ಸುವರ್ಣಸೌಧ ಬೆಳಗಾವಿ:
ರಾಜ್ಯದಲ್ಲಿನ ನೇಕಾರರು ಹಾಗೂ ಟೈಲರಿಂಗ್ ಸೇರಿದಂತೆ ಅಸಂಘಟಿತ ವಲಯದ ಹಲವು ಕಾರ್ಮಿಕರಿಗೆ ವಿಶೇಷ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿ ಮಾಡುವುದಾಗಿ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಭರವಸೆ ನೀಡಿದರು.
ಬೆಳಗಾವಿಯ ಸುವರ್ಣ ಸೌಧದಲ್ಲಿ ಮಂಗಳವಾರದ ವಿಧಾನ ಸಭಾ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ತೆರದಾಳ ಶಾಸಕ ಸಿದ್ದು ಸವದಿ ಹಾಗೂ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಪ್ರತಿ ನಿರ್ಮಾಣ ಕಾಮಗಾರಿಗೆ ಶೇ.1 ರಷ್ಟು ಸೆಸ್ ವಿಧಿಸಲಾಗುತ್ತಿದೆ. ಇದರ ಅಡಿ ಸಂಗ್ರಹವಾದ ಹಣದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು, ಹಲವು ಸಾಮಾಜಿಕ ಭದ್ರತಾ ಯೋಜನೆಗಳನ್ನು ಕಟ್ಟಡ ಕಾರ್ಮಿಕರಿಗೆ ಜಾರಿ ಮಾಡಿದೆ. ಈ ಯೋಜನೆಗಳನ್ನು ನೇಕಾರರು ಹಾಗೂ ಟೈಲರಿಂಗ್ ಸೇರಿದಂತೆ ಇತರೆ ಯಾವುದೇ ಅಸಂಘಟಿತ ಕಾರ್ಮಿಕರಿಗೆ ವಿಸ್ತರಿಸಲು ಬರುವುದಿಲ್ಲ. ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಇದ್ದು, ಮಂಡಳಿಯು ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಹಮಾಲರು, ಮನೆಗೆಲಸದವರು, ಚಿಂದಿ ಆಯುವವರು, ಟೈಲರ್ಸ್, ಮೆಕ್ಯಾನಿಕ್, ಅಗಸರು, ಅಕ್ಕಸಾಲಿಗರು, ಕಮ್ಮಾರು, ಕಂಬಾರರು, ಕ್ಷೌರಿಕರು ಹಾಗೂ ಭಟ್ಟಿ ಕಾರ್ಮಿಕರು ಸೇರಿದ 11 ಅಸಂಘಟಿತ ಕಾರ್ಮಿಕರಿಗೆ ಉಚಿತವಾಗಿ ನೊಂದಣಿ ಮಾಡಿಕೊಂಡು, ಗುರುತಿನ ಚೀಟಿ ನೀಡುತ್ತಿದೆ. ಇ-ಶ್ರಮ್ ಪೋರ್ಟ್ಲ್ ನಲ್ಲಿಯೂ 379 ವಿಧದ ಅಸಂಘಟಿತ ಕಾರ್ಮಿಕರನ್ನು ಉಚಿತವಾಗಿ ನೊಂದಣಿ ಮಾಡಲಾಗುತ್ತಿದೆ.
