆ ಮಾಡಿದೆ.