Home ಬೆಂಗಳೂರು ನಗರ ವಿಜ್ಞಾನಿಗಳ ಅವಿಷ್ಕಾರಗಳು ಸಾಮಾನ್ಯ ಜನರಿಗೆ ತಲುಪುವಂತಾಗಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ವಿಜ್ಞಾನಿಗಳ ಅವಿಷ್ಕಾರಗಳು ಸಾಮಾನ್ಯ ಜನರಿಗೆ ತಲುಪುವಂತಾಗಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

73
0
Scientists' innovations should benefit the common man: CM Bommai

ಬೆಂಗಳೂರು:

ವಿಜ್ಞಾನಿಗಳ ಅವಿಷ್ಕಾರಗಳು ಸಾಮಾನ್ಯ ಜನರಿಗೆ ತಲುಪುವಂತಾಗಬೇಕು ಎಂಬುದು ಸರ್ಕಾರದ ಧ್ಯೇಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಅವರು ಇಂದು ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ವತಿಯಿಂದ ಆಯೋಜಿಸಿದ್ದ ಸರ್ . ಎಂ . ವಿಶ್ವೇಶ್ವರಯ್ಯ, ಡಾ. ರಾಜಾರಾಮಣ್ಣ, ಸರ್ .ಸಿ.ವಿ.ರಾಮನ್, ಪ್ರೊ ಸತೀಶ್ ಧವನ್ ಮತ್ತು ಡಾ. ಕಲ್ಪನಾ ಚಾವ್ಲಾ 2019ನೇ ಸಾಲಿನ ವಿಜ್ಞಾನಿ ಮತ್ತು ಇಂಜಿನಿಯರ್ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಡಾ. ಬಿ ಎನ್ ಗಂಗಾಧರ, ಪ್ರೊ. ಗೈತಿ ಹಾಸನ್ ಅವರಿಗೆ ಸರ್.ಎಂ.ವಿಶ್ವೇಶ್ವರಯ್ಯ, ಪ್ರೊ. ಲಲಿತ್ ಮೋಹನ್ ಪಟ್ನಾಯಕ್, ಪ್ರೊ. ಶೆಟ್ಟಿ ಹುಂತ್ರಿಕೆ ಶೇಖರ್ ಅವರಿಗೆ ಡಾ.ರಾಜಾರಾಮಣ್ಣ, ಪ್ರೊ. ಎಚ್. ನಾಗಭೂಷಣ, ಡಾ. ಜಿ. ವೆಂಕಟಸುಬ್ರ ಮಣಿಯನ್, ಪ್ರೊ. ರವಿ ಮಂಜಿತ್ತಾಯ, ಡಾ. ದಿನೇಶ ನಾಗೇಗೌಡ ಅವರಿಗೆ ಸರ್.ಸಿ.ವಿ.ರಾಮನ್, ಪ್ರೊ. ಆರ್ ವೆಂಕಟೇಶ ಬಾಬು , ಪ್ರೊ. ರಾಜ್ ಮೋಹನ್ ಬಾಲಕೃಷ್ಣನ್, ಪ್ರೊ. ವಿನೋದ ಗಣಪತಿ, ಪ್ರೊ. ಹರ್ಷವರ್ಧನ ಅವರಿಗೆ ಪ್ರೊ ಸತೀಶ್ ಧವನ್ ಮತ್ತು ಪ್ರೊ.‌ಮಳಲಿ ಸಂಪೂರ್ಣ ಅವತಿಗೆ ಡಾ. ಕಲ್ಪನಾ ಚಾವ್ಲಾ ಅವರ 2019ನೇ ಸಾಲಿನ ವಿಜ್ಞಾನಿ ಮತ್ತು ಇಂಜಿನಿಯರ್ ರಾಜ್ಯ ಪ್ರಶಸ್ತಿಗಳನ್ನು ಪ್ರಶಸ್ತಿ ವಿಜೇತರುಗಳಿಗೆ ಪ್ರದಾನ ಮಾಡಿದರು.

