Home ಬೆಂಗಳೂರು ನಗರ ರೆಡ್ಡಿ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡಿ ಹಾಗೂ ಅಭಿವೃದ್ದಿ ನಿಗಮ ಸ್ಥಾಪಿಸುವಂತೆ ಆಗ್ರಹಿಸಿ ರೆಡ್ಡಿ...

ರೆಡ್ಡಿ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡಿ ಹಾಗೂ ಅಭಿವೃದ್ದಿ ನಿಗಮ ಸ್ಥಾಪಿಸುವಂತೆ ಆಗ್ರಹಿಸಿ ರೆಡ್ಡಿ ಜನ ಸಂಘದ ವತಿಯಿಂದ ರಸ್ತೆ ತಡೆ ನಡೆಸಿ ಬೃಹತ್‌ ಪ್ರತಿಭಟನೆ

124
0
Reddy Jana Sangh protests demanding Cabinet Ministry in Bommai Cabinet

• ರೆಡ್ಡಿ ಅಭಿವೃದ್ದಿ ನಿಗಮ ಸ್ಥಾಪನೆಗೂ ಆಗ್ರಹ – ರಸ್ತೆ ತಡೆ ನಡೆಸಿ ಬೃಹತ್‌ ಪ್ರತಿಭಟನೆ

• ರಾಜ್ಯದ ಎಲ್ಲಾ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಜನರು ಭಾಗಿ

• ಬೇಡಿಕೆ ಈಡೇರಿಕೆ ಆಗದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ

ಬೆಂಗಳೂರು:

ರಾಜ್ಯದಲ್ಲಿರುವ ರೆಡ್ಡಿ ಸಮುದಾಯದ ಜನಸಂಖ್ಯೆಯನ್ನು ಪರಿಗಣಿಸಿ ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ರೆಡ್ಡಿ ಸಮುದಾಯಕ್ಕೆ ಸೇರಿದ ಶಾಸಕರಿಗೆ ಹೆಚ್ಚಿನ ಪ್ರಾತಿನಿಧ್ಯ ಹಾಗೂ ಪ್ರತ್ಯೇಕ ರೆಡ್ಡಿ ನಿಗಮ ಸ್ಥಾಪನೆ ಮಾಡುವಂತೆ ಆಗ್ರಹಿಸಿ ಇಂದು ರೆಡ್ಡಿ ಜನ ಸಂಘದ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆಯನ್ನು ನಡೆಸಲಾಯಿತು.

ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಹರಿಹರದ ವೇಮಾನಂದ ಸ್ವಾಮಿಜಿಗಳು ಮಾತನಾಡಿ, ರಾಜ್ಯದಲ್ಲಿ 70 ಲಕ್ಷ ಜನ ರೆಡ್ಡಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅಲ್ಲದೆ, ನಮ್ಮ ಸಮುದಾಯದ 11 ಜನ ಶಾಸಕರು ಆಯ್ಕೆಯಾಗಿದ್ದಾರೆ.

ರಾಜ್ಯದಲ್ಲಿ ಬಹಳಷ್ಟು ಪ್ರಾಮುಖ್ಯತೆಯನ್ನು ಹೊಂದಿರುವ ರೆಡ್ಡಿ ಸಮುದಾಯಕ್ಕೆ ಸೇರಿದ ಕೇವಲ ಒಬ್ಬ ಶಾಸಕರನ್ನು ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಈ ಸರಕಾರ ಒಂದು ನಿರ್ದಿಷ್ಟ ಸಮುದಾಯದ ಓಲೈಕೆಗೆ ಮುಂದಾಗಿ ಬೇರೆ ಸಮುದಾಯಗಳನ್ನು ಮರೆಯುತ್ತಿದ್ದಾರೆ. ಈ ರೀತಿ ಮಾಡಿದರೆ ಸರಕಾರಕ್ಕೆ ವಿರೋಧ ಬೇರೆ ಸಮುದಾಯಗಳಿಂದ ವ್ಯಕ್ತವಾಗುತ್ತದೆ.

ಯಡಿಯೂರಪ್ಪ ಸರಕಾರದಲ್ಲೂ ನಮಗೆ ಪ್ರಾತಿನಿಧ್ಯ ನೀಡಿರಲಿಲ್ಲ. ಬೊಮ್ಮಾಯಿ ಅವರ ಸರಕಾರದಲ್ಲೂ ಕೂಡಾ ಸೂಕ್ತ ಪ್ರಾತಿನಿಧ್ಯ ದೊರೆತಿಲ್ಲ. ನಮ್ಮ ಪಕ್ಷದ ಬೆಳವಣಿಗೆಯಲ್ಲಿ ರೆಡ್ಡಿ ಸಮುದಾಯದ ಕೊಡುಗೆ ಬಹಳಷ್ಟಿದೆ. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸಮುದಾಯಕ್ಕೆ ಸೇರಿದ ಸತೀಶ್‌ ರೆಡ್ಡಿ, ವಿಶ್ವನಾಥ್‌ ರೆಡ್ಡಿ, ಸೋಮಶೇಖರ್‌ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದರು.

