Home ಬೆಂಗಳೂರು ನಗರ ಕರ್ನಾಟಕ ಎಸ್‌ಸಿ / ಎಸ್‌ಟಿ ಕಲ್ಯಾಣಕ್ಕಾಗಿ ಈ ವರ್ಷ ರೂ. 26,000 ಕೋಟಿ

ಕರ್ನಾಟಕ ಎಸ್‌ಸಿ / ಎಸ್‌ಟಿ ಕಲ್ಯಾಣಕ್ಕಾಗಿ ಈ ವರ್ಷ ರೂ. 26,000 ಕೋಟಿ

100
0

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಅಭಿವೃದ್ದಿ ಪರಿಷತ್ ಸಭೆಯ

ಬೆಂಗಳೂರು:

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಮಗ್ರ ಅಭಿವೃದ್ದಿಗಾಗಿ ಕರ್ನಾಟಕ ಅನುಸೂಚಿತ ಜಾತಿಗಳ ಉಪಹಂಚಿಕೆ ಮತ್ತು ಬುಡಕಟ್ಟು ಉಪಹಂಚಿಕೆ ಅಧಿನಿಯಮ 2013 ನ್ನು ಜಾರಿಗೆ ತಂದು ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾಯ್ದೆಯನ್ವಯ ರಾಜ್ಯ ಅಭಿವೃದ್ದಿ ಪರಿಷತ್ ಸಭೆ ನಡೆಸಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ.

2021-22 ನೇ ಸಾಲಿನ ಆಯವ್ಯಯ ಹಂಚಿಕೆ ವಿವರ

2021-22 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯವರ ಅಭಿವೃದ್ಧಿಗಾಗಿ 18,331.54 ಕೋಟಿ ರೂ. ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ 7673.47 ಕೋಟಿ ರೂ.ಗಳು ಒಟ್ಟಾರೆಯಾಗಿ 26,005.01 ಕೋಟಿ ರೂ. ಅನುದಾನವನ್ನು 35 ಅಭಿವೃದ್ಧಿ ಇಲಾಖೆಗಳಿಗೆ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು.

ಇಂದಿನ ರಾಜ್ಯ ಪರಿಷತ್ ಸಭೆಯಲ್ಲಿ ಎಲ್ಲಾ ಇಲಾಖೆಗಳ ಕ್ರಿಯಾ ಯೋಜನೆಗಳ ಬಗ್ಗೆ ಚರ್ಚಿಸಿ ಅನುಮೋದನೆ ನೀಡಲಾಗಿದೆ.

ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ನಿಯಮಗಳು, 2017 ರ ಅನ್ವಯ ಮುಂದುವರೆದ ಕಾಮಗಾರಿಗಳಿಗೆ ಮೊದಲನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡಿ, ಅನುಷ್ಠಾನ ಮಾಡಲು ಎಲ್ಲಾ ಇಲಾಖೆಗಳಿಗೆ ತಿಳಿಸಿದರು.

ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ನೋಡಲ್ ಏಜೆನ್ಸಿ ಸಭೆ ನಡೆಸಿ ವಿವಿಧ ಇಲಾಖೆಗಳು ಸಲ್ಲಿಸಿರುವ ಕ್ರಿಯಾ ಯೋಜನೆಯನ್ನು ಪರಿಶೀಲಿಸಿ ಅಗತ್ಯ ಮಾರ್ಪಾಡು ಹಾಗೂ ಶಿಫಾರಸ್ಸುಗಳೊಂದಿಗೆ ರಾಜ್ಯ ಪರಿಷತ್ ಅನುಮೋದನೆಗೆ ಕ್ರಿಯಾ ಯೋಜನೆ ಮಂಡಿಸಲಾಯಿತು.

ಈ ಕ್ರಿಯಾ ಯೋಜನೆಯನ್ನು ಎಲ್ಲಾ ಇಲಾಖೆಗಳಿಗೆ ಕಳುಹಿಸಿ, ಆಯಾ ಇಲಾಖೆಗಳು ಅಗತ್ಯವಿದ್ದಲ್ಲಿ ಸರ್ಕಾರಿ ಆದೇಶಗಳನ್ನು ಹೊರಡಿಸಿ, ನಿಗದಿತ ಅವಧಿಯೊಳಗೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ನಿರ್ದೇಶನ ನೀಡಿದರು.

