Home ಬೆಂಗಳೂರು ನಗರ Karnataka State Brahmin Development Board President Asagodu Jayasimha | ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ...

Karnataka State Brahmin Development Board President Asagodu Jayasimha | ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳಿಗೆ ರೂ.5.16 ಕೋಟಿ ವಿದ್ಯಾರ್ಥಿ ವೇತನ ಡಿಬಿಟಿ ಮೂಲಕ ವರ್ಗಾವಣೆ: ಅಸಗೋಡು ಜಯಸಿಂಹ

65
0

ಬೆಂಗಳೂರು, ಮಾರ್ಚ್ 25 (ಕರ್ನಾಟಕ ವಾರ್ತೆ): ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದ 3351 ವಿದ್ಯಾಥಿಗಳಿಗೆ ರೂ.5.16 ಕೋಟಿಗಳ ವೆಚ್ಚದಲ್ಲಿ ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸಿ ಡಿಬಿಟಿ ಮೂಲಕ ಪಾವತಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಸಗೋಡು ಜಯಸಿಂಹ ತಿಳಿಸಿದರು.

ಇಂದು ಕರ್ನಾಟಕ ರಾಜ್ಯ ಬ್ರಾಹ್ಮಣರ ಅಭಿವೃದ್ಧಿ ಮಂಡಳಿಯಲ್ಲಿ ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಮಾತನಾಡಿದ ಅವರು, ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದ 4123 ವಿದ್ಯಾರ್ಥಿಗಳು ಶಿಷ್ಯ ವೇತನಕ್ಕಾಗಿ ಅರ್ಜಿ ಸಲ್ಲಿಸಲಾಗಿದ್ದು, 3351 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಾವತಿಸಲಾಗಿದೆ. ಅವರಲ್ಲಿ ಪದವಿ ಪೂರ್ವ (ಪಿಯು), ಸಾಮಾನ್ಯ ಪದವಿ ವ್ಯಾಸಂಗ ಮಾಡುತ್ತಿರುವ 1511 ವಿದ್ಯಾರ್ಥಿಗಳಿಗೆ ರೂ. 2.26 ಕೋಟಿ, ವೃತ್ತಿಪರ ಕೋರ್ಸ್ (ಮೆಡಿಕಲ್, ಇಂಜಿನಿಯರಿಂಗ್) ವ್ಯಾಸಂಗ ಮಾಡುತ್ತಿರುವ 1840 ವಿದ್ಯಾರ್ಥಿಗಳಿಗೆ ರೂ. 2.90 ಕೋಟಿಗಳನ್ನು ನೇರ ನಗದು ವರ್ಗಾವಣೆ ಮೂಲಕ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣ ಜಮಾಮಾಡಲಾಗಿದೆ ಎಂದರು.

ಆರ್ಥಿಕವಾಗಿ ಹಿಂದುಳಿದಿರುವ ವಿಪ್ರ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬ್ರಾಹ್ಮಣ ಮಂಡಳಿ ವತಿಯಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದರೊಂದಿಗೆ ಸಮಾಜಕ್ಕೆ ಬೆಳಕಾಗಬೇಕು ಎಂದು ವಿದ್ಯಾರ್ಥಿಗಳನ್ನು ಹಾರೈಸಿದರು.

2025-26 ನೇ ಸಾಲಿನ ಆಯವ್ಯಯದಲ್ಲಿ ಸನ್ಯಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ರೂ.10 ಕೋಟಿಗಳ ಅನುದಾನವನ್ನು ಹಂಚಿಕೆ ಮಾಡಿದ್ದಾರೆ. ಇದಕ್ಕಾಗಿ ಮಾನ್ಯ ಸರ್ಕಾರಕ್ಕೆ ಹಾಗೂ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು.

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪುರಸ್ಕಾರ ಮಂಡಳಿ ವತಿಯಿಂದ ಪ್ರತಿ ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಯಲ್ಲಿ ಮೊದಲ 3 ಸ್ಥಾನ ಪಡೆದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಕ್ರಮವಾಗಿ ರೂ. 15 ಸಾವಿರ, ರೂ. 10 ಸಾವಿರ ಹಾಗೂ ರೂ.5 ಸಾವಿರಗಳನ್ನು ಪುರಸ್ಕಾರವಾಗಿ ನೀಡಲಾಗುತ್ತಿದೆ. ರಾಜ್ಯದ 32 ಜಿಲ್ಲೆಗಳ ಒಟ್ಟು 694 ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಪುರಸ್ಕಾರವಾಗಿ ಒಟ್ಟು ರೂ 80 ಲಕ್ಷ 35 ಸಾವಿರಗಳನ್ನು ನೀಡಲಾಗಿರುತ್ತದೆ.

ಸ್ವಯಂ ಉದ್ಯೋಗದಡಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ ಲಾಭದಾಯಕ ಉದ್ಯಮ ಸ್ಥಾಪಿಸಲು ಸಾಲದ ಮೇಲೆ ಶೇಕಡ 20 ರಷ್ಟು ಸಹಾಯಧನ ವಿತರಿಸಲಾಗುತ್ತದೆ. ಸದರಿ ಯೋಜನೆಗೆ 192 ಫಲಾನುಭವಿಗಳು ಅನುಕೂಲ ಪಡೆದುಕೊಂಡಿದ್ದು, ಯೋಜನೆಯ ಒಟ್ಟು ವೆಚ್ಚ ರೂ.36,78, 671 ಗಳಗಿರುತ್ತದೆ.

ಸರ್ಕಾರದ ಎಲ್ಲಾ ನಿಗಮ ಮಂಡಳಿಗಳಲ್ಲಿ ಯಶಸ್ವಿಯಾಗಿ ನಿರ್ವಹಿಸುತ್ತಿರುವ ನೇರ ಸಾಲ ಯೋಜನೆಯನ್ನು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವತಿಯಿಂದಲೂ ಸಹ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದ ವ್ಯಾಪಾರಿಗಳಿಗೆ ಸ್ವಯಂ ಉದ್ಯೋಗ ನಡೆಸಲು ನೇರ ಸಾಲ ನೀಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ ಎಂದು ಅವರು ತಿಳಿಸಿದರು.

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕಿ ನಿರ್ದೇಶಕರಾದ ಶ್ರೀಮತಿ ದೀಪಶ್ರೀ ಕೆ. ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಮಂಡಳಿಗೆ ಹೆಚ್ಚಿನ ಅನುದಾನವು ದೊರಕಿದ್ದಲ್ಲಿ ಸಮುದಾಯದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಯೋಜನೆಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.

LEAVE A REPLY

Please enter your comment!
Please enter your name here