ಬೆಂಗಳೂರು : ಕಲಬುರಗಿ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಪ್ರಕರಣದಲ್ಲಿ ತನಿಖೆಗೆ ಸಹಕರಿಸುವಂತೆ ಎನ್.ರವಿಕುಮಾರ್ ಅವರಿಗೆ ಹೈಕೋರ್ಟ್ ಸೂಚನೆ ನೀಡಿದೆ.
ತಮ್ಮ ವಿರುದ್ಧ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಮೇಲಿನ ಆದೇಶ ನೀಡಿದೆ.
ವಿಚಾರಣೆ ವೇಳೆ ತನಿಖೆಗೆ ಸಹಕರಿಸಿದರೆ ಬಂಧಿಸುವುದಿಲ್ಲವೆಂದ ಸರಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿತು. ಈ ಹೇಳಿಕೆ ದಾಖಲಿಸಿಕೊಂಡ ಹೈಕೋರ್ಟ್ ತನಿಖೆಗೆ ಸಹಕರಿಸಲು ಸೂಚನೆ ನೀಡಿದೆ. ಅಲ್ಲದೆ, ಜಿಲ್ಲಾಧಿಕಾರಿಗಳಲ್ಲಿ ಕ್ಷಮೆ ಕೇಳಿ ಅದನ್ನು ಅವರು ಒಪ್ಪಿಕೊಂಡರೆ, ಆ ಕ್ಷಮಾಪಣಾ ಹೇಳಿಕೆಯನ್ನು ಅಫಿಡವಿಟ್ ಮೂಲಕ ಕೋರ್ಟ್‌ಗೆ ಸಲ್ಲಿಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿದೆ.