ಬೆಂಗಳೂರು: ಬೆಂಗಳೂರಿನ ಎನ್ಆರ್ಐ ಲೇಔಟ್, ಕನಕನಗರ, ಕಲ್ಕೆರೆಯಲ್ಲಿ ಅವಳಿ ಹೆಣ್ಣು ಮಕ್ಕಳು ಆಕಸ್ಮಿಕವಾಗಿ ಮನೆಯ ಬೆಡ್ರೂಮ್ನೊಳಗೆ ಬೀಗ ಹಾಕಿಕೊಂಡು ಸಿಕ್ಕಿಹಾಕಿಕೊಂಡ ಘಟನೆ ನಡೆದಿದ್ದು, ತಕ್ಷಣ ಸ್ಪಂದಿಸಿದ ರಾಮಮೂರ್ತಿನಗರ ಪೊಲೀಸ್ ಠಾಣೆಯ ಹೊಯ್ಸಳಾ-50 ತಂಡ ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಿದೆ.
ಮಕ್ಕಳು ಕೊಠಡಿಯೊಳಗೆ ಸಿಕ್ಕಿಹಾಕಿಕೊಂಡಿರುವುದರಿಂದ ಕುಟುಂಬದವರು ಆತಂಕಗೊಂಡಿದ್ದರು. ತುರ್ತು ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಕೇವಲ 9 ನಿಮಿಷಗಳಲ್ಲಿ ಘಟನೆ ಸ್ಥಳಕ್ಕೆ ತಲುಪಿದರು.
ಸ್ಥಳಕ್ಕೆ ಆಗಮಿಸಿದ ಹೊಯ್ಸಳಾ ಸಿಬ್ಬಂದಿ ಬಾಗಿಲನ್ನು ಒಡೆದು ಮಕ್ಕಳನ್ನು ಸುರಕ್ಷಿತವಾಗಿ ಹೊರತೆಗೆದು ಕುಟುಂಬದವರಿಗೆ ಒಪ್ಪಿಸಿದರು. ಇದರಿಂದ ಕುಟುಂಬದವರು ನಿಟ್ಟುಸಿರು ಬಿಟ್ಟರು.
ಬೆಂಗಳೂರು ನಗರ ಪೊಲೀಸರು ತುರ್ತು ಪರಿಸ್ಥಿತಿಯಲ್ಲಿ ತಮ್ಮ ಸೇವೆ ಸದಾ ಜನರೊಂದಿಗೆ ಇರುವುದನ್ನು ಮತ್ತೆ ಸಾಬೀತುಪಡಿಸಿದ್ದಾರೆ. ಯಾವುದೇ ತುರ್ತು ಪರಿಸ್ಥಿತಿ ಎದುರಾದಾಗ 112 ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆಯುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
