Home ಬೆಳಗಾವಿ Ruling and Opposition Members Demand Probe into CL 7 Liquor License Fraud...

Ruling and Opposition Members Demand Probe into CL 7 Liquor License Fraud in Karnataka | ವಸತಿ ಗೃಹಗಳಲ್ಲಿ ಮದ್ಯ ಮಾರಾಟ ಪರವಾನಗಿ ಅವ್ಯವಹಾರ; ತನಿಖೆಗೆ ಆಡಳಿತ-ಪ್ರತಿಪಕ್ಷ ಸದಸ್ಯರ ಆಗ್ರಹ

81
0
Belagavi Winter Session

ಬೆಳಗಾವಿ:

ವಸತಿ ಗೃಹಗಳಲ್ಲಿ (ಬೋರ್ಡಿಂಗ್ ಆಂಡ್ ಲಾಡ್ಜಿಂಗ್) ಮದ್ಯ ಮಾರಾಟಕ್ಕೆ ಪರವಾನಗಿ ನೀಡುವುದರಲ್ಲಿ ಅವ್ಯವಹಾರ ನಡೆದಿದ್ದು, ತನಿಖೆ ನಡೆಸಬೇಕೆಂದು ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಪಕ್ಷಬೇಧ ಮರೆತು ಆಗ್ರಹಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.

ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಎಸ್.ಎನ್. ನಾರಾಯಣಸ್ವಾಮಿ ಪ್ರಸ್ತಾಪಿಸಿದ ವಿಷಯಕ್ಕೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ಅವರ ಉತ್ತರದಿಂದ ಅಸಮಾಧಾನಗೊಂಡ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪಗಳು ನಡೆದು ಕೋಲಾಹಲದ ಪರಿಸ್ಥಿತಿ ನಿರ್ಮಾಣವಾಯಿತು.

MLA S.N. Narayanaswamy
MLA S.N. Narayanaswamy

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ನಾರಾಯಣಸ್ವಾಮಿ, ‘ತಮ್ಮ ಬಂಗಾರಪೇಟೆ ಕ್ಷೇತ್ರದಲ್ಲಿ ನಿಯಮ ಮೀರಿ ಸಿಎಲ್-7 ಪರವಾನಗಿಗಳನ್ನು ನೀಡಲಾಗಿದೆ. ಇದರಲ್ಲಿ ಶೇ.80ರಷ್ಟು ನಿಯಮಗಳ ಉಲ್ಲಂಘನೆಯಾಗಿದೆ. ಯಾವ ಅಂಗಡಿಗೂ ಪಾರ್ಕಿಂಗ್ ಸ್ಥಳಾವಕಾಶವಿಲ್ಲ. ನಿಯಮಗಳ ಅನುಸಾರ ಕೊಠಡಿಗಳ ವಿನ್ಯಾಸವೂ‌ ಇಲ್ಲ. ಜಿಲ್ಲಾ ಅಬಕಾರಿ ಸೂಪರಿಟೆಂಡೆಂಟ್ ರಂಗಪ್ಪ 15 ವರ್ಷಗಳಿಂದ ಒಂದೇ ಸ್ಥಳದಲ್ಲಿ ಠೀಕಾಣಿ ಹೂಡಿದ್ದು, ಅವರು ನಿಯಮ ಮೀರಿ ಪರವಾನಗಿಗಳನ್ನು ಕೊಡುತ್ತಿರುವುದಲ್ಲದೆ, ಸದರಿ ಮದ್ಯದಂಗಡಿಗಳಲ್ಲಿಯೂ ರಂಗಪ್ಪ ಪಾಲುದಾರರಾಗುತ್ತಿದ್ದಾರೆ’ ಎಂದು ಆರೋಪಿಸಿದರು.

ಬಳಿಕ ಸ್ಪಷ್ಟನೆ ನೀಡಿದ ಸಚಿವ ಆರ್.ಬಿ.ತಿಮ್ಮಾಪುರ್, ‘ಸಿಎಲ್-7 ಪರವಾನಗಿಗಳನ್ನು ನೀಡಬೇಕಾದರೆ 18 ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು. ಬಹುತೇಕ ಎಲ್ಲ ಸನ್ನದ್ಧುದಾರರಲ್ಲೂ ಪ್ರಮಾಣ ಪತ್ರಗಳಿವೆ. ಆದರೆ, ಕಟ್ಟಡ ವಿನ್ಯಾಸ ಮತ್ತು ಪಾರ್ಕಿಂಗ್ ಸ್ಥಳದ ಬಗ್ಗೆ ಸ್ಪಷ್ಟ ನಿಯಮಗಳಿಲ್ಲ. ಹೀಗಾಗಿ ಸರಕಾರ ಈ ಸಂಬಂಧ ನಿಯಮಾವಳಿಗಳನ್ನು ರೂಪಿಸಲಿದೆ’ ಎಂದು ಸ್ಪಷ್ಟಣೆ ನೀಡಿದರು.

