Home ರಾಜಕೀಯ ರಾಷ್ಟ್ರಧ್ವಜಕ್ಕೆ ಕೇಸರಿಯೇ ನೆಹರು ಪಟೇಲರ ಆಯ್ಕೆಯಾಗಿತ್ತು

ರಾಷ್ಟ್ರಧ್ವಜಕ್ಕೆ ಕೇಸರಿಯೇ ನೆಹರು ಪಟೇಲರ ಆಯ್ಕೆಯಾಗಿತ್ತು

26
0
Prakash Sesharaghavachar
Prakash Sesharaghavachar

ಮಾರ್ಚ್ 4 ರಂದು ರಾಜ್ಯ ವಿಧಾನ ಸಭೆಯ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ. ಅದ್ಯಾವ ಪುರುಷಾರ್ಥಕ್ಕೆೊ ಕಳೆದ ಬಾರಿ ಐದು ದಿನದ ಅಧಿವೇಶನವನ್ನು ಕಾಂಗ್ರೆಸ್ ಬಲಿ ಪಡೆದು ಅವಧಿಗೆ ಮುನ್ನ ಸದನ ಮುಂದೂಡುವಂತೆ ಮಾಡಿತ್ತು.

ಕಾಂಗ್ರೆಸ್ ಶಾಸಕರು ಅಧಿವೇಶನದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪನವರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಸದನ ನಡೆಯಲು ಅಡ್ಡಿ ಪಡಿಸಿದ್ದ ವಿಚಾರದಲ್ಲಿ ಅಂತಹದೇನಪ್ಪಾ ಕಾಂಗ್ರೆಸ್ ನವರು ಅಷ್ಟೊಂದು ಅಬ್ಬರ ಮಾಡುವಂತಹದ್ದು ಈಶ್ವರಪ್ಪನವರು ಹೇಳಿದ್ದು?

“ಇವತ್ತಲ್ಲಾರೀ ಯಾವತ್ತೊ ಒಂದು ದಿನ. ಇವತ್ತು ಹಿಂದು ವಿಚಾರದ ಬಗ್ಗೆ ಚರ್ಚೆಯಾಗುತ್ತಿದೆ. ಹಿಂದುತ್ವ ಬಗ್ಗೆ ಚರ್ಚೆಯಾಗುತ್ತಿದೆ. ಅಯೊಧ್ಯೆಯಲ್ಲಿ ರಾಮ ಮಂದಿರ ಕಟ್ಟುತ್ತೀರಾ ಅಂದಾಗ ಒಂದು ಕಾಲದಲ್ಲಿ ಏನು ಹೇಳುತ್ತಿದ್ದರು ನಕ್ಕುತ್ತಿದ್ದರು. ಹೌದಾ? ಕಟ್ಟದ್ರಲ್ವೊ ಈಗ? ಹಾಗೆ ಯಾವುದೊ ಕಾಲದಲ್ಲಿ ನೂರು ವರ್ಷನೊ 200 ವರ್ಷನೊ 500 ವರ್ಷನೊ ಭಗವಾಧ್ವಜವೇ ರಾಷ್ಟ್ರಧ್ವಜವಾಗಬಹುದು ಗೊತ್ತಿಲ್ಲ ನನಗೆ. ಎಲ್ಲಿ ಬೇಕಾದರು ಹಾರಡಬಹುದು. ಅದಕ್ಕೆ ನಾನು ಹೇಳ್ತಾ ಇರೊದು. ಈಗ ನಾವೆಲ್ಲರೂ ಕೂಡ ಸಂವಿಧಾನ ಬದ್ಧವಾಗಿ ತ್ರಿವರ್ಣ ಧ್ವಜ ನಮ್ಮ ರಾಷ್ಟ್ರಧ್ವಜ ಎಂದು ಒಪ್ಪಿಕೊಂಡಿದ್ದೇವೆ. ಅದಕ್ಕೆ ಗೌರವ ಕೊಡಲೇ ಬೇಕು. ಯಾರೇ ಅದಕ್ಕೆ ಗೌರವ ಕೊಡೊದನ್ನು ತಪ್ಪಿದರೆ ಅವನು ರಾಷ್ಟ್ರ ದ್ರೋಹಿ ಯಾಗುತ್ತಾನೆ.”