ಪ್ರಸಕ್ತ ವರ್ಷದ ಪರಿಸ್ಥಿತಿಯನ್ನು ಗಮನಿಸಿ, ಆರ್ಥಿಕ, ಶಿಕ್ಷಣ, ಆರೋಗ್ಯ ಮತ್ತು ಇತರೆ ಅಭಿವೃದ್ದಿ ಕಾರ್ಯಕ್ರಮಗಳು ಹಾಗೂ ಮೂಲಭೂತ ಸೌಕರ್ಯಗಳನ್ನು ಸಂಬಂಧಿಸಿದ ಇಲಾಖೆಗಳು ಪ.ಜಾತಿ/ ಪ.ಪಂಗಡದ ಜನರಿಗೆ ಅನುಕೂಲವಾಗುವಂತೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ತಿಳಿಸುತ್ತಾ, 100% ಗುರಿಯನ್ನು ಸಾಧಿಸಲು ಸ್ಪಷ್ಟ ನಿರ್ದೇಶನ ನೀಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಭೂಮಿ ಹಂಚಿಕೆ ಮತ್ತಿತರ ಯಾವುದೇ ಸೌಲಭ್ಯ ವಿತರಿಸುವಾಗ ಜಂಟಿ ಹೆಸರಿನಲ್ಲೇ ನೀಡುವಂತೆ ಸೂಚಿಸಲಾಯಿತು.

ಎಸ್.ಸಿ/ ಎಸ್‍ಟಿ ಫಲಾನುಭವಿಗಳಿಗೆ ಶೌಚಾಲಯ / ಸ್ನಾನ ಗೃಹ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯದ ಪಾಲು ಸೇರಿಸಿ ನೀಡುತ್ತಿರುವ ಸಹಾಯಧನವನ್ನು ತಲಾ ರೂ. 15,000 ಗಳಿಂದ 20,000 ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಯಿತು.

ಈ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಜನರ ಬದುಕಿನ ಮಟ್ಟ ಸುಧಾರಣೆಗೆ ಪೂರಕವಾಗುವಂತೆ ಈ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.
ಅಧಿಕಾರಿಗಳು ಸ್ವಯಂ ಪ್ರೇರಿತರಾಗಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕೆಂದು ಹಾಗೂ ಇದರಲ್ಲಿ ಯಾವುದೇ ಲೋಪವಾದಲ್ಲಿ ಕಾಯ್ದೆಯನ್ವಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

2020-21 ನೇ ಸಾಲಿನ ಪ್ರಗತಿಯ ವಿವರ

2020-21ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯವರ ಅಭಿವೃದ್ದಿಗಾಗಿ 18,131.12 ಕೋಟಿ ರೂ. ಗಳನ್ನು ಒದಗಿಸಿದ್ದು, 17,352.45 ಕೋಟಿ ರೂ.ಗಳು ವೆಚ್ಚವಾಗಿರುತ್ತದೆ. ಶೇಕಡ ಪ್ರಗತಿ -96%.

ಪರಿಶಿಷ್ಟ ಪಂಗಡದವರ ಅಭಿವೃದ್ದಿಗಾಗಿ 7814.78 ಕೋಟಿ ರೂ.ಗಳನ್ನು ಒದಗಿಸಿದ್ದು, 7294.54 ಕೋಟಿ ರೂ .ಗಳು ವೆಚ್ಚವಾಗಿರುತ್ತದೆ. ಶೇಕಡ ಪ್ರಗತಿ – 93%.

36 ಅಭಿವೃದ್ದಿ ಇಲಾಖೆಗಳಿಂದ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದ್ದು, ಒಟ್ಟಾರೆ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅಡಿಯಲ್ಲಿ ಹಂಚಿಕೆ ಮಾಡಿರುವ ರೂ 25,945.90 ಕೋಟಿಗಳಲ್ಲಿ, ರೂ.24,646.99 ಕೋಟಿಗಳ ವೆಚ್ಚ ಭರಿಸಲಾಗಿದೆ. ಶೇಕಡ ಪ್ರಗತಿ-95%.

