ಬೆಂಗಳೂರು/ಚೆನ್ನೈ: ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಎ.ಆರ್ ರೆಹಮಾನ್ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದ್ದಕ್ಕಿದ್ದಂತೆ ಅಸೌಖ್ಯಕ್ಕೀಡಾದ ಕೂಡಲೇ ರೆಹಮಾನ್ ಅವರನ್ನು ಚೆನ್ನೈ ಗ್ರೀಮ್ಸ್ ರಸ್ತೆಯಲ್ಲಿ ಅಪೋಲೋ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಎದೆನೋವಿನ ಹಿನ್ನೆಲೆಯಲ್ಲಿ ಎ.ಆರ್ ರೆಹಮಾನ್ ಅವರಿಗೆ ಇಸಿಜಿ, ಎಕೋಕಾರ್ಡಿಯೋಗ್ರಾಮ್ ಸೇರಿ ವಿವಿಧ ಪರೀಕ್ಷೆಗಳನ್ನು ಮಾಡಲಾಗಿದೆ. ಆಸ್ಪತ್ರೆ ಮೂಲಗಳ ಪ್ರಕಾರ ಚಿಕಿತ್ಸೆ ನೀಡುತ್ತಿರುವ ವೈದ್ಯರು ರೆಹಮಾನ್ ಅವರಿಗೆ ಆಂಜಿಯೋಗ್ರಾಮ್ ಮಾಡುವ ಸಾಧ್ಯತೆ ಇದೆ.
ಕಳೆದ ತಿಂಗಳು, ಎಆರ್ ರೆಹಮಾನ್ ಚೆನ್ನೈನಲ್ಲಿ ನಡೆದ ತಮ್ಮ ಸಂಗೀತ ಕಚೇರಿಯಲ್ಲಿ ಎಡ್ ಶೀರನ್ ಅವರೊಂದಿಗೆ ಪ್ರದರ್ಶನ ನೀಡಿದ್ದರು. ಒಂದು ವಾರದ ನಂತರ, ಅವರು ತಮ್ಮ ಚಿತ್ರ ಚಾವಾ ಸಂಗೀತ ಬಿಡುಗಡೆ ಸಮಾರಂಭದಲ್ಲಿಯೂ ಕಾಣಿಸಿಕೊಂಡಿದ್ದರು.
ಎ.ಆರ್ ರೆಹಮಾನ್ ಅವರಿಗೆ 58 ವರ್ಷ ವಯಸ್ಸಾಗಿದೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಇತ್ತೀಚೆಗೆ ಪತ್ನಿಯಿಂದ ಡಿವೋರ್ಸ್ ಪಡೆದು ಸುದ್ದಿಯಾಗಿದ್ದರು. ಸುಮಾರು 29 ವರ್ಷಗಳ ದಾಂಪತ್ಯದ ನಂತರ, ಕಳೆದ ವರ್ಷ ನವೆಂಬರ್ ನಲ್ಲಿ ಸೈರಾ ಬಾನು ಮತ್ತು ಎಆರ್ ರೆಹಮಾನ್ ಬೇರ್ಪಡುವುದಾಗಿ ಪ್ರಕಟಿಸಿದ್ದರು. ಮಾಜಿ ಪತ್ನಿ ಸಾಯಿರಾ ಬಾನು ಕೂಡ ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ರೆಹಮಾನ್ ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದು, ತಾವು ವೈದ್ಯರೊಂದಿಗೆ ಮಾತನಾಡಿದ್ದು ರೆಹಮಾನ್ ಅವರು ಚೆನ್ನಾಗಿದ್ದಾರೆ, ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದ್ದಾರೆ ಎಂದು ತಿಳಿಸಿದ್ದಾರೆ.
ರೆಹಮಾನ್ ಅವರ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸುದ್ದಿ ತಿಳಿದ ತಕ್ಷಣ, ನಾನು ವೈದ್ಯರನ್ನು ಸಂಪರ್ಕಿಸಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದೆ. ಅವರು ಚೆನ್ನಾಗಿದ್ದಾರೆ ಮತ್ತು ಶೀಘ್ರದಲ್ಲೇ ಮನೆಗೆ ಮರಳುತ್ತಾರೆ ಎಂದು ವೈದ್ಯರು ಹೇಳಿದ್ದಾರೆ ಎಂದು ಬರೆದುಕೊಂಡಿದ್ದಾರೆ.