ಇಂದು ರಾಜ್ಯ ಸರ್ಕಾರದೊಂದಿಗೆ ಸದಾನಂದ ಗೌಡ ಚರ್ಚೆ
ನವದೆಹಲಿ/ಬೆಂಗಳೂರು:
ಕೇಂದ್ರ ಸರ್ಕಾರವು ಇಂದು ವಿವಿಧ ರಾಜ್ಯಗಳ ಬೇಡಿಕೆಗೆ ಅನುಗುಣವಾಗಿ ಕೊರೊನಾ ಚಿಕಿತ್ಸೆಯಲ್ಲಿ ಬಳಸಲಾಗುವ ರೆಮ್ಡೆಸಿವಿರ್ ಚುಚ್ಚುಮದ್ದಿನ ಮರುಹಂಚಿಕೆ ಮಾಡಿದ್ದು ಕರ್ನಾಟಕದ ಪಾಲು 50 ಸಾವಿರ ವೈಯಲ್ಸ್ ನಿಂದ 1.22 ಲಕ್ಷ ವೈಯಲ್ಸ್ ಗೆ ಏರಿಕೆಯಾಗಿದೆ.
ಇದು ಏಪ್ರಿಲ್ 30ರವರೆಗಿನ ಬಳಕೆಗಾಗಿ ರಾಜ್ಯಕ್ಕೆ ಹಂಚಿಕೆಯಾಗಿರುವ ರೆಮ್ಡೆಸಿವಿರ್ ಪ್ರಮಾಣ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರ ಖಾತೆಯಡಿಯೇ ಔಷಧ (ಫಾರ್ಮಾಸ್ಯುಟಿಕಲ್) ಇಲಾಖೆಯೂ ಕಾರ್ಯನಿರ್ವಹಿಸುತ್ತದೆ. ಇಂದು ಔಷಧ ಇಲಾಖೆಯ ಜಂಟಿ ಕಾರ್ಯದರ್ಶಿ ನವ್ದೀಪ್ ರಿನ್ವಾ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ರಾಜೀವ್ ವಾಧವಾನ್ ಅವರು ವಿವಿಧ ರಾಜ್ಯಗಳಿಗೆ ರೆಮ್ಡೆಸಿವಿರ್ ಮರುಹಂಚಿಕೆ ಮಾಡಿ ಆದೇಶವೊಂದನ್ನು ಹೊರಡಿಸಿದರು.
ಈ ಬಗ್ಗೆ ಟ್ವೀಟೊಂದನ್ನು ಮಾಡಿರುವ ಸದಾನಂದ ಗೌಡರು “ವಿವಿಧ ರಾಜ್ಯಗಳ ಬೇಡಿಕೆಗೆ ಅನುಗುಣವಾಗಿ ಇಂದು ರೆಮ್ಡೆಸಿವಿರ್ ಮರುಹಂಚಿಕೆ ಮಾಡಿದ್ದೇವೆ. ಕರ್ನಾಟಕದ ಪಾಲು 1.22 ಲಕ್ಷ ವೈಯಲ್ಸ್ ಗೆ ಏರಿಕೆಯಾಗಿದೆ. ನಾನು ನಿರ್ವಹಿಸುವ ಔಷಧ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಉನ್ನತಾಧಿಕಾರದ ಸಮಿತಿಯು ಈ ನಿರ್ಣಯ ಕೈಗೊಂಡಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ರಾಜ್ಯಕ್ಕೆ ನಾವು ಸಂಪೂರ್ಣ ಸಹಕಾರ, ನೆರವು ನೀಡುತ್ತೇವೆ” ಎಂದಿದ್ದಾರೆ.
After detailed review of statewise allotment of #Remdesivir with @Pharmadept, substantial increase has been made in overall production & allotment to all states.
— Sadananda Gowda (@DVSadanandGowda) April 24, 2021
This will make country's fight stronger against #COVID19.
State-wise allocation of #Remdesivir upto April 30, 2021👇 pic.twitter.com/wGelmAOUmL
ಏಪ್ರಿಲ್ 21ರಂದು ಕೇಂದ್ರವು ಕರ್ನಾಟಕಕ್ಕೆ ಏಪ್ರಿಲ್ 30ರವರೆಗಿನ ಬಳಕೆಗಾಗಿ 25 ಸಾವಿರ ರೆಮ್ಡೆಸಿವಿರ್ ವೈಯಲ್ಸ್ ಹಂಚಿಕೆ ಮಾಡಿತ್ತು. ಆದರೆ ರಾಜ್ಯವು ಹೆಚ್ಚುವರಿ ರೆಮ್ಡೆಸಿವಿರ್ ಪೂರೈಸುವಂತೆ ಕೇಳಿದ್ದರಿಂದ ಇಲಾಖಾ ಸಚಿವರಾದ ಸದಾನಂದ ಗೌಡರು ಮಧ್ಯಪ್ರವೇಶಿಸಬೇಕಾಗಿ ಬಂತು. ಹೀಗಾಗಿ ರಾಜ್ಯಕ್ಕೆ ಗುರುವಾರ ಹೆಚ್ಚುವರಿಯಾಗಿ 25 ಸಾವಿರ ವೈಯಲ್ಸ್ ಹಂಚಿಕೆಯಾಯಿತು. ಇಂದು ರಾಜ್ಯಕ್ಕೆ ಮತ್ತೆ ಸುಮಾರು 72 ಸಾವಿರ ವೈಯಲ್ಸ್ ಹೆಚ್ಚುವರಿಯಾಗಿ ಹಂಚಿಕೆಯಾಗಿದೆ.
