ಬೆಂಗಳೂರು: ಭಾರತವನ್ನು 2047ರೊಳಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಪುರುಷರ ಜೊತೆಗೆ ಮಹಿಳೆಯರ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ ಎಂಬ ನಂಬಿಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಹೇಳಿದರು.
ಮಲ್ಲೇಶ್ವರದ ಹವ್ಯಕ ಭವನದಲ್ಲಿ ಬೆಂಗಳೂರು ಮಹಾನಗರ ಮಹಿಳಾ ಮೋರ್ಚಾ ವತಿಯಿಂದ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಧಾನಿ ಮೋದಿ ಅವರು “ಪ್ರಧಾನ ಸೇವಕ” ಎಂಬ ಮನೋಭಾವದೊಂದಿಗೆ ದೇಶವನ್ನು ಮುನ್ನಡೆಸುತ್ತಿದ್ದಾರೆ ಹಾಗೂ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.
ಹಳೆಯ ಕಾಲದಲ್ಲಿ ಬಡವರ ಮನೆಯ ಹೆಣ್ಣುಮಗುವನ್ನು ಶಾಪ ಎಂದು ಕಾಣುತ್ತಿದ್ದ ಪರಿಸ್ಥಿತಿಯನ್ನು ಬದಲಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದರು. ಹೆಣ್ಣುಮಗು ಶಾಪವಲ್ಲ, ಭಾಗ್ಯ ಎಂದು ಸಮಾಜಕ್ಕೆ ತಿಳಿಸಿದ ಯೋಜನೆ ಇದಾಗಿದೆ ಎಂದು ವಿಜಯೇಂದ್ರ ವಿವರಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಹೆಣ್ಮಕ್ಕಳು ಐದನೇ ಅಥವಾ ಆರನೇ ತರಗತಿಯ ನಂತರ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ಆದರೆ ಯಡಿಯೂರಪ್ಪ ಅವರ ಸರ್ಕಾರ ಜಾರಿಗೊಳಿಸಿದ ಸೈಕಲ್ ಯೋಜನೆ ಹೆಣ್ಮಕ್ಕಳಿಗೆ ಶಿಕ್ಷಣ ಮುಂದುವರಿಸಲು ಸಹಾಯ ಮಾಡಿತು ಎಂದು ಹೇಳಿದರು.
ಇದೇ ವೇಳೆ ಬೆಳಗಾವಿಯಲ್ಲಿ ಪರಿಶಿಷ್ಟ ಪಂಗಡದ ಮಹಿಳೆಯನ್ನು ವಿವಸ್ತ್ರಗೊಳಿಸಿದ ಘಟನೆ ಕುರಿತು ಮಾತನಾಡಿದ ಅವರು, ಆ ಘಟನೆ ಸುರ್ಣಸೌಧದಿಂದ ಕೇವಲ 10 ಕಿಮೀ ದೂರದಲ್ಲಿ ನಡೆದಿದ್ದರೂ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಬಿಜೆಪಿ ನಾಯಕರು ಆ ಕುಟುಂಬಕ್ಕೆ ಧೈರ್ಯ ಹೇಳುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.
ಮಹಿಳೆಯರು ಕೇವಲ ಅಡುಗೆಮನೆಗೆ ಸೀಮಿತವಾಗಿರಬಾರದು; ಸಮಾಜದ ಮುಂಚೂಣಿಯಲ್ಲಿ ಬಂದು ನಾಯಕತ್ವ ವಹಿಸಬೇಕು ಎಂಬ ಜಾಗೃತಿ ಮಹಿಳೆಯರಲ್ಲಿ ಹೆಚ್ಚುತ್ತಿದೆ ಎಂದು ಅವರು ಹೇಳಿದರು. ಪ್ರಧಾನಿ ಮೋದಿ ಮಹಿಳಾ ಮೀಸಲಾತಿ ವಿಚಾರದಲ್ಲಿ ಪ್ರಾಮಾಣಿಕ ಕಾಳಜಿ ತೋರಿಸಿದ್ದು, ಪರಿಶಿಷ್ಟ ಪಂಗಡದ ಮಹಿಳೆ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯಾಗಿ ಆಯ್ಕೆ ಮಾಡಿರುವುದು ಮಹಿಳಾ ಸಬಲೀಕರಣಕ್ಕೆ ನೀಡಿದ ಮಹತ್ವದ ಉದಾಹರಣೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತದಲ್ಲಿ ಮಹಿಳೆಯರನ್ನು ಪರಂಪರೆಯಿಂದಲೂ ಗೌರವದಿಂದ ಕಾಣಲಾಗುತ್ತದೆ. ಶರಣೆ ಅಕ್ಕಮಹಾದೇವಿ, ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ ಸೇರಿದಂತೆ ಅನೇಕ ಮಹನೀಯ ಮಹಿಳೆಯರು ಕನ್ನಡನಾಡಿಗೆ ಹೆಮ್ಮೆ ತಂದಿದ್ದಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಮಾಜಿ ಉಪ ಮುಖ್ಯಮಂತ್ರಿ ಮತ್ತು ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಕು. ಸಿ. ಮಂಜುಳಾ, ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ನಿಕಟಪೂರ್ವ ರಾಜ್ಯ ಕಾರ್ಯದರ್ಶಿ ಭಾರತಿ ಮುಗ್ದಂ, ನಿಕಟಪೂರ್ವ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ, ಮಹಿಳಾ ಆಯೋಗದ ನಿಕಟಪೂರ್ವ ರಾಜ್ಯಾಧ್ಯಕ್ಷೆ ಪ್ರಮೀಳಾ ನಾಯ್ಡು ಸೇರಿದಂತೆ ಹಲವು ಮಹಿಳಾ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
