ಬೆಂಗಳೂರು: ರೌಡಿಶೀಟರ್ ಹಾಗೂ ಕಾಂಗ್ರೆಸ್ ಕಾರ್ಯಕರ್ತ ಹೈದರ್ ಆಲಿ ಹತ್ಯೆ ಪ್ರಕರಣ ಸಂಬಂಧ ರೌಡಿಶೀಟರ್ ಗಳಿಬ್ಬರು ಸೇರಿ ಏಳು ಮಂದಿಯನ್ನು ಇಲ್ಲಿನ ಅಶೋಕನಗರ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಅಶೋಕನಗರ ರೌಡಿ ನಯಾಝ್ ಪಾಷ, ಶಿವಮೊಗ್ಗದ ರೌಡಿ ರಿಝ್ವಾನ್, ಮತೀನ್, ಸದ್ದಮ್, ದರ್ಶನ್, ರಾಹಿದ್, ವಸೀಮ್ ಎಂಬುವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಇದೇ ಪ್ರಕರಣದಲ್ಲಿ ಹಲವು ಆರೋಪಿಗಳು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಿಡಿಎ ಅಧ್ಯಕ್ಷ ಎನ್.ಎ.ಹಾರೀಸ್ ನಿಕಟವರ್ತಿಯಾಗಿದ್ದ ಹೈದರ್ ಆಲಿ, ಆನೆಪಾಳ್ಯ ಸೇರಿದಂತೆ ವಿವಿಧೆಡೆ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದ. ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ಹೈದರ್ ಆಲಿ ಸಹೋದರನಿಗೆ ಟಿಕೆಟ್ ಸಿಗಬಹುದೆಂದು ಚರ್ಚೆ ನಡೆಯುತಿತ್ತು. ಹೈದರ್ ಆಲಿ ಇದ್ದರೆ ತಮಗೆ ತೊಂದರೆಯಾಗುತ್ತದೆಂದು ಭಾವಿಸಿ ಈತನ ಹತ್ಯೆ ಮಾಡಿರಬಹುದೆಂದು ಮೇಲ್ನೋಟಕ್ಕೆ ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
ಕೊಲೆಯಾದ ರೌಡಿ ಹೈದರ್ ಅಲಿ ವಿರುದ್ಧ ಹಲವು ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಮತೀನ್ ತಂಡ ಹಾಗೂ ಹೈದರ್ ಗೆ ಹಳೆ ವೈಷಮ್ಯವೂ ಇತ್ತು. ಈ ಕಾರಣಕ್ಕೆ ಸಂಚು ರೂಪಿಸಿ ಹತ್ಯೆಗೈಯ್ಯಲಾಗಿದೆ. ಆದರೆ, ಹೈದರ್ ಹತ್ಯೆ ರಾಜಕೀಯ ವಿಚಾರಕ್ಕೂ ನಡೆದಿರುವುದನ್ನು ತಳ್ಳಿ ಹಾಕುವಂತಿಲ್ಲಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಫೆ.22ರಂದು ರಾತ್ರಿ ಸ್ನೇಹಿತರ ಜತೆ ರೆಸಿಡೆನ್ಸಿ ರಸ್ತೆ ಪಬ್‍ಗೆ ತೆರಳಿದ್ದ ಹೈದರ್ ಪಾರ್ಟಿ ಮಾಡಿದ್ದು, ತಡರಾತ್ರಿ 12.50ರ ಸುಮಾರಿಗೆ ಸ್ನೇಹಿತನೊಂದಿಗೆ ಸ್ಕೂಟರ್ ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅಶೋಕನಗರ ಪೊಲೀಸ್ ಠಾಣೆಗೆ ಕೂಗಳತೆ ದೂರದಲ್ಲಿರುವ ಫುಟ್ಬಾಲ್ ಸ್ಟೇಡಿಯಂ ರಸ್ತೆಯಲ್ಲಿಯೇ ಕಾರು ಹಾಗೂ ಬೈಕ್‍ನಲ್ಲಿ ಬಂದಿದ್ದ ದುಷ್ಕರ್ಮಿಗಳು ಅಡ್ಡಗಟ್ಟಿದ್ದರು. ಮಾರಕಾಸ್ತ್ರಗಳಿಂದ ಹೈದರ್ ಮೇಲೆ ಮನಸೋ ಇಚ್ಛೆ ದಾಳಿ ಮಾಡಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.