Say 'Jai Bajrangbali' while casting vote, PM says in Karnataka; Cong defends stand on Bajrang Dal
ಅಂಕೋಲ(ಉತ್ತರ ಕನ್ನಡ):
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಕರ್ನಾಟಕ ರಾಜ್ಯದಲ್ಲಿ ವಿದೇಶದಿಂದ 30 ಸಾವಿರ ಕೋಟಿ ಹೂಡಿಕೆ ಆಗಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ಅದು ಮೂರು ಪಟ್ಟು ಅಂದರೆ 90 ಸಾವಿರ ಕೊಟಿ ರೂಪಾಯಿಗೆ ವಾರ್ಷಿಕವಾಗಿ ಹೆಚ್ಚಾಯಿತು. ಡಬಲ್ ಎಂಜಿನ್ ಸರ್ಕಾರದ ಪ್ರಯತ್ನದಿಂದ ಇದು ಸಾಧ್ಯವಾಗಿದೆ.ರಾಜ್ಯದ ಅಭಿವೃದ್ಧಿಯೇ ಬಿಜೆಪಿ ಸರ್ಕಾರದ ಧ್ಯೇಯವಾಗಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ಬುಧವಾರ ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ಬಿಜೆಪಿ ಚುನಾವಣಾ ಪ್ರಚಾರವನ್ನು ಮುಂದುವರಿಸಿದ ಅವರು, 2018ರ ಚುನಾವಣೆ ನಂತರ ಬಿ ಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಸರ್ಕಾರಕ್ಕೆ ಬರೀ ಮೂರೂವರೆ ವರ್ಷದ ಆಡಳಿತ ಸಿಕ್ಕಿದೆ. ಈ ವೇಳೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಕೊಳೆ ತೊಳೆಯುವುದರ ಜೊತೆಗೆ ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದರು.
ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಆದ್ಯತೆ: ಕಾಂಗ್ರೆಸ್ ಸರ್ಕಾರ 4 ಕೋಟಿ 20 ಲಕ್ಷ ನಕಲಿ ಹೆಸರಿನ ವ್ಯಕ್ತಿಗಳಿಗೆ ರೇಷನ್ ನೀಡಿತ್ತು. ನಕಲಿ ಹೆಸರಿನಲ್ಲಿ ಸ್ಕಾಲರ್ಷಿಪ್ ಕೊಡುತ್ತಿದ್ದರು. ಈ ಎಲ್ಲ ಹಣ ಕಾಂಗ್ರೆಸ್ ನಾಯಕರ ಜೇಬಿಗೆ ಹೋಗುತ್ತಿತ್ತು. ನಕಲಿ ಫಲಾನುಭವಿಗಳ ಸಂಖ್ಯೆ ಕಾಂಗ್ರೆಸ್ ಆಡಳಿತ ಸಮಯದಲ್ಲಿ ಕರ್ನಾಟಕ ಜನಸಂಖ್ಯೆಗಿಂತ ಹೆಚ್ಚಾಗಿ ಹೋಗಿತ್ತು. ಭ್ರಷ್ಟಾಚಾರದ ಹಣ ಕಾಂಗ್ರೆಸ್ ನ ಮೊದಲ ಕುಟುಂಬಕ್ಕೆ ಸಹ ಹೋಗುತ್ತಿತ್ತು ಎಂದು ಪರೋಕ್ಷವಾಗಿ ಸೋನಿಯಾ ಗಾಂಧಿ ಕುಟುಂಬದ ಮೇಲೆ ಪ್ರಧಾನಿ ಮೋದಿ ಕುಟುಕಿದರು.