ಅಲ್ಲದೆ, ನಾರಾಯಣಸ್ವಾಮಿ ಪ್ರಸ್ತಾಪಿಸಿರುವ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಇಲಾಖೆ ಅಧಿಕಾರಿಗಳಿಂದ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ತಿಮ್ಮಾಪುರ್ ಭರವಸೆ ನೀಡಿದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸದಸ್ಯರಾದ ಕೆ.ಶಿವಲಿಂಗೇಗೌಡ, ಗೋಪಾಲಕೃಷ್ಣ ಬೇಳೂರು, ಸಿ.ಎನ್.ಬಾಲಕೃಷ್ಣ, ಸುರೇಶ್‍ಗೌಡ ಸೇರಿದಂತೆ ಹಲವು ಸದಸ್ಯರು ಈ ಕುರಿತು ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.

MLA K. M. Shivalingegowda
MLA K. M. Shivalingegowda

ಕೆ.ಎಂ.ಶಿವಲಿಂಗೇಗೌಡ ಸಿಎಲ್-7 ಸನ್ನದ್ಧ ನೀಡುವುದು ಒಂದು ದಂಧೆಯಾಗಿದೆ. ಬೆಂಗಳೂರಿನಿಂದ ಬಂದ ಅರಸೀಕೆರೆಯಲ್ಲಿ ಪರವಾನಗಿ ಪಡೆದು ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಸರಕಾರಕ್ಕೆ ಕೆಟ್ಟ ಹೆಸರು ಬರಲಿದೆ ಎಂದರು. ಇದಕ್ಕೆ ಧ್ವನಿಗೂಡಿಸಿದ ಗೋಪಾಲಕೃಷ್ಣ ಬೇಳೂರು, ಎಷ್ಟು ಪರವಾನಗಿಗಳನ್ನು ನೀಡಲಾಗಿದೆ ಎಂಬುದು ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

Congress MLA SA Narayanaswamy
Congress MLA SA Narayanaswamy

ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್‍ನ ಎಸ್.ಎ.ನಾರಾಯಣಸ್ವಾಮಿ, ನಮ್ಮ ಸರಕಾರದ ಅವಧಿಯಲ್ಲಿ ನೀಡಲಾಗಿರುವ ಪರವಾನಗಿಗಳಲ್ಲ. 2020ರಿಂದ 2023ರ ಅವಧಿಯಲ್ಲಿ ನೀಡಲಾಗಿದೆ ಎಂದು ದೂರಿದರು. ಇದಕ್ಕೆ ಆಕ್ಷೇಪಿಸಿದ ಮಾಜಿ ಅಬಕಾರಿ ಸಚಿವ ಕೆ.ಗೋಪಾಲಯ್ಯ, ರಾಜ್ಯ ಸರಕಾರಕ್ಕೆ ಧೈರ್ಯ ಮತ್ತು ಕಾಳಜಿ ಇದ್ದರೆ ಈ ಬಗ್ಗೆ ತನಿಖೆ ಮಾಡಿ ಅಕ್ರಮವಾಗಿರುವುದನ್ನು ರದ್ದು ಮಾಡಿ ಎಂದು ಸವಾಲು ಹಾಕಿದರು. 

Leader of opposition R Ashoka
Leader of opposition R Ashoka

ಬಳಿಕ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಸಿಎಲ್-7 ಸನ್ನದ್ಧ ಪಡೆಯಲು 21 ಕೊಠಡಿಗಳಿರಬೇಕು ಎಂಬ ನಿಯಮವಿದೆ. ಆದರೆ, ಶೌಚಾಲಯವನ್ನು ಕೊಠಡಿ ಎಂದು ಪರಿವರ್ತಿಸಿದ್ದಾರೆ. ತನಿಖೆ ಮಾಡಿ ನಿಯಮ ಉಲ್ಲಂಘನೆಯಾಗಿದ್ದರೆ ಪರವಾನಗಿಗಳನ್ನು ರದ್ದು ಮಾಡಿ, ಚಿಲ್ಲರೆ ಅಂಗಡಿಗಳಲ್ಲೂ ಮದ್ಯ ಮಾರಾಟವಾಗುತ್ತಿದೆ, ಅದನ್ನು ತಡೆಗಟ್ಟಬೇಕು ಎಂದು ಸಲಹೆ ನೀಡಿದರು.

ಬಳಿಕ ಉತ್ತರಿಸಿದ ಸಚಿವ ಆರ್.ಬಿ.ತಿಮ್ಮಾಪುರ್, ‘ಕೊಠಡಿ ವಿನ್ಯಾಸ, ಪಾರ್ಕಿಂಗ್ ಸ್ಥಳಗಳ ಬಗ್ಗೆ ಸ್ಪಷ್ಟ ನಿಯಮಗಳಿಲ್ಲ ಎಂದು ನಾನೇ ಒಪ್ಪಿಕೊಂಡಿದ್ದೇನೆ. ಇದರ ಬಗ್ಗೆ ಪರಿಶೀಲನೆ ನಡೆಸಿ, ಸೂಕ್ತ ನಿಯಮಗಳನ್ನು ರೂಪಿಸಲು ಸರಕಾರ ಕ್ರಮ ವಹಿಸಲಿದೆ’ ಎಂದು ಭರವಸೆ ನೀಡಿದರು.

LEAVE A REPLY

Please enter your comment!
Please enter your name here