ಇದು ಈಶ್ವರಪ್ಪನವರ ಯಥಾವತ್ತು ಹೇಳಿಕೆ. ಇದನ್ನು ಆಧಾರವಾಗಿಟ್ಟುಕೊಂಡು ಕಾಂಗ್ರೆಸ್ ಹಿಜಾಬ್ ವಿವಾದವನ್ನು ಹಿನ್ನಲೆಗೆ ಸರಿಸಿ ಸುಖಾಸುಮ್ಮನ್ನೆ ಪ್ರತಿಭಟನೆ ಮತ್ತು ಈಶ್ವರಪ್ಪನವರ ರಾಜೀನಾಮೆಗೆ ಒತ್ತಾಯಿಸುವ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯಲು ಮಾಡಿದ ತಂತ್ರಗಾರಿಕೆ ಎಂದು ರಾಜಕೀಯ ವಿಶ್ಲೇಷಕರ ಅಂಬೋಣ.

ಮುಂದಾಲೋಚನೆಯಿಲ್ಲದೆ ಕ್ಯಾಂಪಸ್ ಫ್ರಂಟ್ ನವರ ಷಡ್ಯಂತರವನ್ನು ಗ್ರಹಿಸದೆ ಹಿಜಾಬ್ ವಿವಾದಕ್ಕೆ ಬೆಂಬಲಿಸಿ ಇಕ್ಕಟ್ಟಿಗೆ ಸಿಕ್ಕಿ ಪರದಾಡಿದ ಕಾಂಗ್ರೆಸ್ ಪಾರ್ಟಿ ಈಶ್ವರಪ್ಪನವರ ಹೇಳಿಕೆಯು ಮುಳುಗುತ್ತಿರುವವನಿಗೆ ಹುಲ್ಲುಕಡ್ಡಿ ಆಸರೆ ಪಡೆಯುವ ಹಾಗೆ ಭಗವಾಧ್ವಜ 500ವರ್ಷದ ತರುವಾಯ ರಾಷ್ಟ್ರಧ್ವಜವಾಗಬಹುದು ಎಂದ ಹೇಳಿಕೆಯನ್ನು ತಿರುಚಿ ತ್ರಿವರ್ಣ ಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸುತ್ತೆವೆ ಎಂದರು ಎಂದು ಆರೋಪ ಮಾಡಿ ಪ್ರತಿಭಟನೆಯ ದಾರಿ ತುಳಿದಿದ್ದು ಅಷ್ಚೇನು ಪ್ರಬುದ್ಧ ನಡೆಯಾಗಿರಲಿಲ್ಲ.

“ತಾಯಿಯ ಹಾಲನ್ನು ಕುಡಿದಿದ್ದರೆ ಶ್ರೀನಗರದ ಲಾಲ್ ಚೌಕ್ ನಲ್ಲಿ ತ್ರಿವರ್ಣ ಧ್ವಜ ಹಾರಿಸಿ”ಎಂದು ಭಯೋತ್ಪಾದಕರು ಹಾಕಿದ್ದ ಸವಾಲನ್ನು 1992ರಲ್ಲಿ ಮುರಳಿ ಮನೋಹರ ಜೋಶಿಯವರು ಸ್ವೀಕರಿಸಿ ಶ್ರೀನಗರದ ಲಾಲ್ ಚೌಕದಲ್ಲಿ ತ್ರಿವರ್ಣ ಧ್ವಜ ಹಾರಿಸಲು ಕನ್ಯಾಕುಮಾರಿಯಿಂದ ಶ್ರೀನಗರದವರಗೆ “ಏಕತಾ ಯಾತ್ರೆ” ಕೈಗೊಂಡ ವೇಳೆ ಅಂದಿನ ಕೇಂದ್ರದ ಕಾಂಗ್ರೆಸ್ ಸರ್ಕಾರವು ಲಾಲ್ ಚೌಕದಲ್ಲಿ ಜೋಶಿಯವರು ತ್ರಿವರ್ಣ ಧ್ವಜವನ್ನು ಹಾರಿಸುವುದನ್ನು ಬಲವಾಗಿ ವಿರೋಧಿಸಿದ್ದರು. ಈ ಯಾತ್ರೆಯಲ್ಲಿ ಅಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಈಶ್ವರಪ್ಪನವರು ಬಾಗಿಯಾಗಿದ್ಜರು.