ಕೇಂದ್ರದಿಂದ ರೆಮ್ಡೆಸಿವಿರ್ ಮರು ಹಂಚಿಕೆ ಆದೇಶ ಹೊರೆಬಿದ್ದ ನಂತರ ಟ್ವೀಟೊಂದನ್ನು ಮಾಡಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ರಾಜ್ಯಕ್ಕೆ ಈ ಚುಚ್ಚುಮದ್ದು ಪ್ರಮಾಣವನ್ನು ಹೆಚ್ಚಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಮಂತ್ರಿ ಅಮಿತ್ ಶಾ ಹಾಗೂ ಡಿ ವಿ ಸದಾನಂದ ಗೌಡರಿಗೆ ಹೃತ್ಪೂರ್ವಕ ಧನ್ಯವಾದ ತಿಳಿಸಿದ್ದಾರೆ.
ಈ ಮಧ್ಯೆ ಸಚಿವ ಸದಾನಂದ ಗೌಡ ಅವರು ಭಾನುವಾರ ಬೆಳಿಗ್ಗೆ 10 ಗಂಟೆಗೆ ವಿಧಾನ ಸೌಧದಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಗಳೊಂದಿಗೆ ಕೊರೊನಾ ನಿರ್ವಹಣೆಗೆ ಸಂಬಂಧಿಸಿದಂತೆ ಮಹತ್ವದ ಸಭೆ ನಡೆಸಲಿದ್ದಾರೆ. ಆರೋಗ್ಯ ಸಚಿವ ಡಾ ಕೆ ಸುಧಾಕರ, ಮುಖ್ಯ ಕಾರ್ಯದರ್ಶಿ ರವಿಕುಮಾರ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ.
ರೆಮ್ಡೆಸಿವಿರ್ ಪೆಟೆಂಟ್ ಹೊಂದಿರುವ ಅಮೆರಿಕದ ಗಿಲೀಡ್ ಸೈಯನ್ಸಸ್ ಫಾರ್ಮಾ ಕಂಪನಿಯಿಂದ ಭಾರತದ ಏಳು ಫಾರ್ಮಾ ಕಂಪನಿಗಳು ಈ ಚುಚ್ಚುಮದ್ದಿನ ಉತ್ಪಾದನೆಯ ಲೈಸನ್ಸ್ ಪಡೆದಿವೆ. ಅವುಗಳ ಇದುವರೆಗಿನ ಸ್ಥಾಪಿತ ಉತ್ಪಾದನಾ ಸಾಮರ್ಥ್ಯ ತಿಂಗಳಿಗೆ 38.8 ಲಕ್ಷ ವೈಯಲ್ಸ್ ಆಗಿತ್ತು. ಆದರೆ ಏಕಾಏಕಿ ಬೇಡಿಕೆ ಹೆಚ್ಚಾಗಿರುವದರಿಂದ ಇನ್ನೂ ಹೆಚ್ಚುವರಿಯಾಗಿ ಸುಮಾರು 50 ಲಕ್ಷ ವೈಯಲ್ಸ್ ಉತ್ಪಾದನೆಗೆ (ತಿಂಗಳಿಗೆ) ಅಗತ್ಯ ಅನುಮತಿ ನೀಡಲಾಗಿದೆ. ದಿನೇ ದಿನೇ ರೆಮ್ಡೆಸಿವಿರ್ ಉತ್ಪಾದನೆ ಹೆಚ್ಚುತ್ತಿದೆ.
ಏಪ್ರಿಲ್ 11ರಿಂದ ರೆಮ್ಡೆಸಿವಿರ್ ರಫ್ತು ನಿಷೇಧಿಸಲಾಗಿದ್ದು ಇದರಿಂದ ಹೆಚ್ಚುವರಿಯಾಗಿ ಲಭ್ಯವಾಗಿರುವ ಸುಮಾರು 4 ಲಕ್ಷ ವೈಯಲ್ಸ್ ರೆಮ್ಡೆಸಿವಿರ್ ನ್ನು ಸ್ವದೇಶಿ ಬಳಕೆಗೆ ಪೂರೈಸಲಾಗಿದೆ.
ಕಳೆದ ವಾರದಿಂದ ಕೇಂದ್ರ ಸರ್ಕಾರವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಫಾರ್ಮಾ ಕಂಪನಿಗಳು ತಮ್ಮ ರೆಮ್ಡೆಸಿವಿರ್ ಉತ್ಪಾದನೆಯಲ್ಲಿ ಶೇಕಡಾ 70ರಷ್ಟು ಕೇಂದ್ರ ಸರ್ಕಾರವು ಸೂಚಿಸುವ ರಾಜ್ಯಗಳಿಗೆ ನಿಗದಿತ ಪ್ರಮಾಣದಲ್ಲಿ ಪೂರೈಕೆ ಮಾಡಬೇಕಾಗುತ್ತದೆ. ಇನ್ನುಳಿದ ಶೇಕಡಾ 30ರಷ್ಟು ಉತ್ಪಾದನೆಯ ವಿತರಣೆಯನ್ನು ಕಂಪನಿಗಳ ವಿವೇಚನೆಗೆ ಬಿಡಲಾಗಿದೆ.