ಸಂಶೋಧನೆಗಳು ನಿರಂತರವಾಗಿ ನಡೆಯುವಂತದ್ದು. ರಾಜ್ಯದ ವೈಜ್ಞಾನಿಕ ಕ್ಷೇತ್ರ ರಾಜ್ಯದ ಜನರ ಶ್ರೇಯೋಭಿವೃದ್ಧಿಗೆ ಬಳಕೆಯಾಗಬೇಕೆನ್ನುವುದು ಸರ್ಕಾರದ ಉದ್ದೇಶ. ಈ ನಿಟ್ಟಿನಲ್ಲಿ ವಿಜ್ಞಾನಿಗಳ ಎಲ್ಲ ಸಹಕಾರವನ್ನು ನೀಡಲಾಗುವುದು. ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್ ಹಾಗೂ ಸರ್ಕಾರದ ಸಹಯೋಗದಲ್ಲಿ ವೈದ್ಯಕೀಯ ಸಂಶೋಧನಾ ಕೇಂದ್ರ ನಿರ್ಮಾಣಕ್ಕೆ ಚಿಂತಿಸಲಾಗುವುದು ಎಂದು ತಿಳಿಸಿದರು.

ಸುಸ್ಥಿರ ಅಭಿವೃದ್ಧಿ ಹಾಗೂ ಸುಸ್ಥಿರ ಬಳಕೆಯ ಚಿಂತನೆ : ಪರಿಸರ ಹಾಗೂ ಅರಣ್ಯ ಜೀವಿಶಾಸ್ತ್ರವನ್ನು ಉಳಿವಿಗಾಗಿ ಸುಸ್ಥಿರ ಅಭಿವೃದ್ಧಿ ಹಾಗೂ ಸುಸ್ಥಿರ ಬಳಕೆಯ ಚಿಂತನೆ ಅತ್ಯಗತ್ಯ. ಆದ್ದರಿಂದ ಪ್ರಾಕೃತಿಕ ಮತ್ತು ಮಾನವ ನಿರ್ಮಿತ ಒತ್ತಡಗಿಂದ ಅರಣ್ಯ ಜೀವಿಶಾಸ್ತ್ರದ ಮೇಲೆ ಆಗಿರುವ ದುಷ್ಪರಿಣಾಮವನ್ನು ಸರಿದೂಗಿಸುವ ಉದ್ದೇಶದಿಂದ ಹಸಿರು ಆಯವ್ಯಯವನ್ನು ರೂಪಿಸಿ 100 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗುವುದು. ಪರಿಸರ ಸಂರಕ್ಷಣೆಗೆ ಹೊಸ ಚಿಂತನೆ ದೃಷ್ಟಿಕೋನದ ಅವಶ್ಯಕತೆ ಇದೆ ಎಂದು ತಿಳಿಸಿದರು.

ಸೈಬರ್ ಅಪರಾಧಗಳು : ಸೈಬರ್ ಅಪರಾಧಗಳು ಹೆಚ್ಚಾಗಿರುವುದರಿಂದ ಸೈಬರ್ ಕಾನೂನು ರಚಿಸಲಾಗಿದೆ. ಈಗಿನ ಯುವ ವಿಜ್ಞಾನಿಗಳ ಸಂಶೋಧನೆಗಳು ಸೈಬರ್ ಅಪರಾಧಿಗಳ ಬುದ್ದಿಮತ್ತೆಯನ್ನು ಮೀರಿಸುವಂತಿರಬೇಕು ಎಂದು ಸಲಹೆ ನೀಡಿದರು.