370ನೇ ವಿಧಿಯನ್ನು ರದ್ದು ಮಾಡಿ ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಂದಿಗೆ ಸಂಪೂರ್ಣ ವಿಲೀನ ಮಾಡಿದ ಕೀರ್ತಿಯು ಬಿಜೆಪಿಗೆ ಸಲ್ಲುತ್ತದೆ ಇದರಿಂದಾಗಿ 2022ರ ಗಣರಾಜ್ಯೋತ್ಸವದ ದಿನ ಕಾಶ್ಮೀರದ ಯುವಕರೆ ಲಾಲ್ ಚೌಕನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ದೇಶಭಕ್ತಿಯನ್ನು ಮೆರೆದರು. 92 ರಲ್ಲಿ ಮುರಳಿ ಮನೋಹರ ಜೋಶಿಯವರೊಂದಿಗೆ ಏಕತಾ ಯಾತ್ರೆಯಲ್ಲಿ ಜೊತೆಯಾಗಿದ್ದ ನರೇಂದ್ರ ಮೋದಿಯವರು ಪ್ರಧಾನಿಯಾದ ಸಮಯದಲ್ಲಿ ಲಾಲ್ ಚೌಕ್ ನಲ್ಲಿ ಕಾಶ್ಮೀರಿಗಳೆ ತ್ರಿವರ್ಣ ಧ್ವಜ ಹಾರಿಸಿ ಹೊಸ ಇತಿಹಾಸ ಬರೆದಿದ್ದಾರೆ. ದಶಕಗಳು ಆಡಳಿತದಲ್ಲಿ ಇದ್ದರು ಕೂಡಾ ಕಾಂಗ್ರೆಸ್ ಗೆ ಇಂತಹ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯವಾಗಿರಲಿಲ್ಲ.

1994 ರಲ್ಲಿ ರಾಜ್ಯದಲ್ಲಿ ಇದೇ ಕಾಂಗ್ರೆಸ್ ಆಡಳಿತವಿದ್ದ ಸಂದರ್ಭದಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ಜಜವನ್ನು ಹಾರಿಸಲು ಅನುಮತಿ ನೀಡುವುದಿಲ್ಲ. ಇದನ್ನು ವಿರೋಧಿಸಿ ಬಿಜೆಪಿ ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಿಯೇ ತೀರುತ್ತೇವೆ ಎಂದು ಬೃಹತ್ ಹೋರಾಟ ಪ್ರಾರಂಭಿಸುತ್ತದೆ. ಜನವರಿ 26 ರಂದು ಸಹಸ್ರಾರು ಬಿಜೆಪಿ ಕಾರ್ಯಕರ್ತರು ಹುಬ್ಬಳ್ಳಿಯಲ್ಲಿ ಧ್ವಜ ಹಾರಿಸಲು ಈದ್ಗಾ ಮೈದಾನದತ್ತ ತೆರಳಲು ಪ್ರಯತ್ನಿಸುತ್ತಾರೆ ಈ ಸಮಯದಲ್ಲಿ ಪೊಲೀಸರು ಅಮಾನುಷವಾಗಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಮಾಡುತ್ತಾರೆ ಅದಕ್ಕೂ ಜಗ್ಗದೆ ಮುನ್ನುಗ್ಗಿದ ಕಾರ್ಯಕರ್ತರ ಮೇಲೆ ಗುಂಡಿನ ಮಳೆ ಸುರಿಸಿ ಆರು ಜನರ ಹತ್ಯೆ ಮಾಡುತ್ತಾರೆ.

