Home ಬೆಂಗಳೂರು ನಗರ ಸಾವರ್ಕರ್ ಅವರ ವಿಚಾರಗಳು ಅಮರ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

ಸಾವರ್ಕರ್ ಅವರ ವಿಚಾರಗಳು ಅಮರ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

40
0
Savarkar's thoughts are eternal CM Bommai

ಬೆಂಗಳೂರು:

ಸಾವರ್ಕರ್ ಅವರು ಒಬ್ಬ ಅಪರೂಪದ ದೇಶಭಕ್ತ. ಅವರ ವಿಚಾರಗಳು ಅಮರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ನಿಲುಮೆ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ವೀರ್ ಸಾವರ್ಕರ್ ದಿ ಮ್ಯಾನ್ ಹು ಕುಡ್ ಹ್ಯಾವ್ ಪ್ರಿವೆಂಟೆಡ್ ಪಾರ್ಟಿಷನ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ಅಪರೂಪದ ದೇಶಭಕ್ತ

ವೀರ ಸಾವರ್ಕರ್ ಅವರು ಅಪರೂಪದ ದೇಶಭಕ್ತ, ವೈಚಾರಿಕವಾಗಿ ಸಂಸ್ಕೃತಿಯನ್ನೇ ಮುನ್ನಡೆಸುವ ಸಾಮರ್ಥ್ಯವಿರುವ ವೀರ್ ಸಾವರ್ಕರ್ ಅವರ ಬಗ್ಗೆ ಬರೆದಿರುವ ‘A man who could have prevented partition’ ಪುಸ್ತಕದ ಶೀರ್ಷಿಕೆಯೇ ಆಸಕ್ತಿ ಹುಟ್ಟಿಸುತ್ತದೆ. ಇಂದಿನ ರಾಜಕೀಯ ಸನ್ನಿವೇಶದಲ್ಲಿ ಈ ಪುಸ್ತಕ ಅತ್ಯಂತ ಪ್ರಸ್ತುತವಾಗಿದೆ. ದೇಶ ವಿಭಜನೆ ನಮಗೆ ಬಹಳ ದೊಡ್ಡ ಘಾಸಿಯನ್ನುಂಟು ಮಾಡಿದೆ. ಅದರ ಪರಿಣಾಮಗಳ ಬಗ್ಗೆ ಯಾರೂ ಚಿಂತನೆ ಮಾಡಿಲ್ಲ. ನಮ್ಮ ಸಂಸ್ಕೃತಿಯನ್ನು ಅಡ್ಡಗಟ್ಟಿ ಅದನ್ನು ವಿಭಜಿಸುವ ಕೆಲಸವಾಗಿದೆ. ನಮ್ಮ ಸಂಸ್ಕೃತಿಯನ್ನು ಪರಿಪೂರ್ಣತೆಗೆ ತೆಗೆದುಕೊಂಡು ಹೋಗಲು ವೀರ ಸಾವರ್ಕರ್ ಅವರ ಅವಿಭಜಿತ ಹಿಂದೂ ಸಂಸ್ಕೃತಿಯನ್ನು ಸಾಕಾರಗೊಳಿಸುವುದು ಎಲ್ಲರ ಕರ್ತವ್ಯ ಎಂದರು.

Savarkar's thoughts are eternal CM Bommai

ವೀರ್ ಸಾವರ್ಕರ್ ಅವರ ವೈಚಾರಿಕತೆಯಿಂದ ನಿರಂತರವಾಗಿ ಆ ಕಾಲದಲ್ಲಿ ಪ್ರಶ್ನೆಯನ್ನು ಎತ್ತಿ ಭಾರತ ದೇಶ ಮತ್ತು ಸಿಂಧು ಸಂಸ್ಕೃತಿಯನ್ನು ಎಚ್ಚರಿಸಿದ್ದರು. ನಾಗರೀಕತೆ ಮತ್ತು ಸಂಸ್ಕೃತಿಯ ಬಗ್ಗೆ ವೀರ ಸಾವರ್ಕರ್ ಅವರಿಗೆ ಬಹಳ ಸ್ಪಷ್ಟತೆ ಇತ್ತು . ವೀರ ಸಾವರ್ಕರ್ ಅವರು ಈ ಎರಡರ ಅರ್ಥವನ್ನು ಪರಿಪೂರ್ಣತೆ ಎಡೆಗೆ ಕೊಂಡೊಯ್ದಿದ್ದರು ಎಂದರು.

