ಬೆಂಗಳೂರು: ಸರಕಾರಿ ಕಾಮಗಾರಿಗಳಲ್ಲಿ ಎಸ್‍ಸಿ-ಎಸ್‍ಟಿ ಗುತ್ತಿಗೆದಾರರಿಗೆ ಮೀಸಲಾತಿ ಕಲ್ಪಿಸಿರುವ ಪಾರದರ್ಶಕ ಕಾಯ್ದೆ ಉಲ್ಲಂಘಿಸಿದ ಆರೋಪದ ಮೇಲೆ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಪ್ರಧಾನ ಅಭಿಯಂತರ ಬಿ.ಎಸ್.ಪ್ರಹ್ಲಾದ್ ವಿರುದ್ಧ ‘ಕರ್ನಾಟಕ ರಾಜ್ಯ ಎಸ್‍ಸಿ-ಎಸ್‍ಟಿ ಗುತ್ತಿಗೆದಾರರ ಸಂಘ (SC-ST Contractors Association) ಲೋಕಾಯುಕ್ತಕ್ಕೆ ದೂರು ನೀಡಿದೆ.
ಸೋಮವಾರ ಸಂಘದ ಅಧ್ಯಕ್ಷ ಎನ್.ಮಹದೇವಸ್ವಾಮಿ ನೇತೃತ್ವದಲ್ಲಿ ಪದಾಧಿಕಾರಿಗಳು, ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದು, ‘ಈ ಸಂಬಂಧದ ಹೈಕೋರ್ಟ್ ತೀರ್ಪುನ್ನು ಲೆಕ್ಕಿಸದೆ ಬೇಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ಪಾರದರ್ಶಕ ಕಾಯ್ದೆ ಉಲ್ಲಂಘಿಸಿದ ಮೇಲ್ಕಂಡ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಅಲ್ಲದೆ, ಮೀಸಲಾತಿ ಕಲ್ಪಿಸಿರುವ ಕಾಯ್ದೆ ಪಾಲಿಸಲು ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದಾರೆ.
ಸಿಎಂ ಅಮೃತ ನಗರೋತ್ಥಾನ ಯೋಜನೆಯಡಿ 485ಕೋಟಿ ರೂ.ಕಾಮಗಾರಿಗಳ ಪರಿಷ್ಕೃತ ಕ್ರಿಯಾಯೋಜನೆ ಅನುಮೋದನೆ ಪಡೆಯಲು ಶಿಫಾರಸ್ಸು ಮಾಡಿದ್ದು, ಒಟ್ಟು 127ಕಾಮಗಾರಿಗಳು 1 ಕೋಟಿ ರೂ.ಗೆ ಮೀರದಂತಹ ಕಾಮಗಾರಿಗಳು. ಯೋಜನೆ ಅನುಮೋದನೆ ಪಡೆಯುವ ವೇಳೆ ಎಸ್‍ಸಿಗೆ ಶೇ.17.15ರಷ್ಟು ಮತ್ತು ಎಸ್‍ಟಿಗೆ ಶೇ.6.95ರಷ್ಟು ಗುತ್ತಿಗೆದಾರರಿಗೆ ಮೀಸಲಾತಿ ನೀಡಬೇಕೆಂದು ಶಿಫಾರಸ್ಸು ಮಾಡಿದೆ. ಆದರೆ, ಈ ಕಾನೂನು ಮಾರೆಮಾಚಲಾಗಿದೆ. ಅಲ್ಲದೆ, ಈ ವಿಚಾರವನ್ನು ಡಿಸಿಎಂ ಅವರಿಗೂ ತಿಳಿಸದೆ ವಂಚಿಸಲಾಗಿದೆ ಎಂದು ಮಹದೇವಸ್ವಾಮಿ ದೂರಿದ್ದಾರೆ.
ಪರಿಶಿಷ್ಟರನ್ನು ಆರ್ಥಿಕ ಸದೃಢರನ್ನಾಗಿಸುವ ದೃಷ್ಟಿಯಿಂದ ಪಾರದರ್ಶಕ ಕಾಯ್ದೆ ಜಾರಿಗೆ ತಂದಿದ್ದು, ಎಸ್‍ಸಿ-ಎಸ್‍ಟಿ ಗುತ್ತಿಗೆದಾರರಿಗೆ 1 ಕೋಟಿ ರೂ.ವರೆಗಿನ ಸರಕಾರಿ ಕಾಮಗಾರಿಗಳಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಆದರೆ, ಅಧಿಕಾರಿಗಳು ಕಾಯ್ದೆಯನ್ನು ಗಾಳಿಗೆ ತೂರಿ ತಮ್ಮ ಅನುಕೂಲಕ್ಕೆ ತಕ್ಕಂತೆ ಟೆಂಡರ್ ಆಹ್ವಾನಿಸುತ್ತಿದ್ದಾರೆ. ಹೀಗಾಗಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಮಹದೇವಸ್ವಾಮಿ ಒತ್ತಾಯಿಸಿದರು.