
ಬೆಂಗಳೂರು:
ಬೆಂಗಳೂರಿನ ಮಾಣೆಕ್ ಷಾ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವದ ವೇಳೆ ಭದ್ರತಾ ಲೋಪ ಉಂಟಾಗಿದೆ. ವ್ಯಕ್ತಿಯೊಬ್ಬ ಭದ್ರತೆ ಮೀರಿ ರಾಜ್ಯಪಾಲರು ಹಾಗೂ ಸಿಎಂಗೆ ಎದುರು ಬಂದು ಪೋಸ್ಟರ್ ಪ್ರದರ್ಶನ ಮಾಡಿದ್ದಾನೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಧ್ವಜಾರೋಹಣ ನೆರವೇರಿಸುವ ವೇಳೆ ವ್ಯಕ್ತಿಯೊಬ್ಬ ಕರಪತ್ರ ಹಿಡಿದು ಸ್ಟೇಜ್ ಮುಂದೆಯೇ ಪ್ರದರ್ಶನ ಮಾಡಿದ್ದಾನೆ. ಕೂಡಲೇ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಪೋಸ್ಟರ್ ಹಿಡಿದಿದ್ದ ವ್ಯಕ್ತಿ ಕಣ್ಣೀರಿಡುತ್ತಾ ಭದ್ರತಾ ಸಿಬ್ಬಂದಿಯನ್ನು ಅದ್ಹೇಗೋ ದಾಟಿ ಬಂದಿದ್ದಾನೆ. ಮೈಸೂರು ಮೂಲದ ಪರಶುರಾಮ್ ಕರ ಪತ್ರ ಹಿಡಿದು ಸಿಎಂ ಬಳಿ ನುಗ್ಗಲು ಯತ್ನಿಸಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ. KPSC ಆರ್ಡರ್ ವಿಳಂಬದ ಬಗ್ಗೆ ಸಿಎಂಗೆ ಮನವಿ ಸಲ್ಲಿಸಲು ಬಂದಿದ್ದ ಪರಶುರಾಮ್ ಅವರನ್ನು ಸಿಎಂ ಬಳಿ ಬಿಡದಿದ್ದಕ್ಕೆ ಏಕಾಏಕಿ ನುಗ್ಗಲು ಯತ್ನಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಪೊಲೀಸರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.