ರಾಷ್ಟ್ರಧ್ವಜದ ಬಗ್ಗೆ ಅತ್ಯಂತ ಪ್ರೇಮದಿಂದ ಭಾಷಣ ಬಿಗಿಯುತ್ತಿರುವ ಕಾಂಗ್ರೆಸ್ ನಾಯಕರು ತಮ್ಮ ಸರ್ಕಾರ ರಾಷ್ಟ್ರಧ್ವಜವನ್ನು ಹಾರಿಸಲು ಮುಂದಾದವರನ್ನು ಗುಂಡು ಹಾರಿಸಿ ನಿರ್ದಯೆಯಿಂದ ಕೊಂದು ಹಾಕಿದ್ದನ್ನು ಮರೆತಿದ್ದಾರೆ.

ಅಂದು ಹುಬ್ಬಳ್ಳಿಯಲ್ಲಿ ರಾಷ್ಟ್ರಧ್ವಜ ಹಾರಿಸುವುದನ್ನು ತಡೆಯಲು ಸರ್ಕಾರ ಅರಸೇನಾ ಪಡೆಯನ್ನು ಬಳಸಿಕೊಂಡು ಸೈನಿಕರಿಗೂ ಅಪಮಾನ ಮಾಡಿದ್ದರು. ಧ್ವಜದ ರಕ್ಷಣೆಗೆ ಸೈನಿಕ ತನ್ನ ಪ್ರಾಣವನ್ನೆ ನೀಡುತ್ತಾನೆ ಅಂತಹ ಸೈನಿಕರನ್ನು ರಾಷ್ಟ್ರಧ್ವಜ ಹಾರಿಸುವುದನ್ನು ತಡೆಯಲು ನಿಯೋಜಿಸಿದ್ದರು. ಪ್ರಾಯಶ: ರಾಷ್ಟ್ರಧ್ವಜ ಹಾರಿಸುತ್ತೇವೆ ಎಂದವರನ್ನು ಗುಂಡು ಹಾರಿಸಿ ಕೊಂದ ಘಟನೆಯು ಪ್ರಪಂಚದ ಯಾವುದೆ ದೇಶದಲ್ಲಿ ನಡೆದ ಉದಾಹರಣೆ ಇಲ್ಲವೇನೊ ಆದರೆ ಅಂದಿನ ರಾಜ್ಯ ಕಾಂಗ್ರೆಸ್ ಸರ್ಕಾರ ಯಾರನ್ನೊ ಓಲೈಸಲು ಆ ದಾಖಲೆಯನ್ನು ಸಹಾ ಬರೆದಿದೆ.

ಕಾಂಗ್ರೆಸ್ ಪಾರ್ಟಿಗೆ ಅದ್ಯಾಕೊ ಕೇಸರಿ ಬಣ್ಣದ ಮೇಲೆಯೇ ಪರಮ ದ್ವೇಷ. 2010ರಲ್ಲಿ ಕೇಂದ್ರ ಗೃಹ ಸಚಿವರಾಗಿದ್ದ ಪಿ.ಚಿದಂಬರಂ ರವರು “ಮಾಲೇಗಾಂವ್ ಮತ್ತು ಸಂಜೋತಾ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದ ಬಾಂಬ್ ಸ್ಪೋಟದ ತರುವಾಯ ಹಲವಾರು ಹಿಂದುಗಳ ವಿರುದ್ದ ಸುಳ್ಳು ಮೊಕದ್ದಮೆಯನ್ನು ದಾಖಲಿಸಿ ಹಿಂದೂಗಳಲ್ಲಿಯೂ ಭಯೋತ್ಪಾದಕರು ಇದ್ದಾರೆ ಎಂದು ನಿರೂಪಿಸಲು “ಕೇಸರಿ ಭಯೋತ್ಪಾದಕತೆ” ಶಬ್ದವನ್ನು ಹುಟ್ಟು ಹಾಕಿದರು.

