ಬೆಂಗಳೂರು: ಬೆಂಗಳೂರು ನಗರದಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ನಾಗರಿಕರ ಆಸ್ತಿಗಳನ್ನು ಸ್ಕ್ಯಾನ್ ಮಾಡಲಾಗಿದ್ದು, ಏಪ್ರಿಲ್ ತಿಂಗಳ ಮೂರನೇ ಭಾನುವಾರದಂದು ಇ-ಖಾತಾ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಜಿಬಿಎ ಕಚೇರಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದೇ ದಿನದಲ್ಲಿ ಈ ನಾಗರಿಕರಿಗೆ ಇ-ಖಾತಾ ನೀಡುವ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಪಡಿಸಲಾಗಿದೆ ಎಂದು ಹೇಳಿದರು.
ನಗರದಲ್ಲಿ ಬಿ ಖಾತಾದಿಂದ ಎ ಖಾತಾಕ್ಕೆ ಪರಿವರ್ತನೆ ಪ್ರಕ್ರಿಯೆ ಆರಂಭವಾಗಿದ್ದು, ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಖಾತಾ ಪರಿವರ್ತನೆಗೆ ಅನುಮೋದನೆ ನೀಡಲಿದ್ದಾರೆ ಎಂದರು.
ಕಂದಾಯ ಜಾಗಗಳಲ್ಲಿ ನಿರ್ಮಾಣವಾಗಿದ್ದ ಬಡಾವಣೆ ರಸ್ತೆಗಳನ್ನು ಪಾಲಿಕೆ ರಸ್ತೆಗಳಾಗಿ ಪರಿವರ್ತಿಸಲಾಗಿದೆ ಎಂದು ತಿಳಿಸಿದ ಅವರು, ಈ ಕ್ರಮದಿಂದ ಆಸ್ತಿ ದಾಖಲೆಗಳ ಪಾರದರ್ಶಕತೆ ಹೆಚ್ಚಲು ಹಾಗೂ ನಾಗರಿಕರಿಗೆ ಕಾನೂನು ಸ್ಪಷ್ಟತೆ ದೊರೆಯಲು ಸಹಾಯವಾಗಲಿದೆ ಎಂದು ಹೇಳಿದರು.
