
ಬೆಂಗಳೂರು: ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ (KCSDC) ಹೊಸ ಸಾಲ, ಸಹಾಯಧನ ಹಾಗೂ ಕಲ್ಯಾಣ ಯೋಜನೆಗಳು ಮತ್ತು ಅಧಿಕೃತ ವೆಬ್ ಪೋರ್ಟಲ್ ಅನ್ನು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಅವರು ಶುಕ್ರವಾರ ಶೇಷಾದ್ರಿಪುರದಲ್ಲಿರುವ ಕೆಎಂಡಿಸಿ ಭವನದಲ್ಲಿ ಲೋಕಾರ್ಪಣೆಗೊಳಿಸಿದರು.
ಕಾರ್ಯಕ್ರಮದ ಬಳಿಕ ಮಾತನಾಡಿದ ಝಮೀರ್ ಅಹ್ಮದ್ ಖಾನ್ ಹೇಳಿದರು — “ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು’ ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಸಮಾಜದ ಅಂಚಿನಲ್ಲಿರುವ ಜನರನ್ನು ಸಬಲಗೊಳಿಸಲು ಪ್ರತ್ಯೇಕ ನಿಗಮಗಳನ್ನು ಸ್ಥಾಪಿಸಿ, ವಿಶೇಷ ಯೋಜನೆಗಳನ್ನು ಜಾರಿಗೊಳಿಸಲಾಗಿದೆ,” ಎಂದು ಹೇಳಿದರು.
ಅವರು ಮುಂದುವರಿದು, “ಕ್ರಿಶ್ಚಿಯನ್ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಹಿತಾಸಕ್ತಿಗಾಗಿ ಹಾಗೂ ಅವರ ಸಂಸ್ಥೆಗಳ ಬಲವರ್ಧನೆಗಾಗಿ ಈ ನಿಗಮವನ್ನು ಸ್ಥಾಪಿಸಲಾಗಿದೆ. ಮುಖ್ಯಮಂತ್ರಿಗಳವರು ನೀಡಿರುವ ₹250 ಕೋಟಿ ರೂ. ಅನುದಾನ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ ಪರಿಣಾಮಕಾರಿಯಾಗಿ ಉಪಯೋಗವಾಗಲಿ ಎಂಬುದು ನನ್ನ ಆಶಯ,” ಎಂದು ಹೇಳಿದರು.
ಸಮಗ್ರ ಅಭಿವೃದ್ಧಿಗೆ ನಿಗಮದ ನೂತನ ಯೋಜನೆಗಳು
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮಾತನಾಡಿ, ನಿಗಮದ ಹೊಸ ಯೋಜನೆಗಳು ಕ್ರಿಶ್ಚಿಯನ್ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಲಿ ಎಂದು ಹಾರೈಸಿದರು.
ನಿಗಮದ ಅಧ್ಯಕ್ಷ ಪ್ರೊ. ಎಸ್. ಜಾಫೆಟ್ ಮಾತನಾಡಿ, “ಈ ನಿಗಮದ ಸ್ಥಾಪನೆಗೆ ಕಾರಣರಾದ ಮುಖ್ಯಮಂತ್ರಿಗಳು, ಸಚಿವರು ಮತ್ತು ಕ್ರಿಶ್ಚಿಯನ್ ಮುಖಂಡರಿಗೆ ಧನ್ಯವಾದಗಳು. ನಿಗಮದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಬದ್ಧರಾಗಿದ್ದೇವೆ,” ಎಂದು ತಿಳಿಸಿದರು.
ಅವರು ಚರ್ಚುಗಳು, ಸಂಸ್ಥೆಗಳು ಹಾಗೂ ಸಮುದಾಯದ ಮುಖಂಡರು ನಿಗಮದ ಯೋಜನೆಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡುವುದರ ಮೂಲಕ ಅರ್ಹ ಫಲಾನುಭವಿಗಳು ಯೋಜನೆಗಳ ಪ್ರಯೋಜನ ಪಡೆಯಲು ಸಹಕರಿಸಬೇಕೆಂದು ವಿನಂತಿಸಿದರು.
ಕಾರ್ಯಕ್ರಮದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಟೋನಿ ಮರಿಯಾ ಇಮ್ಯಾನ್ಯುಯಲ್, ನಿರ್ದೇಶಕ ಮಂಡಳಿಯ ಸದಸ್ಯರು ಸಂಜೀವ್ ಕುಮಾರ್ ಜಾಗೀರ್ದಾರ್, ಪ್ರಶಾಂತ್ ರಾಜ್ ಜತ್ತನ್ನ, ಹರ್ಷ ಮೆಲ್ವಿನ್ ಲಾಸ್ರಾಡೊ, ಸಂದೀಪ್, ಜೋಸೆಫ್ ಕುಮಾರ್, ಜಿ.ಜೆ. ರವಿಕುಮಾರ್, ಜಿ.ಕ್ಸೇವಿಯರ್, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹ್ಮದ್, ಕೆಎಂಡಿಸಿ ಅಧ್ಯಕ್ಷ ಅಲ್ತಾಫ್ ಖಾನ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.