ವಿಪರ್ಯಾಸವೆಂದರೆ ಈಶ್ವರಪ್ಪನವರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದರು ಎಂದು ಆರೋಪಿಸಿದ ಕಾಂಗ್ರೆಸ್ ಮುಖಂಡರು ರಾಷ್ಟ್ರಧ್ವಜವನ್ನೇ ದುರ್ಬಳಕೆ ಮಾಡಿಕೊಂಡು ಸದನದೊಳಗೆ ಪ್ರತಿಭಟನೆಯನ್ನು ಮಾಡುತ್ತಾರೆ. ರಾಷ್ಟ್ರಧ್ವಜವನ್ನು ತಮ್ಮ ಪಕ್ಷದ ಖಾಸಗಿ ಆಸ್ತಿಯಂತೆ ಬಳಸಿ ಧ್ವಜ ಸಂಹಿತೆಯನ್ನು ಉಲ್ಲಂಘಿನೆ ಮಾಡಿದರು.

ಧ್ವಜಸಂಹಿತೆ ಅನುಬಂಧ 2.1(1) ಅನ್ವಯ ಧ್ವಜವನ್ನು ಯಾವುದೆ ಖಾಸಗಿ ಉಪಯೋಗಕ್ಕೆ ಬಳಸಬಾರದು. ಕಾಂಗ್ರೆಸ್ ಪಾರ್ಟಿಯು ತನ್ನ ರಾಜಕೀಯ ಕಾರಣಕ್ಕೆ ರಾಷ್ಟ್ರಧ್ವಜವನ್ನು ಸದನದೊಳಗೆ ತಂದು ತಮ್ಮ ಪ್ರತಿಭಟನೆಯಲ್ಲಿ ಪ್ರದರ್ಶಿಸುತ್ತಾ ಘೋಷಣೆ ಕೂಗುತ್ತಿದ್ದರು. ಮಾನ್ಯ ಸಭಾಧ್ಯಕ್ಷರು ರಾಷ್ಟ್ರಧ್ವಜದ ದುರುಪಯೋಗವಾಗುತ್ತಿದೆ ಇದು ಸರಿಯಲ್ಲ ಎಂದು ಪದೇ ಪದೇ ಎಚ್ಚರಿಸಿದರು ಕಾಂಗ್ರೆಸ್ ನಾಯಕರು ಅದನ್ನು ಕಿವಿಗೆ ಹಾಕಿಕೊಳ್ಳುವ ಗೋಜಿಗೆ ಹೋಗಲಿಲ್ಲ.

ಅದೇ ಕಾಂಗ್ರೆಸ್ ಮುಖಂಡರು ಮುಂದೆ 100 ಅಥವಾ 500ವರ್ಷಗಳ ನಂತರ ಈ ದೇಶದ ಧ್ವಜ ಭಗವಾಧ್ವಜವಾಗಬಹುದು ಮತ್ತು ಕೆಂಪುಕೋಟೆಯ ಮೇಲೂ ಹಾರಾಡಬಹುದು ಎಂಬ ಕೆ.ಎಸ್. ಈಶ್ವರಪ್ಪನವರ ಹೇಳಿಕೆಗೆ ಅವರೊಬ್ಬ ದೇಶದ್ರೋಹಿ ಎಂದು ಹಣೆಪಟ್ಟಿ
ಕಟ್ಟಿ ಸದನ ನಡೆಯದಂತೆ ಗೊಂದಲ ಎಬ್ಬಿಸಿದರು.

ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ 1930 ರಲ್ಲಿ ಕಾಂಗ್ರೆಸ್ ನ ಕರಾಚಿ ಅಧಿವೇಶನದಲ್ಲಿ ಭಾರತದ ಧ್ವಜ ಹೇಗಿರಬೇಕು ಎಂದು ತೀರ್ಮಾನಿಸಲು 7 ಜನರ ಸಮಿತಿಯನ್ನು ರಚನೆಯಾಗುತ್ತದೆ ಅದಕ್ಕೆ ಧ್ವಜ ರೂಪಿಸುವ ಅಧಿಕಾರವನ್ನು ನೀಡಲಾಗುತ್ತದೆ. ಈ ಸಮಿತಿಯು ನೂರಾರು ಜನರ ಅಭಿಪ್ರಾಯ ಸಂಗ್ರಹಿಸಿ ತನ್ನ ಶಿರ್ಫಾಸಿನಲ್ಲಿ ಪುರಾತನ ಇತಿಹಾಸವಿರುವ ಹಾಗು ಸುದೀರ್ಘ ಸಂಪ್ರದಾಯವಿರುವ ನಮಗೆ ವ್ಯಾಪಕವಾಗಿ ಒಪ್ಪಿಕೊಳ್ಳುವ ಹಾಗೂ ವಿಶಿಷ್ಟ ಬಣ್ಣವಾದ ಕೇಸರಿಯೇ ಸೂಕ್ತ ಎಂದು ನಿರ್ಧರಿಸಿತ್ತು. ಈ ಬಾವುಟದ ಮೂಲೆಯಲ್ಲಿ ನೀಲಿ ಬಣ್ಣದಲ್ಲಿ ಅಶೋಕ ಚಕ್ರವಿರಬೇಕು ಎಂದು ಕೂಡಾ ತಿಳಿಸಿತು.

ಈ ಸಮಿತಿಯ 7 ಜನ ಸದಸ್ಯರುಗಳು ಸರ್ದಾರ್ ವಲ್ಲಭಾಯ್ ಪಟೇಲ್, ಜವಾಹರ್ ಲಾಲ್ ನೆಹರು, ಅಬ್ದುಲ್ ಕಲಾಂ ಅಜ಼ಾದ್, ತಾರಾಸಿಂಗ್, ಡಿ.ಬಿ.ಕಲೇಕರ್, ಎನ್ ಎಸ್ ಹರ್ಡೀಕರ್ ಮತ್ತು ಬಿ.ಪಟ್ಟಾಭಿ ಸೀತಾರಾಮಯ್ಯನವರು. ಸ್ವತ: ಜವಾಹರ್ ಲಾಲ್ ಮತ್ತು ವಲ್ಲಭಾಯ್ ಪಟೇಲ್ ಒಳಗೊಂಡ ಸಮಿತಿಯು ರಾಷ್ಟ್ರಧ್ವಜದ ಬಣ್ಣವನ್ನು ಆಯ್ಕೆ ಮಾಡಿದ್ದು ಕೇಸರಿ ಬಣ್ಣವಾಗಿತ್ತು.ದುರಾದೃಷ್ಚಕರವೆಂದರೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಈ ಶಿಫಾರಸನ್ನು ಒಪ್ಪುವುದಿಲ್ಲ.

ಹಿಜಾಬ್ ನಲ್ಲಿ ಹೋದ ಮಾನ ಧ್ವಜದಲ್ಲಿ ಸಂಪಾದಿಸುವ ಆತುರದಲ್ಲಿ ಕೇಸರಿ ಬಣ್ಣವನ್ನು ವಿರೋಧಿಸಿ ಬಿಜೆಪಿಯವರನ್ನು ದೇಶದ್ರೋಹಿಗಳು ಎಂದು ಜರಿಯುತ್ತಿರುವ ಕಾಂಗ್ರೆಸ್ಸಿಗರಿಗೆ ರಾಷ್ಟ್ರಧ್ವಜಕ್ಕೆ ತಮ್ಮ ನಾಯಕರು ಮೊದಲು ಆಯ್ಕಮಾಡಿದ್ದು ಕೇಸರಿ ಬಣ್ಣ ಎಂಬದನ್ನು ಮರೆಮಾಚಿ ಕೇಸರಿಯ ಮೇಲಿನ ತಮಗಿರುವ ಅಲರ್ಜಿಯನ್ನು ಪ್ರಕಟ ಮಾಡುವ ಆತುರದಲ್ಲಿ ನೆಹರು ಮತ್ತು ಪಟೇಲರಿಗೂ ಅಪಮಾನ ಮಾಡಿದರು.

