ಬೆಂಗಳೂರು: ನಾಳೆಯಿಂದ ಆರಂಭವಾಗಲಿರುವ IPL ಪಂದ್ಯಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಲಿನಿ ರಾಜನೀಶ್ ಅವರು ಸಂಬಂಧಿತ ಅಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಪದಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿ ಭದ್ರತೆ ಕುರಿತು ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಸ್ಟೇಡಿಯಂ ಒಳಭಾಗ ಮತ್ತು ಹೊರಭಾಗದಲ್ಲಿ ಕ್ರಿಕೆಟ್ ಅಭಿಮಾನಿಗಳ ಸುರಕ್ಷತೆಗೆ ಕೈಗೊಳ್ಳಲಾಗಿರುವ ಭದ್ರತಾ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದುಕೊಂಡರು. ಜೊತೆಗೆ ನಗರದ ಟ್ರಾಫಿಕ್ ವ್ಯವಸ್ಥೆಯಲ್ಲಿ ಮಾಡಿರುವ ಬದಲಾವಣೆಗಳು, ಪಾರ್ಕಿಂಗ್ ವ್ಯವಸ್ಥೆ, ಸ್ಟೇಡಿಯಂ ಒಳಗಿನ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.
ಅಧಿಕಾರಿಗಳು ನಮ್ಮ ಮೆಟ್ರೋ ನಲ್ಲಿ ನಿರೀಕ್ಷಿತ ಪ್ರಯಾಣಿಕರ ