ಕಲಬುರ್ಗಿ (ಚಿತ್ತಾಪುರ): ಮಂತ್ರಿಗಳಾದ ಪ್ರಿಯಾಂಕ್ ಖರ್ಗೆ ಅವರ ಸ್ವಕ್ಷೇತ್ರ ಚಿತ್ತಾಪುರದಲ್ಲಿ ನವೆಂಬರ್ 2ರಂದು ನಡೆಯಲಿರುವ ಆರ್ಎಸ್ಎಸ್ ಪತ ಸಂಚಲನ ಈಗ ರಾಜಕೀಯ ಮತ್ತು ಕಾನೂನು ಸವಾಲಿನ ಹಾದಿಗೆ ತಳ್ಳಿದೆ. ಒಂದೇ ದಿನದಲ್ಲಿ ನಾಲ್ಕು ವಿಭಿನ್ನ ಸಂಘಟನೆಗಳು ಮೆರವಣಿಗೆಗೆ ಅನುಮತಿ ಕೋರಿ ಜಿಲ್ಲಾಡಳಿತದ ಬಾಗಿಲು ತಟ್ಟಿರುವುದು ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ದೊಡ್ಡ ಸವಾಲು ಎಸೆದಿದೆ.
ಕರ್ನಾಟಕ ಹೈಕೋರ್ಟ್ ತಡೆ ತೆರವು ಮಾಡಿದ ನಂತರ ಆರ್ಎಸ್ಎಸ್ ಪತಸಂಚಲನಕ್ಕೆ ಸಜ್ಜಾಗಿದ್ದು, ತಹಸೀಲ್ದಾರರ 11 ಅಂಶಗಳ ಪ್ರಶ್ನೆಗಳಿಗೆ ಪಿನ್ ಟು ಪಿನ್ ಉತ್ತರ ನೀಡಿದ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದೆ. “ನಾವು ಯಾವುದೇ ರಾಜಕೀಯ ಸಂಬಂಧವಿಲ್ಲದ, ನಿಸ್ವಾರ್ಥ ಸಂಘಟನೆ” ಎಂದು ಆರ್ಎಸ್ಎಸ್ ಸ್ಪಷ್ಟಪಡಿಸಿದೆ.
ಆದರೆ ಇದೀಗ ಭೀಮ್ ಆರ್ಮಿ, ದಲಿತ ಪ್ಯಾಂಥರ್ ಸಂಘಟನೆ, ಮತ್ತು ಗೋಂಡ-ಕುರುಬ ಹೋರಾಟ ಸಮಿತಿ ಸಹ ಅದೇ ದಿನ ಮೆರವಣಿಗೆ ಹಾಗೂ ಪ್ರತಿಭಟನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿರುವುದರಿಂದ ಪರಿಸ್ಥಿತಿ ಗೊಂದಲಮಯವಾಗಿದೆ.
ಭೀಮ್ ಆರ್ಮಿ ತನ್ನ ಅರ್ಜಿಯಲ್ಲಿ “ಆರ್ಎಸ್ಎಸ್ ಪತಸಂಚಲನದಲ್ಲಿ ಲಾಠಿ ಮತ್ತು ಖಡ್ಗಗಳ ಪ್ರದರ್ಶನ ಉಗ್ರವಾದ ಮನೋಭಾವ ಬೆಳೆಸುತ್ತದೆ, ಹೀಗಾಗಿ ಅನುಮತಿ ನೀಡಬಾರದು” ಎಂದು ಆಗ್ರಹಿಸಿದೆ. ಈ ನಿಲುವಿಗೆ ಸೌಹಾರ್ದ ಕರ್ನಾಟಕ ಹೋರಾಟ ಸಮಿತಿ ಸಹ ಬೆಂಬಲ ನೀಡಿದ್ದು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಇನ್ನೊಂದೆಡೆ ಗೋಂಡಕುರುಬ ಹೋರಾಟ ಸಮಿತಿ “ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವಂತೆ ಆಗ್ರಹಿಸಿ” ನವೆಂಬರ್ 2ರಂದು ಸುಮಾರು 5,000 ಜನರನ್ನು ಸೇರಿಸಿ ಪ್ರತಿಭಟನೆ ನಡೆಸಲು ಸಜ್ಜಾಗಿದೆ. “12 ವರ್ಷಗಳಿಂದ ಬಿಜೆಪಿ ಸರ್ಕಾರ ಕೇಂದ್ರದಲ್ಲಿದ್ದು ಸಹಿತ ನೀಡಿಲ್ಲ, ಹೀಗಾಗಿ ನಾವು ಹೋರಾಟಕ್ಕೆ ಧುಮುಕುತ್ತೇವೆ” ಎಂದು ಸಂಘಟನೆಯ ನಾಯಕರು ಹೇಳಿದ್ದಾರೆ.
ಈ ನಡುವೆಯೇ ವಿಚಾರ ರಾಜಕೀಯ ತಿರುವು ಪಡೆದಿದ್ದು, ಬಿಜೆಪಿ ಶಾಸಕ ಡಾ. ಅಶ್ವತ್ ನಾರಾಯಣ ಅವರು “ಮಂತ್ರಿಗಳಾದ ಪ್ರಿಯಾಂಕ್ ಖರ್ಗೆ ತಮ್ಮ ಹುದ್ದೆಯ ಪ್ರಭಾವ ಬಳಸಿ ಆರ್ಎಸ್ಎಸ್ ಪತಸಂಚಲನವನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, “ಸರ್ಕಾರದ ನಿಯಮ ಎಲ್ಲರಿಗೂ ಅನ್ವಯಿಸುತ್ತದೆ. ಭೀಮ್ ಆರ್ಮಿಗೆ ಅನ್ವಯಿಸಿದರೆ ಇತರ ಸಂಘಟನೆಗಳಿಗೂ ಅನ್ವಯಿಸುತ್ತದೆ” ಎಂದು ಹೇಳಿದ್ದಾರೆ.
ಇನ್ನೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು “ಯಾರು ಪ್ರತಿಭಟನೆ ಮಾಡಲು ಬಯಸುತ್ತಾರೋ ಅವರು ಮಾಡಲಿ, ನಾವು ಸಹ ಮಾಡ್ತೀವಿ. ಇದು ಸ್ಪರ್ಧೆಯ ವಿಷಯವಲ್ಲ, ಎಲ್ಲರೂ ತಮ್ಮ ರೀತಿಯಲ್ಲಿ ಕಾರ್ಯಕ್ರಮ ನಡೆಸಬಹುದು” ಎಂದು ಹೇಳಿದ್ದಾರೆ.
ನಾಲ್ಕು ಸಂಘಟನೆಗಳ ಎಲ್ಲಾ ಅರ್ಜಿಗಳನ್ನು ಜಿಲ್ಲಾಡಳಿತ ಈಗ ಕೋರ್ಟ್ಗೆ ಕಳುಹಿಸಿದ್ದು, ಅಕ್ಟೋಬರ್ 24ರಂದು ನ್ಯಾಯಾಲಯದ ತೀರ್ಪು ಹೇಗಿರಲಿದೆ ಎಂಬ ಕುತೂಹಲ ಮೂಡಿದೆ.
