ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆ ಮುಕ್ತ, ನಿರ್ಭೀತ ಮತದಾನಕ್ಕೆ ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಯಾವುದೇ ಕಾನೂನು ಬಾಹಿರ ಚಟುವಟಿಕೆ ಉಂಟಾಗದಂತೆ ಬೆಂಗಳೂರಿನ ಎಂಟು ವಿಭಾಗಗಳಲ್ಲಿ ಪೊಲೀಸ್ ಬಿಗಿ ಭದ್ರತೆ ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಚುನಾವಣೆ ಸಿದ್ಧತೆ ಕುರಿತು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮತ್ತು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಜಂಟಿ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು.
ಎ.24ರ ಸಂಜೆ 6ರಿಂದ ಎ.26ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ 144 ಸೆಕ್ಷನ್ ಜಾರಿ ಮಾಡಲಾಗುತ್ತದೆ. ನಿಷೇಧಾಜ್ಞೆ ವೇಳೆ ಯಾವುದೇ ಬಹಿರಂಗ ಪ್ರಚಾರ ಮಾಡುವಂತಿಲ್ಲ. ಐದಕ್ಕೂ ಹೆಚ್ಚು ಜನರು ಒಂದೇ ಕಡೆ ಸೇರುವಂತಿಲ್ಲ. ಬೆಂಗಳೂರಿನಲ್ಲಿ ಯಾವುದೇ ಪ್ರತಿಭಟನೆಗೂ ಅವಕಾಶ ಇರುವುದಿಲ್ಲ. ಎ.24ರ ಸಂಜೆ 6ರಿಂದ ಎ.26ರ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧವಿರುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದರು.
ಬೆಂಗಳೂರು ನಗರದ ಎಲ್ಲ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು ಮತದಾನದ ಭದ್ರತೆಗೆ ಬಳಸಿಕೊಳ್ಳಲಾಗುತ್ತದೆ. ಬೆಂಗಳೂರಿನಲ್ಲಿ 13 ಸಾವಿರಕ್ಕೂ ಅಧಿಕ ಪೊಲೀಸರು, 11,793 ಸಿಎಪಿಎಫ್ ಸಿಬ್ಬಂದಿಗಳು, 14 ಕೆಎಸ್‍ಆರ್ ಪಿ, 53 ಎಸಿಪಿ, 737 ಪಿಎಸ್‍ಐ, 902 ಎಎಸ್‍ಐ, 3555 ಎಸ್‍ಐ, 6352 ಪೊಲೀಸ್ ಕಾನ್‍ಸ್ಟೇಬಲ್, 3919 ಹೋಮ್ ಗಾರ್ಡ್, 500 ಸಿವಿಲ್ ಡಿಫೆನ್ಸ್, 32 ಪಾರೆಸ್ಟ್ ಗಾರ್ಡ್, 44 ಶಸ್ತ್ರಾಸ್ತ್ರ ತುಕಡಿಗಳು, 11 ಕೇಂದ್ರೀಯ ಪೊಲೀಸ್ ತುಕಡಿಗಳನ್ನು ಮತಗಟ್ಟೆಗಳು, ಚೆಕ್‍ಪೋಸ್ಟ್ ಗಳಿಗೆ ನಿಯೋಜಿಸಲಾಗಿದೆ ಎಂದು ಬಿ.ದಯಾನಂದ್ ಹೇಳಿದರು.
ಎ.26ರಂದು ಬೆಳಗ್ಗೆ 7 ರಿಂದ ಮತದಾನ ಪ್ರಾರಂಭವಾಗುತ್ತದೆ. ಮತದಾರರ ಮೇಲೆ ಆಮಿಷವೊಡ್ಡುವ ಸಾಧ್ಯತೆಯಿರುವುದರಿಂದ ನಗರಾದ್ಯಂತ ಹದ್ದಿನ ಕಣ್ಣಿಡಲಿದ್ದೇವೆ. ಮತದಾನದ ಪ್ರಾಮುಖ್ಯತೆ ಕಾಪಾಡಬೇಕಿದೆ ಎಂದು ಬಿ.ದಯಾನಂದ್ ತಿಳಿಸಿದರು.
ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ನಗರ ಪೊಲೀಸರು ಸೇರಿದಂತೆ ವಿವಿಧ ಇಲಾಖೆ ಜೊತೆಗೆ ಸಭೆ ನಡೆಸಲಾಗಿದೆ. ನಗರದಲ್ಲಿ 72 ಗಂಟೆಗಳ ಕಾಲ ಹೇಗೆ ಸಕ್ರಿಯ ಆಗಿರಬೇಕು ಎಂದು ಚರ್ಚೆ ನಡೆಸಲಾಗಿದೆ. ಬ್ಯಾಂಕ್ ಮಾಹಿತಿ ಆಧಾರದ ಮೇಲೆ ಕ್ರಮ ಕೈಗೊಳ್ಳಲು ಚರ್ಚೆ ನಡೆಸಲಾಗಿದೆ ಎಂದರು.
ಸಂಶಯಾಸ್ಪದ ವಸ್ತುಗಳು ಕಂಡು ಬಂದರೆ ತಪಾಸಣೆ ಮಾಡುತ್ತೇವೆ. ಬೆಂಗಳೂರಿನಲ್ಲಿ 1 ಕೋಟಿ 20 ಸಾವಿರದಷ್ಟು ಮತದಾರರಿದ್ದಾರೆ. 64 ಕೋಟಿ 87 ಲಕ್ಷ ರೂ. ಇದುವರೆಗೆ ಜಪ್ತಿಯಾಗಿದೆ. ಇದೆಲ್ಲವನ್ನು ಐಟಿ ಇಲಾಖೆಗೆ ಮಾಹಿತಿ ಕೊಡಲಾಗಿದೆ. ಬೆಂಗಳೂರಿನಲ್ಲಿ ಒಟ್ಟು 5 ಲೋಕಸಭಾ ಕ್ಷೇತ್ರಗಳಿವೆ ಎಂದು ತುಷಾರ್ ಗಿರಿನಾಥ್ ಹೇಳಿದರು.
ಬೆಂಗಳೂರಿನಲ್ಲಿ ಸೂಕ್ಷ್ಮ ಮತಗಟ್ಟೆ ಸಂಖ್ಯೆ– 1737, ಸಾಮಾನ್ಯ ಮತಗಟ್ಟೆ ಸಂಖ್ಯೆ– 6351, ಒಟ್ಟು ಮತಗಟ್ಟೆ– 8088, ಒಟ್ಟು ಮತಗಟ್ಟೆ ಕೇಂದ್ರ– 2564, ಸೆಕ್ಟರ್ ಮೊಬೈಲ್– 416, ಸೂಪರ್ ವೈಸರಿ ಮೊಬೈಲ್– 118, ಸಬ್ ಡಿವಿಷನ್ ಮೊಬೈಲ್– 5 ಮತಗಟ್ಟೆಗಳಿವೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.
ಸಕ್ಷಮ್ ತಂತ್ರಾಂಶದ ಮೂಲಕ ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರು ಸಾರಿಗೆ ಸೌಲಭ್ಯವನ್ನು ನೋಂದಣಿ ಮಾಡಿಕೊಳ್ಳಬಹುದು. ಐವಿಆರ್ ಎಸ್ ಹಾಗೂ ಬಲ್ಕ್ ಎಸ್‍ಎಂಎಸ್ ಮೂಲಕ ಎ.26ರಂದು ತಪ್ಪದೇ ಮತದಾನ ಮಾಡಲು ಮೊಬೈಲ್‍ಗಳಿಗೆ ಸಂದೇಶಗಳನ್ನು ಕಳುಹಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ, ಎಂಸಿಸಿ ನೋಡಲ್ ಅಧಿಕಾರಿ ಮೌನೀಶ್ ಮೌದ್ಗಿಲ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.