ಜಾಗತೀಕರಣ, ಖಾಸಗೀಕರಣಗಳ ಮಧ್ಯೆ ಅಂತಃಕರಣವನ್ನು ಮರೆತಿರುವ ಈ ಕಾಲದಲ್ಲಿ ಕೇವಲ ನಮ್ಮ ಮೌಲ್ಯಗಳು ಹಾಗೂ ಸಂಸ್ಕೃತಿ ಮಾತ್ರ ಅಂತಕರಣವನ್ನು ಜಾಗೃತ ಗೊಳಿಸಲು ಸಾಧ್ಯ ಎಂದು ವೀರ ಸಾವರ್ಕರ್ ತೋರಿಸಿಕೊಟ್ಟರು. ಬೇರೆ ಬೇರೆ ಪ್ರದೇಶದಲ್ಲಿರುವ ವಿಚಾರಗಳಿಗೂ ನಮ್ಮ ವಿಚಾರಗಳಿಗೂ ಬಹಳ ವ್ಯತ್ಯಾಸವಿದೆ. ನಮ್ಮ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಹಿಂದೂ ಸಂಸ್ಕೃತಿ ಸ್ಥಾಪನೆಯಾಗಿದೆ. ಸಂಸ್ಕೃತಿ ಎಂದರೆ ಮಾನವೀಯತೆ, ಎಲ್ಲರನ್ನು ಗೌರವಿಸುವುದು. ವೀರ್ ಸಾವರ್ಕರ್ ಅವರು ಬ್ರಿಟಿಷರಿಗೆ ಮುಳ್ಳಾಗಿದ್ದರು. ಅವರ ಮೌಲ್ಯಗಳು, ವಿಚಾರಗಳಿಂದ ಅವರು ಎಲ್ಲರಿಗಿಂತ ವಿಭಿನ್ನ ಎನಿಸಿದರು. ಸ್ವಾತಂತ್ರ್ಯ ಹೋರಾಟಗಾರರ ನಡುವೆಯೂ ಅವರು ಬಂಡಾಯಗಾರರಾಗಿದ್ದರು. ವೀರ ಸಾವರ್ಕರ್ ಅವರನ್ನು ಭಾರತದಲ್ಲಿ ಬಿಟ್ಟರೆ ದೇಶವನ್ನು ಬಿಟ್ಟು ಹೊರಡಬೇಕು ಎಂದು ತಿಳಿದಿತ್ತು. ಬ್ರಿಟಿಷರಿಗೆ ನಿಜವಾದ ಪರಮಾಣು ಬಾಂಬ್ ಆಗಿದ್ದರು. ಅಗಾಧ ಶಕ್ತಿಯನ್ನು ಹೊಂದಿದ್ದರು. ಹಾಗಾಗಿಯೇ ಅವರನ್ನು ದೇಶದಿಂದ ಹಾಗೂ ದೇಶದ ಜನರಿಂದ ಅವರನ್ನು ಬೇರ್ಪಡಿಸಲಾಯಿತು ಎಂದರು.

ಸ್ಪಷ್ಟತೆ ಇದ್ದ ಕ್ರಾಂತಿಕಾರಿ

ಅವರೊಬ್ಬ ಶ್ರೇಷ್ಠ ದೇಶಭಕ್ತ, ಹಿಂದೂ ರಾಷ್ಟ್ರದ ಬಗ್ಗೆ ಸ್ಪಷ್ಟತೆ ಇದ್ದ ಕ್ರಾಂತಿಕಾರಿಯಾಗಿದ್ದರು ಎಂದೇ ಬ್ರಿಟಿಷರು ಅವರನ್ನು ಕಾಲಾಪಾನಿಗೆ ಕಳುಹಿಸಿದರು. ಹಿಂದೂ ರಾಜ್ಯಗಳ ಮಧ್ಯೆ ಭಿನ್ನಾಭಿಪ್ರಾಯಗಳು ಇರುವವರೆಗೂ ಬ್ರಿಟಿಷರು ತಾವು ಸುರಕ್ಷಿತವಾಗಿ ಇದ್ದೇವೆ ಎಂದು ಭಾವಿಸಿದ್ದರು. ವೀರ ಸಾವರ್ಕರ್ ಹಿಂದುತ್ವದ ಬಗ್ಗೆ ಮಾತನಾಡಲು ತೊಡಗಿದ ಕೂಡಲೇ ಹಿಂದೂ ರಾಜ್ಯಗಳು ಒಂದಾಗತೊಡಗಿದವು. ಹೀಗೆ ಆದ ಕೂಡಲೇ ಬ್ರಿಟಿಷರಿಗೆ ತಮ್ಮ ದಿನಗಳು ಭಾರತದಲ್ಲಿ ಕೊನೆಯಾಗಲಿದೆ ಎಂದು ಮನವರಿಕೆಯಾಯಿತು. ಇದು ಹಿಂದುತ್ವದ ಶಕ್ತಿ. ಇತಿಹಾಸವನ್ನು ಸರಿಯಾಗಿ ಓದಿದರೆ ಮಾತ್ರ ಭವಿಷ್ಯವನ್ನು ಕಟ್ಟಲು ಸಾಧ್ಯ ಎಂದರು.