ಸಿಎನ್‍ಆರ್ ರಾವ್ ಅವರು ಪ್ರೇರಣಾ ಶಕ್ತಿ : ವಿಜ್ಞಾನ ಅವಿಷ್ಕಾರಗಳಿಂದ ಕೂಡಿದೆ. ವಿಜ್ಞಾನದಲ್ಲಿ ಅಭಿವೃದ್ಧಿ , ಪ್ರಯೋಗ, ಸಂಶೋಧನೆ, ಅನ್ವೇಷಣೆ ನಿರಂತರವಾಗಿ ನಡೆಯುತ್ತಿದೆ. ಐನ್‍ಸ್ಟೈನ್,ನ್ಯೂಟನ್ ಸೇರಿದಂತೆ ಮಹಾನ್ ವಿಜ್ಞಾನಿಗಳು ಮಾಡಿರುವ ಸಂಶೋಧನೆಗಳು ಪ್ರಯೋಗಗಳು ಮಾನವ ಸಂತತಿಯ ಅಭಿವೃದ್ಧಿಗೆ ಬಹಳ ಸಹಕರಿಸಿವೆ. ಸಿ.ಎನ್.ಆರ್. ರಾವ್ ಅಂತಹ ಮಹಾನ್ ವಿಜ್ಞಾನಿ ತಮ್ಮ ಸಂಶೋಧನೆಗಳಿಂದ ನಮಗೆಲ್ಲರಿಗೂ ಪ್ರೇರಣಾ ಶಕ್ತಿಯಾಗಿದ್ದಾರೆ. ಕನ್ನಡಿಗರಾದ ಸಿಎನ್‍ಆರ್ ರಾವ್ ಅವರು ಅನೇಕ ಸಂಸ್ಥೆಗಳನ್ನು ಕಟ್ಟಿ, ವಿಜ್ಞಾನ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡುವ ಮೂಲಕ ‘ಆಧುನಿಕ ವಿಶ್ವೇಶ್ವರಯ್ಯ’ ಆಗಿದ್ದಾರೆ ಎಂದರು.

ಶ್ರೇಷ್ಠ ವಿಜ್ಞಾನಿಗಳ ಮಾರ್ಗದರ್ಶನ ಹಾಗೂ ದೃಷ್ಟಿಕೋನದಿಂದ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಮನುಷ್ಯನಲ್ಲಿರುವ ಒಗ್ಗಿಕೊಳ್ಳುವಿಕೆಯ ಗುಣ ಭೂಮಿಯ ಇನ್ಯಾವುದೇ ಜೀವಿಗಳಿಗೆ ಸಾಧ್ಯವಿಲ್ಲ. ಆದ್ದರಿಂದ ದೀರ್ಘಕಾಲ ಬಾಳುವ ಮನುಷ್ಯನ ಮೇಲೆ ಭೂಮಿಯನ್ನು ಸುರಕ್ಷಿತವಾಗಿಟ್ಟುಕೊಳ್ಳುವ ಮಹತ್ತರ ಜವಾಬ್ದಾರಿ ಇದೆ. ಉತ್ತಮ ಮಾನವ ಹಾಗೂ ನೈಸರ್ಗಿಕ ಸಂಪನ್ಮೂಲಗಳು, ಸಂಶೋಧನೆಯ ಉತ್ಪನ್ನಗಳನ್ನು ನಮ್ಮ ಪೂರ್ವಜರು ನೀಡಿದ್ದಾರೆ.. ಜ್ಞಾನ, ವಿಜ್ಞಾನ, ತಂತ್ರಜ್ಞಾನ, ತಂತ್ರಾಂಶ ಜ್ಞಾನ ನಮಗೆ ಲಭಿಸಿದೆ. ಅವುಗಳನ್ನು ಸಂರಕ್ಷಿಸುವ ಹೊಣೆ ನಮ್ಮ ಮೇಲಿದೆ ಎಂದು ತಿಳಿಸಿದರು.

ಭಾರತ ರತ್ನ ಪ್ರೊ. ಸಿ. ಎನ್. ಆರ್. ರಾವ್ , ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲಾಭಿವೃದ್ಧಿ ಸಚಿವ ಶ್ರೀ ಡಾ ಅಶ್ವತ್ಥ್ ನಾರಾಯಣ, ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಗೋವಿಂದನ್ ರಂಗರಾಜನ್, ಶಾಸಕ ಶ್ರೀ ರಿಜ್ವಾನ್ ಅರ್ಷದ್, ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಶ್ರೀ ಕಿರಣ್ ಕುಮಾರ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಅವರೆ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಕಾರ್ಯದರ್ಶಿ ಪ್ರೊ. ಅಶೋಕ್ ಎಂ. ರಾಯಚೂರ್ ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here