ಬೆಂಗಳೂರು: ಕಾರಾಗೃಹ ಹಾಗೂ ತಿದ್ದುಪಡಿ ಸೇವೆಗಳ ಮಹಾನಿರ್ದೇಶಕರಾಗಿ (DGP – Prisons & Correctional Services) ಜವಾಬ್ದಾರಿ ವಹಿಸಿಕೊಂಡ ನಂತರ ಮೊದಲ ಅಧಿಕೃತ ಭೇಟಿಯಾಗಿ ಡಿಜಿಪಿ ಅಲೋಕ್ ಠಾಕೂರ್ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ, ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಹೈ-ಸಿಕ್ಯುರಿಟಿ ಜೈಲಿನೊಳಗೆ ಸುತ್ತಾಟ ನಡೆಸಿದ ಡಿಜಿಪಿ, ಹಿರಿಯ ಅಧಿಕಾರಿಗಳೊಂದಿಗೆ ಜೈಲಿನ ಮೂಲಸೌಕರ್ಯ, ಪ್ರವೇಶ ನಿಯಂತ್ರಣ, ನಿಗಾವ್ಯವಸ್ಥೆ ಹಾಗೂ ಭದ್ರತಾ ಕ್ರಮಗಳನ್ನು ನೇರವಾಗಿ ಪರಿಶೀಲಿಸಿದರು. ಈ ವೇಳೆ ಜೈಲುಗಳಲ್ಲಿ ಆಧುನಿಕ ತಂತ್ರಜ್ಞಾನ ಆಧಾರಿತ ಭದ್ರತಾ ವ್ಯವಸ್ಥೆ ಅಗತ್ಯ ಎಂದು ಅವರು ಸ್ಪಷ್ಟಪಡಿಸಿದರು.
ಜೈಲು ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, AI ಆಧಾರಿತ ಇಂಟ್ರೂಷನ್ ಡಿಟೆಕ್ಷನ್ ಸಿಸ್ಟಮ್ ಅನ್ನು ಪ್ರಯೋಗಾತ್ಮಕವಾಗಿ ಜಾರಿಗೆ ತರಲಾಗುತ್ತಿದೆ ಎಂದು ಡಿಜಿಪಿ ಘೋಷಿಸಿದರು. ಅನುಮತಿಯಿಲ್ಲದ ಚಲನವಲನ, ಅಕ್ರಮ ಪ್ರವೇಶ ಮತ್ತು ಭದ್ರತಾ ಉಲ್ಲಂಘನೆಗಳನ್ನು ಸ್ವಯಂಚಾಲಿತವಾಗಿ ಗುರುತಿಸುವ ಸಾಮರ್ಥ್ಯ ಈ ವ್ಯವಸ್ಥೆಗೆ ಇದೆ.
ಪರಿಶೀಲನೆಯ ನಂತರ, ಡಿಜಿಪಿ ಅಲೋಕ್ ಠಾಕೂರ್ ಅವರು ಜೈಲು ಭದ್ರತೆಯಲ್ಲಿ ತೊಡಗಿರುವ ಕಾರಾಗೃಹ ಸಿಬ್ಬಂದಿ, ಕರ್ನಾಟಕ ಸ್ಟೇಟ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ (KSISF) ಮತ್ತು ಸ್ಥಳೀಯ ಪೊಲೀಸ್ ಇಲಾಖೆ ನಡುವೆ ಸಮನ್ವಯ ಅತ್ಯಗತ್ಯ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇದರ ಜೊತೆಗೆ, ಜೈಲುಗಳಲ್ಲಿ ವಿಶೇಷ ಶೋಧ ಕಾರ್ಯಾಚರಣೆ (Special Search Operations) ತಕ್ಷಣ ಆರಂಭಿಸುವಂತೆ ಆದೇಶಿಸಿ, ನಿಷೇಧಿತ ವಸ್ತುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
“ಜೈಲುಗಳಲ್ಲಿ ದಾಖಲಾಗುವ ಪ್ರತಿಯೊಂದು ಪ್ರಕರಣವೂ ಗುಣಮಟ್ಟದ ತನಿಖೆಗೆ ಒಳಗಾಗಬೇಕು. ನಿಷೇಧಿತ ವಸ್ತುಗಳ ವಿಚಾರದಲ್ಲಿ ಯಾವುದೇ ಸಡಿಲತೆ ಇಲ್ಲ — ಜೀರೋ ಟಾಲರೆನ್ಸ್ ನೀತಿ ಅನುಸರಿಸಲಾಗುತ್ತದೆ,” ಎಂದು ಡಿಜಿಪಿ ಸ್ಪಷ್ಟಪಡಿಸಿದರು.