ಹಿಂದುತ್ವ, ಹಿಂದೂ ವಿಚಾರಗಳನ್ನು ಗಟ್ಟಿಯಾಗಿ ಬ್ರಿಟಿಷರ ಹೊಡೆತಕ್ಕೆ ತಾಳಿದವರು ಸಾವರ್ಕರ್. ಯಾವುದೇ ವಿಚಾರವನ್ನು ಮುಲಾಜಿಲ್ಲದೆ ಹೇಳುವಂತವರಾಗಿದ್ದರು,ಯಾವುದಕ್ಕೂ ಜೋತುಬಿದ್ದಿರಲ್ಲಿಲ್ಲ. ಆದರೆ ಮತ್ತೊಬ್ಬರ ವಿಚಾರವನ್ನು ಗೌರವಿಸುವ ದೊಡ್ಡ ಗುಣವಿತ್ತು.

ಅಸ್ಪೃಶ್ಯತೆಯ ಹೆಸರಿನಲ್ಲಿ ರಾಜಕಾರಣ ಮಾಡುವುದನ್ನು ಕಿತ್ತೊಗೆಯಬೇಕು

ಬಾಬಾ ಸಾಹೇಬ್ ಅಂಬೇಡ್ಕರ್ ಅವರೊಂದಿಗೆ ಅವರ ಸಂಬಂಧ ಉತ್ತಮವಾಗಿತ್ತು. ಹಿಂದೂ ರಾಷ್ಟ್ರದಲ್ಲಿ ಹಿಂದೂಗಳು ಒಂದಾಗಬೇಕೆಂದರೆ ಅಸ್ಪೃಶ್ಯತೆ ಹೋಗಬೇಕು. ಇದು ನಮ್ಮ ದೇಶದ ಒಗ್ಗಟ್ಟಿಗೆ ಮಾರಕ ಎನ್ನುವುದು ಇಬ್ಬರಿಗೂ ತಿಳಿದಿತ್ತು. ಬ್ರಿಟಿಷರು ಅಸ್ಪೃಶ್ಯತೆಯನ್ನು ದೇಶ ಒಡೆಯಲು ಬೆಳೆಸಿದರು. ನಮ್ಮ ನಮ್ಮಲ್ಲಿ ಜಾತಿ ಉಪ ಜಾತಿಗಳನ್ನು ಬೆಳೆಸಿದರು. ಮುಂದೆ ಬಂದ ಸರ್ಕಾರಗಳು ಅಸ್ಪೃಶ್ಯತೆಯ ನಿವಾರಣೆಯ ಹೆಸರಿನಲ್ಲಿ ಅದು ಇರುವಂತೆ ನೋಡಿಕೊಂಡರು.ಅಸ್ಪೃಶ್ಯತೆಯ ಹೆಸರಿನಲ್ಲಿ ರಾಜಕಾರಣ ಮಾಡುವುದನ್ನು ಕಿತ್ತೊಗೆಯಬೇಕು. ಇದು ನಮ್ಮ ಧ್ಯೇಯ. ಇದು ಸಾವರ್ಕರ್ ಅವರ ಧ್ಯೇಯ ಎಂದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ, ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು, ಶಾಸಕ ಎನ್.ಮಹೇಶ್ ಹಾಗೂ ನಿಲುಮೆ ಪ್ರತಿಷ್ಠಾನದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here