ಬಿಜೆಪಿಯ ನೀತಿ ಮೊದಲು ನಾಗರಿಕರು ಆದರೆ, ಕಾಂಗ್ರೆಸ್ ನ ನೀತಿ ಭ್ರಷ್ಟಾಚಾರ ಮೊದಲು ಆಗಿದೆ. ಜನರ ಹಣವನ್ನು ಲೂಟಿ ಮಾಡಿ ಕಾಂಗ್ರೆಸ್ ನ ಕುಟುಂಬಕ್ಕೆ ಕಪ್ಪು ಹಣ ಸಂದಾಯವಾಗುವುದು ಕಾಂಗ್ರೆಸ್ ನ ಆದ್ಯತೆಯಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಯೋಜನೆಯ 1 ರೂಪಾಯಿಯಲ್ಲಿ ಜನರ ಬಳಿಗೆ ತಲುಪುತ್ತಿದ್ದುದು ಕೇವಲ 15 ಪೈಸೆ ಮಾತ್ರ. ಹಾಗಾದರೆ ಶೇಕಡಾ 85ರಷ್ಟು ಹಣವನ್ನು ನುಂಗುತ್ತಿದ್ದವರು, ಲೂಟಿ ಮಾಡುತ್ತಿದ್ದ ಕೈ ಯಾವುದು ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು.
PM Shri @narendramodi addresses public meeting in Mudbidri, Karnataka. https://t.co/fbeRGkdPQw
— BJP (@BJP4India) May 3, 2023
ಕಾಂಗ್ರೆಸ್‌ನಲ್ಲಿ ಪ್ರತಿ ಹಂತದಲ್ಲಿಯೂ ಭ್ರಷ್ಟಾಚಾರ ನಡೆಯುತ್ತದೆ. ಕಾಂಗ್ರೆಸ್ ಮೋದಿಯನ್ನು ಕಂಡರೆ ವಿಷಕಾರುತ್ತದೆ ಯಾಕಂದರೆ, ಬಿಜೆಪಿ ಸರ್ಕಾರ ಕಾಂಗ್ರೆಸ್‌ನ ಭ್ರಷ್ಟಾಚಾರದ ಬೇರನ್ನು ಕಿತ್ತು ಹಾಕಿದೆ. ಕಾಂಗ್ರೆಸ್‌ನವರು ನಕಲಿ ಹೆಸರು ಸೃಷ್ಟಿ ಮಾಡಿ ಲೂಟಿ ಮಾಡುತ್ತಿದ್ದರು. ಮದುವೆಯಾಗದ ಹೆಣ್ಣುಮಕ್ಕಳ ಹೆಸರಲ್ಲಿ ವಿಧವಾ ವೇತನ ಹೋಗುತ್ತಿತ್ತು. ಗ್ಯಾಸ್ ಸಬ್ಸಿಡಿ, ರೇಷನ್, ವಿಧವಾ ವೇತನ ಹಾಗೂ ಮಹಿಳಾ ಕಲ್ಯಾಣ, ಸರ್ಕಾರಿ ಯೋಜನೆ, ವಿದ್ಯಾರ್ಥಿಗಳ ಸ್ಕಾಲರ್ ಶಿಪ್‌ನಲ್ಲಿ ನಕಲಿ ಹೆಸರು ಸೃಷ್ಟಿಸಿ ಲೂಟಿ ಮಾಡುತ್ತಿದ್ದರು ಎಂದು ಟೀಕಿಸಿದರು.
ಜೈ ಭಜರಂಗ ಬಲಿ ಎಂದು ಪಠಿಸಿ: ಕಾಂಗ್ರೆಸ್ ತನ್ನ ನಾಯಕರೊಬ್ಬರ ನಿವೃತ್ತಿಯ ಹೆಸರಿನಲ್ಲಿ ಮತ ಕೇಳುತ್ತಿದೆ. ನನ್ನನ್ನು ನಿಂದಿಸಿ ಮತ ಕೇಳುತ್ತಿದ್ದಾರೆ. ಕರ್ನಾಟಕದಲ್ಲಿ ಗಾಳಿ ಸಂಸ್ಕೃತಿಗೆ ಜಾಗವಿಲ್ಲ. ಮೇ 10 ರಂದು, ನೀವು ಮತ ಚಲಾಯಿಸಿದಾಗ, ‘ಜೈ ಭಜರಂಗ ಬಲಿ’ ಎಂದು ಪಠಿಸಿ, ಕಾಂಗ್ರೆಸ್ ನ್ನು ಸೋಲಿಸಿ ಶಿಕ್ಷೆ ನೀಡಿ ಎಂದು ಕರ್ನಾಟಕ ಜನತೆಗೆ ಮನವಿ ಮಾಡಿಕೊಂಡರು.
ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದಕ್ಕೆ ಕಾಂಗ್ರೆಸ್ ವಿರೋಧ ಮಾಡಿತು. ಆದಿವಾಸಿ ಮಹಿಳೆ ರಾಷ್ಟ್ರಪತಿ ಸ್ಥಾನಕ್ಕೆ ಹೋದರೇ ಕಾಂಗ್ರೆಸ್ಗೆ ಹೊಟ್ಟೆಕಿಚ್ಚು ಪಟ್ಟಿತು. ಈಗ ಆದಿವಾಸಿ ಜನರು ನಿರ್ಧರಿಸಿದ್ದಾರೆ ಕಾಂಗ್ರೆಸ್ ನ್ನು ಅಧಿಕಾರದಿಂದ ದೂರವಿಡಬೇಕೆಂದು. ಸಮಾಜದ ಎಲ್ಲ ವರ್ಗಗಳ ಅಬಿವೃದ್ಧಿಯೇ ಬಿಜೆಪಿಯ ಸಂಕಲ್ಪವಾಗಿದೆ ಎಂದರು.
ಡಬಲ್ ಎಂಜಿನ್ ಸರ್ಕಾರದಿಂದ ಕೆಲಸ: ಕೊರೋನಾ ಸಂಕಷ್ಟದ ಕಾಲದಲ್ಲೂ ಡಬಲ್ ಎಂಜಿನ್ ಸರ್ಕಾರ ಅತ್ಯುತ್ತಮ ಕೆಲಸ ಮಾಡಿದೆ. ಕೇರಳ, ಮಹಾರಾಷ್ಟ್ರ ಸ್ಥಿತಿ ಏನ್ ಆಗಿತ್ತು. ಇಂತಹ ವೇಳೆ ಬಡವರು ಹೊಟ್ಟೆ ಹಸಿಯದಂತೆ ನೋಡಿಕೊಂಡಿದೆ. ಹಾಗೇ ಎಲ್ಲರಿಗೂ ಉಚಿತ ಲಸಿಕೆ ನೀಡಿದೆ. ದೇಶದ ಪ್ರತಿಯೊಬ್ಬ ನಾಗರಿಕ ನಮಗೆ ಆಶೀರ್ವಾದ ಮಾಡುತ್ತಿದ್ದಾರೆ, ಕಾರಣ ಜಗತ್ತಿನ ಬಲಿಷ್ಠ ರಾಷ್ಟ್ರಗಳೆಲ್ಲ ಸಾಂಕ್ರಾಮಿಕ ಸಂಕಷ್ಟದಲ್ಲಿ ಸೋತು ಕೂತಿದ್ದಾಗ ಬಿಜೆಪಿ ಸರ್ಕಾರ ದೇಶವಾಸಿಗಳನ್ನು ಹೇಗೆ ರಕ್ಷಿಸಿದ್ದೇವೆಂದು ದೇಶದ ಜನರಿಗೆ ಅರಿವಿದೆ.
ಪ್ರಕೃತಿ ಸೌಂದರ್ಯ: ಉತ್ತರ ಕನ್ನಡ ಅಂಕೋಲಾ ಪ್ರದೇಶವು ತನ್ನ ಪ್ರಕೃತಿಯ ಸೌಂದರ್ಯಕ್ಕೆ, ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಇದು ಆಧ್ಯಾತ್ಮಿಕತೆಯ ಕೇಂದ್ರವಾಗಿದೆ. ನಾನು ಆಧ್ಯಾತ್ಮಿಕತೆಯ ವಿವಿಧ ಕೇಂದ್ರಗಳಿಗೆ ತಲೆಬಾಗುತ್ತೇನೆ. 40 ವರ್ಷಗಳ ನಂತರ ಪ್ರಧಾನಿಯೊಬ್ಬರು ಈ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಲು ನನಗೆ ಸಂತಸವಾಗುತ್ತಿದೆ ಎಂದು ಸಹ ಪ್ರಧಾನ ಮಂತ್ರಿಗಳು ಹೇಳಿದರು.
