ಸಮಾಜ ಸೇವೆಗೆ ‘ಅಪ್ಪು’ ಪ್ರೇರಣೆ- ಡಾ.ಸಿ.ಎನ್.ಅಶ್ವತ್ಥ ನಾರಾಯಣ
ಬೆಂಗಳೂರು:
ಪುನೀತ್ ರಾಜ್ ಕುಮಾರ್ ಅವರು ಅಭಿನಯದ ಜೊತೆಗೆ ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ಜನಸೇವೆಯಲ್ಲಿ ತೊಡಗಲು ಸದಾ ಪ್ರೇರಕ ಶಕ್ತಿಯಾಗಿ ಚಿರಾಯುವಾಗಿರುತ್ತಾರೆ ಎಂದು ಮಲ್ಲೇಶ್ವರ ಕ್ಷೇತ್ರದ ಶಾಸಕರೂ ಆದ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ಟೀಮ್ ದ್ವಿಚಕ್ರ ಮತ್ತು ಇಂಚರ ಸ್ಟುಡಿಯೊ ವತಿಯಿಂದ ಅಪ್ಪು ಅಗಲಿದ ಒಂದು ತಿಂಗಳ ನೆನಪಿಗಾಗಿ ಭಾನುವಾರ ಏರ್ಪಡಿಸಿದ್ದ ‘ರೈಡ್ ಫಾರ್ ಅಪ್ಪು’ ಬೈಕ್ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪುನೀತ್ ಅವರ ಸಾಧನೆಯು ದಿನದಿನವೂ ಹೆಚ್ಚೆಚ್ಚು ಜನರನ್ನು ತಲುಪುತ್ತಿದೆ. ಇದು ನಮ್ಮ ವಿದ್ಯಾರ್ಥಿ ಸಮೂಹ ಸೇರಿದಂತೆ ಎಲ್ಲರಿಗೂ ಸ್ಫೂರ್ತಿಯಾಗಬೇಕು. ಪ್ರತಿಯೊಬ್ಬರೂ ತಂತಮ್ಮ ಕ್ಷೇತ್ರದಲ್ಲಿ ಸ್ವಂತಿಕೆ ಹಾಗೂ ಸಮಾಜಪರ ಮನೋಭಾವದೊಂದಿಗೆ ಕೆಲಸ ಮಾಡಬೇಕು ಎಂದು ಸಚಿವರು ಅಭಿಪ್ರಾಯಪಟ್ಟರು.
ಸ್ವಾತಂತ್ರ್ಯ ಉದ್ಯಾನದಿಂದ ಅಪ್ಪು ಸಮಾಧಿಯವರೆಗೆ ನಡೆದ ಮೆರವಣಿಗೆಯಲ್ಲಿ ಸುಮಾರು 200 ಬೈಕ್ ಸವಾರರು ಪಾಲ್ಗೊಂಡಿದ್ದರು. ಪುನೀತ್ ಅವರು ಹೆಲ್ಮೆಟ್ ಧರಿಸುವುದರ ಮಹತ್ವ ಮನಗಾಣಿಸುವ ಜಾಹೀರಾತಿನ ಮೂಲಕ ರಸ್ತೆ ಸುರಕ್ಷತೆಯ ಅರಿವು ಮೂಡಿಸಿದ್ದನ್ನು ನೆನೆದು, ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಹೆಲ್ಮೆಟ್ ಧರಿಸಿದ್ದರು. ಸಚಿವ ಅಶ್ವತ್ಥ ನಾರಾಯಣ ಕೂಡ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುವ ಮೂಲಕವೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Also Read: Puneeth Rajkumar will be an inspiration forever: Karnataka Minister