ಸಂಘದ ಅಧ್ಯಕ್ಷ ಎಸ್. ಜಯರಾಮ ರೆಡ್ಡಿ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಕಾಲದಿಂದಲೂ ಬೆಂಗಳೂರು ನಿರ್ಮಾಣಕ್ಕೆ ರೆಡ್ಡಿಗಳು ಅಮೂಲ್ಯ ಕೊಡುಗೆ ನೀಡುತ್ತಾ ಬಂದಿದ್ದು, ಪಾಪರಡ್ಡಿ ಪಾಳ್ಯ, ಮುನಿರೆಡ್ಡಿ ಪಾಳ್ಯ ಹೀಗೆ ಹತ್ತು ಹಲವು ಹೆಸರಿನ ಪ್ರದೇಶಗಳು ಈಗಲೂ ರೆಡ್ಡಿಗಳ ಹೆಸರಿನಿಂದಲೇ ಕರೆಯಲಾಗುತ್ತಿದೆ. ವಿಶೇಷವಾಗಿ ಬೆಂಗಳೂರಿನ ಕೈಗಾರಿಕಾ ಅಭಿವೃದ್ಧಿಗೆ ಜನಾಂಗ ಸಾಕಷ್ಟು ಕೊಡುಗೆ ನೀಡಿದ್ದು, ರೆಡ್ಡಿ ಸಮುದಾಯದವರಿಗೆ ಸೇರಿದ ಸಹಸ್ರಾರು ಎಕರೆ ಅತ್ಯಮೂಲ್ಯ ಜಮೀನು ಬೆಂಗಳೂರು ಅಭಿವೃದ್ಧಿಗಾಗಿ ನೀಡಿದ್ದೇವೆ. ಬೆಂಗಳೂರು ನಗರದ ಶ್ರೇಯೋಭಿವೃದ್ಧಿಗಾಗಿ ರೆಡ್ಡಿ ಸಮುದಾಯ ಮಾಡಿರುವ ತ್ಯಾಗವನ್ನು ಬಿಜೆಪಿ ಸರ್ಕಾರ ಉಪೇಕ್ಷೆ ಮಾಡಿದೆ ಎಂದು ಹೇಳಿದರು.

Reddy Jana Sangh protests demanding Cabinet Ministry in Bommai Cabinet

ರಾಜ್ಯದಲ್ಲಿ ಹೆಚ್ಚು ಜನ ಸಂಖ್ಯೆ ಹೊಂದಿರುವ ರೆಡ್ಡಿ ಜನಾಂಗ ಯಾವುದೇ ಪಕ್ಷವನ್ನು ಅಧಿಕಾರಕ್ಕೆ ತರುವ, ಅಧಿಕಾರದಿಂದ ದೂರ ಉಳಿಯುವಂತೆ ಮಾಡುವ ಶಕ್ತಿ ಹೊಂದಿದೆ. ರೆಡ್ಡಿ ಜನಾಂಗದಲ್ಲೂ ಬಡವರು, ಹಿಂದುಳಿದವರಿದ್ದು, ಇವರನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಮುಂದೆ ತರಲು ರಡ್ಡಿ ಜನಾಂಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಮಾಡಿದ್ದ ಮನವಿಯನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿದರು.

ಈ ಕೂಡಲೇ “ರೆಡ್ಡಿ ಅಭಿವೃದ್ಧಿ ನಿಗಮ” ಸ್ಥಾಪಿಸುವ ಜತೆಗೆ ಬಾಕಿ ಉಳಿದಿರುವ ನಾಲ್ಕು ಸಚಿವ ಸ್ಥಾನಗಳಲ್ಲಿ ಹೆಚ್ಚಿನ ಅವಕಾಶಗಳನ್ನು ರೆಡ್ಡಿ ಜನಾಂಗಕ್ಕೆ ನೀಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ತಮ್ಮ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಮಾಜಿ ಮಹಾಪೌರ ಎಸ್‌ ಕೆ ನಟರಾಜ್‌, ರೆಡ್ಡಿ ಜನಸಂಘದ ಉಪಾಧ್ಯಕ್ಷರಾದ ವೆಂಕಟಶಿವಾರೆಡ್ಡಿ, ಶಿವರಾಮ್‌, ಪ್ರಧಾನ ಕಾರ್ಯದರ್ಶಿ ಆದ ಕೃಷ್ಣಾ ರೆಡ್ಡಿ ಕೆ ಎಂ, ಜಂಟಿ ಕಾರ್ಯದರ್ಶಿಗಳಾದ ಸದಾಶಿವ ರೆಡ್ಡಿ, ಕೃಷ್ಣಾ ರೆಡ್ಡಿ ಕೆ.ಎಂ ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಾಂಧವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here