2020-21 ನೇ ಸಾಲಿನಲ್ಲಿ ಕೃಷಿ ವಲಯದಡಿ ಕೃಷಿ ಹಾಗೂ ಪಶುಸಂಗೋಪನೆ ಕಾರ್ಯಕ್ರಮಗಳಿಗೆ 1594.40 ಕೋಟಿ ರೂ. ವೆಚ್ಚದಲ್ಲಿ 14.89 ಲಕ್ಷ ಪರಿಶಿಷ್ಟ ಜಾತಿ ಹಾಗೂ 8.64 ಲಕ್ಷ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ 845.28 ಕೋಟಿ ರೂ. ವೆಚ್ಚದಲ್ಲಿ 13.43 ಲಕ್ಷ ಪರಿಶಿಷ್ಟ ಜಾತಿ ಹಾಗೂ 6.00 ಲಕ್ಷ ಪರಿಶಿಷ್ಟ ಪಂಗಡದ ಮಹಿಳೆಯರು ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ಇತ್ಯಾದಿ ಸೌಲಭ್ಯ ಒದಗಿಸಲಾಗಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಿಂದ 910.64 ಕೋಟಿ ರೂ. ವೆಚ್ಚದಲ್ಲಿ ಪರಿಶಿಷ್ಟ ಜಾತಿಯ 15.45 ಲಕ್ಷ ಮತ್ತು ಪರಿಶಿಷ್ಟ ಪಂಗಡದ 6.40 ಲಕ್ಷ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಸೈಕಲ್ , ಆರ್.ಟಿ.ಇ ಕಾಯ್ದೆ ಮತ್ತು ಇತರೆ ಶುಲ್ಕ ಪಾವತಿ, ಮಧ್ಯಾಹ್ನ ಭೋಜನ, ಇತ್ಯಾದಿ ಸೌಲಭ್ಯಗಳನ್ನು ನೀಡಲಾಗಿದೆ.

ಉನ್ನತ ಶಿಕ್ಷಣ ಇಲಾಖೆಯಲ್ಲಿ 83.38 ಕೋಟಿ ರೂ. ವೆಚ್ಚದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯ ಒದಗಿಸಲಾಗಿದೆ.

ಗ್ರಾಮೀಣಾಭೀವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ರೂ.2888.28 ಕೋಟಿವೆಚ್ಚದಲ್ಲಿ ಸ್ವಚ್ಚ ಭಾರತ ಕುಡಿಯುವ ನೀರು ಮತ್ತು ನರೇಗಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ಪ. ಜಾತಿಯ 5.81 ಲಕ್ಷ ಮತ್ತು ಪ. ಪಂಗಡದ 3.22 ಲಕ್ಷ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಗಿದೆ.

ಕಂದಾಯ ಇಲಾಖೆಯಿಂದ 284.27 ಕೋಟಿ ರೂ. ವೆಚ್ಚದಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಪರಿಶಿಷ್ಟ ಜಾತಿ 17.34 ಲಕ್ಷ ಮತ್ತು ಪರಿಶಿಷ್ಟ ಪಂಗಡದ 7.29 ಲಕ್ಷ ಫಲಾನುಭವಿಗಳಿಗೆ ವಿವಿಧ ರೀತಿಯ ಪಿಂಚಣಿಗಳನ್ನು ಒದಗಿಸಲಾಗಿದೆ.

ಇಂಧನ ಇಲಾಖೆಯಿಂದ 2159.74 ಕೋಟಿ ರೂ. ವೆಚ್ಚದಲ್ಲಿ ಪರಿಶಿಷ್ಟ ಜಾತಿ 6.53 ಲಕ್ಷ ಮತ್ತು ಪರಿಶಿಷ್ಟ ಪಂಗಡದ 2.81 ಲಕ್ಷ ರೈತರ 10 ಹೆಚ್,ಪಿ ಪಂಪ್ ಸೆಟ್ ಗಳಿಗೆ ಸಹಾಯಧನ/ ಗಂಗಾ ಕಲ್ಯಾಣದಡಿ ಕೊಳವೆ ಬಾವಿಗಳ ವಿದ್ಯುದ್ದೀಕರಣ, ಕುಟೀರ ಜ್ಯೋತಿ/ ಭಾಗ್ಯ ಜ್ಯೋತಿ ಸೌಲಭ್ಯ ಒದಗಿಸಲಾಗಿದೆ.

ವಸತಿ ಇಲಾಖೆಯಡಿ 863.41 ಕೋಟಿ ರೂ. ವೆಚ್ಚದಲ್ಲಿ ಪರಿಶಿಷ್ಟ ಜಾತಿಯ 24,290 ಮತ್ತು ಪ.ಪಂಗಡ -9,546 ಕುಟುಂಬಗಳಿಗೆ ವಸತಿ ಸೌಲಭ್ಯ ಒದಗಿಸಲಾಗಿದೆ.