ರಾಜ್ಯದ ಗಾರ್ಮೆಂಟ್ ಸಂಸ್ಥೆಗಳಲ್ಲಿ ಟೈಲರಿಂಗ್ ವೃತ್ತಿ ಮಾಡುತ್ತಿರುವವರಿಗೆ ಉದ್ಯೋಗಿಯ ಸಂಬಳದ ನಿರ್ದಿಷ್ಟ ಶೇಕಡವಾರು ಮೊತ್ತ ಹಾಗೂ ಸಂಸ್ಥೆಯ ಅಷ್ಟೇ ಮೊತ್ತವನ್ನು ಒಟ್ಟು ಮಾಡಿ ಭವಿಷ್ಯ ನಿಧಿಗೆ ಕೊಡುಗೆ ನೀಡುತ್ತಿದ್ದಾರೆ. ಈ ಭವಿಷ್ಯ ನಿಧಿಯನ್ನು ಉದ್ಯೋಗಿಯ ರಾಜೀನಾಮೆ, ನಿವೃತ್ತಿ, ಅನಾರೋಗ್ಯ, ಮದುವೆ, ಶಿಕ್ಷಣ, ನಿವೇಶನ ಖರೀದಿ ಮತ್ತು ಮನೆ ನಿರ್ಮಾಣ ಮುಂತಾದ ಉದ್ದೇಶಗಳಿಗೆ ಹಿಂಪಡೆಯಲು ಅವಕಾಶ ನೀಡಲಾಗಿದೆ. ಆದರೆ ಮನೆಯಲ್ಲಿ ಅಥವಾ ಸಣ್ಣ ಪುಟ್ಟ ಅಂಗಡಿಗಳಲ್ಲಿ ಟೈಲರಿಂಗ್ ವೃತ್ತಿ ಮಾಡುತ್ತಿರುವವರಿಗೆ ಭವಿಷ್ಯ ನಿಧಿಯ ಸೌಲಭ್ಯ ಇಲ್ಲ. ರಾಜ್ಯಾದ್ಯತಂತ ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ 7,280,44 ಟೈಲರಿಂಗ್ ವೃತ್ತಿ ನಿರತ ಕಾರ್ಮಿಕರು ಇದ್ದಾರೆ. ಇವರಿಗೆ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಇದೆ. ಇದು ಅಪಘಾತ ವಿಮೆಯಾಗಿದ್ದು, ಕಾರ್ಮಿಕರಿಗೆ ಸಂಕಷ್ಟದಲ್ಲಿ ನೆರವಾಗಲಿದೆ. ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯಡಿ 60 ವರ್ಷ ಪೂರೈಸಿದ ಅಸಂಘಟಿತ ಕಾರ್ಮಿಕರು ಮಾಸಿಕ ರೂ.3000ಗಳ ನಿಶ್ಚಿತ ಪಿಂಚಣಿ ಪಡೆಯಬಹುದಾಗಿದೆ. ಮುಂದಿನ ವರ್ಷದಲ್ಲಿ ರಾಜ್ಯ ಸರ್ಕಾರದಿಂದ ನೇಕಾರರು ಹಾಗೂ ಟೈಲರಿಂಗ್ ವೃತ್ತಿ ತೊಡಗಿದವರಿಗೆ ವಿಶೇಷ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿ ಮಾಡಲಾವುದು ಎಂದು ಪುನರುಚ್ಛರಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸೆಸ್ ಸಂಗ್ರಹಕ್ಕೆ ಚಿಂತನೆ
ನಿರ್ಮಾಣ ಕ್ಷೇತ್ರದ ಸೆಸ್ ಮಾದರಿಯಂತೆ ಗಾರ್ಮೆಂಟ್, ವಾಹನ ತಯಾರಿಕೆ, ಸಾರಿಗೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಶೇ.1 ರಷ್ಟು ಸೆಸ್ ಸಂಗ್ರಹಿಸಲು ಚಿಂತನೆ ನಡೆಸಲಾಗುತ್ತಿದೆ. ಈ ಸೆಸ್‌ನಿಂದ ಸಂಗ್ರಹವಾದ ಹಣದಲ್ಲಿ ಆಯಾ ಕ್ಷೇತ್ರಗಳಲ್ಲಿ ತೊಡಗಿರುವ ಕಾರ್ಮಿಕರಿಗೆ ಯೋಜನೆಗಳನ್ನು ರೂಪಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಈ ಸಂದರ್ಭದಲ್ಲಿ ತಿಳಿಸಿದರು.