ಕೇಸರಿ ಧ್ವಜ ವಿವಾದವಕ್ಕೆ ರಾಜಕೀಯ ಬಣ್ಣ ಬಳಿದು ಜನರನ್ನು ಭಾವನಾತ್ಮಕವಾಗಿ ತಮ್ಮ ಹೋರಾಟಕ್ಕೆ ಸೆಳೆಯಲು ಸಂಪೂರ್ಣವಾಗಿ ಸೋತರು ಮತ್ತು ಸದನದ ಸಮಯವನ್ನು ಹಾಳು ಮಾಡಿ ಜನರ ಕೋಪಕ್ಕೆ ಹಾಗೂ ತೀವ್ರ ಟೀಕೆಗೆ ಗುರಿಯಾದರು ಇವರ ತಂತ್ರಗಾರಿಕೆ ಇವರಿಗೆ ತಿರುಗುಬಾಣವಾಗಿದ್ದು ಸುಳ್ಳಲ್ಲ.

ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ತಳ್ಳುವ ಸುವರ್ಣಾವಕಾಶವನ್ನು ಕೈಚೆಲ್ಲಿದರು. ಸದನ ಚಂಡಿ ಹಿಡಿಯಲು ಅಲ್ಲ ಅದು ಇರುವುದು ಚರ್ಚೆಗೆ ಇರುವುದು ಆದರೆ ಆರೋಗ್ಯ ಪೂರ್ಣ ಸಂವಾದಕ್ಕೆ ವೇದಿಕೆಯಾಗಬೇಕಿದ್ದ ಸದನ ವೈಯಕ್ತಿಕ ಪ್ರತಿಷ್ಠೆಗೆ ಹಾಳು ಮಾಡಿದ ಪ್ರಮುಖ ವಿರೋಧ ಪಕ್ಷವು ಕನಿಷ್ಠ ಈ ಬಾರಿಯಾದರು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕರ್ತವ್ಯ ಪಾಲಿಸ ಬೇಕಾಗಿದೆ.

ದೇಶದ ಆಡಳಿತ ಸೂತ್ರವನ್ನು ಕಳೆದ ಎಂಟು ವರ್ಷದಿಂದ ಹಿಡಿದಿರುವ ಪಕ್ಷವನ್ನು ದೇಶ ದ್ರೋಹಿಗಳು ಎಂದು ವಾಗ್ದಾಳಿ ಮಾಡಿರುವುದು ಅತ್ಯಂತ ಬಾಲಿಶ ಟೀಕೆ. ದೇಶದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಆಡಳಿತ ಪಕ್ಷವನ್ನು ಟೀಕಿಸಲು ತಮ್ಮ ವಿಚಾರವನ್ನು ಪ್ರಬಲವಾಗಿ ಮಂಡಿಸುವ ಮೂಲಕ ಮಾಡದೆ ಕೇವಲ ಕೀಳು ಮಟ್ಟದ ನಿಂದನೆಯಲ್ಲಿ ತೊಡಗಿದರು. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಲು ವಿಫಲವಾದ ಕಾಂಗ್ರೆಸ್ ನಾಯಕರಿಗೆ ಭಾವನಾತ್ಮಕ ವಿಷಯವನ್ನು ಬಂಡವಾಳವಾಗಿಸಿಕೊಳ್ಳುವ ಸಾಮರ್ಥ್ಯ ಇಲ್ಲ ಎಂಬ ಜ್ಞಾನೋದಯವಾಗುವುದು ತುರ್ತು ಅಗತ್ಯವಿದೆ.

ಪ್ರಕಾಶ್ ಶೇಷರಾಘವಾಚಾರ್
sprakashbjp@gmail.com

Disclaimer: The opinions expressed within this article are the personal opinions of the author. The facts and opinions appearing in the article do not reflect the views of TheBengaluruLive.com and Kannada.TheBengaluruLive.com does not assume any responsibility or liability for the same.

LEAVE A REPLY

Please enter your comment!
Please enter your name here