ಇದೇ ರೀತಿ ಲೋಕೋಪಯೋಗಿ , ನಗರಾಭಿವೃದ್ದಿ , ಜಲ ಸಂಪನ್ಮೂಲ ಇಲಾಖೆ ಮತ್ತು ಯೋಜನಾ ಇಲಾಖೆಗಳ ಮೂಲಕ ವಿವಿಧ ಕಾಮಗಾರಿಗಳಿಗಾಗಿ 5535.88 ಕೋಟಿ ರೂ. ವೆಚ್ಚ ಭರಿಸಲಾಗಿದೆ.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಡಿ 1055.33 ಕೋಟಿ ರೂ. ವೆಚ್ಚದಲ್ಲಿ ಪ.ಜಾತಿಯ 2.37 ಲಕ್ಷ ಮತ್ತು ಪ.ಪಂಗಡ 1 ಲಕ್ಷ ಫಲಾನುಭವಿಗಳಿಗೆ ವಿವಿಧ ಸೌಲಭ್ಯ ಒದಗಿಸಲಾಗಿದೆ.

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಡಿ 780.97 ಕೋಟಿ ರೂ. ವೆಚ್ಚದಲ್ಲಿ ಅನ್ನಭಾಗ್ಯ ಯೋಜನೆಯಡಿ ಪ.ಜಾತಿಯ 17.65 ಲಕ್ಷ ಮತ್ತು ಪ.ಪಂಗಡದ 7.28 ಲಕ್ಷ ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಪಡಿತರ ಆಹಾರವನ್ನು ಒದಗಿಸಲಾಗಿದೆ.

ಸಮಾಜ ಕಲ್ಯಾಣ ಇಲಾಖೆಯಡಿ ಪರಿಶಿಷ್ಟ ಜಾತಿಯವರಿಗೆ 3200.87 ಕೋಟಿ ರೂ. ಹಾಗೂ ಪರಿಶಿಷ್ಟ ಪಂಗಡದವರಿಗೆ ರೂ.1270.50 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿ ವೇತನ, ವಿದ್ಯಾರ್ಥಿ ನಿಲಯ ನಿರ್ವಹಣೆ, ವಸತಿ ಶಾಲೆ ನಿರ್ವಹಣೆ, ವಿವಿಧ ನಿಗಮಗಳಿಂದ ಆರ್ಥಿಕ ಸಹಾಯ ಇತ್ಯಾದಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದ್ದು, ಪರಿಶಿಷ್ಟ ಜಾತಿ-11.73 ಲಕ್ಷ ಹಾಗೂ ಪರಿಶಿಷ್ಟ ಪಂಗಡದ -4.62 ಲಕ್ಷ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಗಿದೆ.

ಕ್ರೈಸ್ ವಸತಿ ಶಾಲೆಗಳಲ್ಲಿ 1.46 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಇತರೆ ಇಲಾಖೆಗಳಾದ ಕೌಶಲ್ಯಾಭಿವೃದ್ದಿ ,ವಾರ್ತಾ, ಯುವಸಬಲೀಕರಣ, ಐ.ಟಿ.& ಬಿ.ಟಿ , ಸಣ್ಣ ಕೈಗಾರಿಕೆ ಇತ್ಯಾದಿ ಇಲಾಖೆಗಳಿಗೆ ಅನುದಾನ ಒದಗಿಸಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ.

ಸಭೆಯಲ್ಲಿ ಉಪ ಮುಖ್ಯಮಂತ್ರಿಗಳು, ಗೋವಿಂದ ಎಂ. ಕಾರಜೋಳ, ಉಪ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಶ್ರೀ ಲಕ್ಷ್ಮಣ್ ಸವದಿ, ಸಮಾಜ ಕಲ್ಯಾಣ ಸಚಿವ ಶ್ರೀ ಬಿ. ಶ್ರೀರಾಮುಲು, ಗ್ರಾಮೀಣಾಭಿವೃದ್ಧಿ ಸಚಿವ ಶ್ರೀ ಕೆ. ಎಸ್. ಈಶ್ವರಪ್ಪ, ಶಾಸಕರಾದ ರಾಜುಗೌಡ, ಎನ್. ಮಹೇಶ್, ಎಸ್.ರಘು, ಶ್ರೀಐಹೊಳೆ ದುರ್ಯೋಧನ ಹಾಗೂ ಸಂಸದ ಡಾ. ಜಿ. ಉಮೇಶ್ ಜಾಧವ, ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಅಪರ ಮುಖ್ಯ ಕಾರ್ಯದರ್ಶಿ ಡಾ. ಎನ್. ನಾಗಾಂಭಿಕದೇವಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here