“ಪ್ರತಿ ವರ್ಷ ಇದೇ ಭರವಸೆ?” ಮಳೆಗಾಲದ ಮುನ್ನ ಮತ್ತೆ ಪ್ರವಾಹ ತಡೆ ಸೂಚನೆಗಳು – ಈ ಬಾರಿ ಬದಲಾವಣೆ ಆಗುತ್ತದೆಯೇ?
ಬೆಂಗಳೂರು: ಮಳೆಗಾಲ ಸಮೀಪಿಸುತ್ತಿದ್ದಂತೆ, ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮತ್ತೊಮ್ಮೆ ಪ್ರವಾಹ ತಡೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ನಿರ್ದೇಶನ ಹೊರಡಿಸಿದೆ. ಆದರೆ, ಪ್ರತಿವರ್ಷವೂ ಇದೇ ರೀತಿಯ ಭರವಸೆಗಳು ನೀಡಲ್ಪಟ್ಟರೂ ಸಮಸ್ಯೆಗಳು ಮರುಕಳಿಸುತ್ತಿರುವ ಹಿನ್ನೆಲೆ ಈ ಬಾರಿ ನಿಜವಾದ ಬದಲಾವಣೆ ಆಗುತ್ತದೆಯೇ ಎಂಬ ಪ್ರಶ್ನೆ ನಾಗರಿಕರಲ್ಲಿ ಮೂಡಿದೆ.
ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಮುಂಗಾರು ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಪ್ರವಾಹ ತಡೆ, ಸ್ಟಾರ್ಮ್ ವಾಟರ್ ಡ್ರೇನ್ ನಿರ್ವಹಣೆ ಹಾಗೂ ವಿಪತ್ತು ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಹಿಂದಿನ ವರ್ಷಗಳಲ್ಲಿ ಗುರುತಿಸಲಾಗಿದ್ದ 209 ಪ್ರವಾಹಪೀಡಿತ ಪ್ರದೇಶಗಳಲ್ಲಿ 2025ರಲ್ಲಿ ಮತ್ತೆ 49 ಪ್ರದೇಶಗಳು ಸಮಸ್ಯೆ ಎದುರಿಸಿರುವುದು, ಶಾಶ್ವತ ಪರಿಹಾರಗಳ ಕೊರತೆಯನ್ನು ತೋರಿಸುತ್ತದೆ. ಇದೀಗ ಈ ಪ್ರದೇಶಗಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ನಗರ ಪಾಲಿಕೆ ಮುಖ್ಯ ಅಭಿಯಂತರರು ಜಿಬಿಎ ಯೋಜನಾ ಘಟಕದೊಂದಿಗೆ ಸಮನ್ವಯ ಸಾಧಿಸಿ ಕ್ರಮ ಕೈಗೊಳ್ಳಬೇಕು. ಜೊತೆಗೆ ಹೆಚ್ಚುವರಿ ಆಯುಕ್ತರು ಈ ಕೆಲಸಗಳ ಮೇಲ್ವಿಚಾರಣೆ ಮಾಡಿ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ರಾಜಕಾಲುವೆ ಅಭಿವೃದ್ಧಿ ಹಾಗೂ ಡ್ರೆನೇಜ್ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ಏಪ್ರಿಲ್ ಅಂತ್ಯದೊಳಗೆ ಎಲ್ಲಾ ಕಾಲುವೆಗಳನ್ನು ದೂಳು ತೆಗೆದು ಸ್ವಚ್ಛಗೊಳಿಸಬೇಕು ಎಂದು ಸೂಚಿಸಲಾಗಿದೆ. ನೀರಿನ ಸರಾಗ ಹರಿವಿಗೆ ಅಡ್ಡಿಯಾಗುವ ಯಾವುದೇ ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಿತ ಇಂಜಿನಿಯರ್ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ವಿಪತ್ತು ನಿರ್ವಹಣಾ ವ್ಯವಸ್ಥೆಯನ್ನು ಬಲಪಡಿಸಲು, ನಗರ ಪಾಲಿಕೆ, ಬೆಸ್ಕಾಂ ಹಾಗೂ ಬಿವಿಎಸ್ಎಸ್ಬಿ ಅಧಿಕಾರಿಗಳನ್ನು ಕಂಟ್ರೋಲ್ ರೂಂಗಳಲ್ಲಿ ನಿಯೋಜಿಸುವಂತೆ ಸೂಚಿಸಲಾಗಿದೆ. ಜೊತೆಗೆ SDRF ಮತ್ತು NDRF ತಂಡಗಳ ಸಿದ್ಧತೆಯೂ ಖಚಿತಪಡಿಸಬೇಕು ಎಂದು ಹೇಳಲಾಗಿದೆ.
ಹಿಂದಿನ ವರ್ಷ ಸಾಯಿ ಲೇಔಟ್, ಪಾಯಿ ಲೇಔಟ್ ಹಾಗೂ HBR ಲೇಔಟ್ ಪ್ರದೇಶಗಳಲ್ಲಿ ಪ್ರವಾಹಕ್ಕೆ ಕಾರಣವಾದ ಗೆದ್ದಲಹಳ್ಳಿ ರೈಲ್ವೆ ವೆಂಟ್ ಸಮಸ್ಯೆಗೆ ಪರಿಹಾರವಾಗಿ ಹೆಚ್ಚುವರಿ ವೆಂಟ್ ನಿರ್ಮಾಣ ನಡೆಯುತ್ತಿದ್ದು, ಅದನ್ನು ಏಪ್ರಿಲ್ ಒಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಮಳೆಯ ವೇಳೆ ಮರಗಳು ಬೀಳುವುದು, ಕೊಂಬೆಗಳು ಮುರಿಯುವುದು ಸೇರಿದಂತೆ ತುರ್ತು ಪರಿಸ್ಥಿತಿಗಳಿಗೆ ತಕ್ಷಣ ಸ್ಪಂದಿಸಲು ವಿಶೇಷ ತಂಡಗಳನ್ನು ರಚಿಸಲು ಸೂಚಿಸಲಾಗಿದೆ.
ಪನತೂರು S-ಕ್ರಾಸ್, ಸಿಲ್ಕ್ ಬೋರ್ಡ್, ಮಡಿವಾಳ, ರಾಜರಾಜೇಶ್ವರಿ ನಗರ ಸೇರಿದಂತೆ ಪ್ರಮುಖ ಪ್ರವಾಹಪೀಡಿತ ಪ್ರದೇಶಗಳಿಗೆ ವಿಶೇಷ ಗಮನ ಹರಿಸಲು ಸೂಚಿಸಲಾಗಿದೆ.
ಆದರೆ, ಪ್ರತಿವರ್ಷದಂತೆ ಈ ಬಾರಿ ಕೂಡ ದೊಡ್ಡ ಮಟ್ಟದ ಯೋಜನೆಗಳ ಘೋಷಣೆ ನಡೆದಿದ್ದರೂ, ಅವು ಜಾರಿಗೆ ಬರುವುದೇ ಎಂಬುದರ ಬಗ್ಗೆ ಬೆಂಗಳೂರಿನ ಜನರು ಇನ್ನೂ ಸಂಶಯದಲ್ಲಿದ್ದಾರೆ.
