ಬೆಂಗಳೂರು: ನಗರದ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಲೇಜಿನ ಸೆಕ್ಯುರಿಟಿ ಗಾರ್ಡ್ (ಶಿಸ್ತು ಪಾಲನಾ ಉಸ್ತುವಾರಿಗೆ) ವಿದ್ಯಾರ್ಥಿಯೊಬ್ಬ ಚಾಕುವಿನಿಂದ ಇರಿದು ಕೊಲೆಗೈದಿದ್ದು, ಈ ಸಂಬಂಧ ಆತನನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಮೃತಹಳ್ಳಿಯ ಖಾಸಗಿ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಅಸ್ಸಾಂ ಮೂಲದ ಜೈಕಿಶೋರ್ ರಾಯ್ (52) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಬಿಹಾರ ಮೂಲದ 22 ವರ್ಷದ ಆರೋಪಿ ಭಾರ್ಗವ್ ಎಂಬಾತನನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ.
ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಎ. ವ್ಯಾಸಂಗ ಮಾಡುತ್ತಿದ್ದ ಭಾರ್ಗವ್, ಜು.3ರ ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ಪಾನಮತ್ತನಾಗಿ ಕಾಲೇಜು ಬಳಿ ಬಂದಿದ್ದ. ಕಾಲೇಜಿನಲ್ಲಿ ಕಾರ್ಯಕ್ರಮ ಸಹ ಇತ್ತು. ಪಾನಮತ್ತನಾಗಿದ್ದ ಭಾರ್ಗವ್‍ನನ್ನು ಕಾಲೇಜು ಆವರಣದೊಳಗೆ ಬಿಡಲು ಜೈಕಿಶೋರ್ ರಾಯ್ ನಿರಾಕರಿಸಿದ್ದರು ಎನ್ನಲಾಗಿದೆ.
ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಬಳಿಕ ಸ್ಥಳದಿಂದ ತೆರಳಿದ್ದ ಭಾರ್ಗವ್, ಅಂಗಡಿಯೊಂದರಲ್ಲಿ ಚಾಕು ಖರೀದಿಸಿ ಕೆಲ ಸಮಯದ ಬಳಿಕ ಪುನಃ ಕಾಲೇಜು ಬಳಿ ಬಂದಿದ್ದ. ಕಾಲೇಜು ಪ್ರವೇಶಿಸಲು ನಿರಾಕರಿಸಿದ್ದ ಜೈಕಿಶೋರ್ ರಾಯ್ ಅವರ ಎದೆಗೆ ಚಾಕುವಿನಿಂದ ಇರಿದಿದ್ದ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಜೈಕಿಶೋರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಅಮೃತಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ಹೇಳಿದ್ದಾರೆ.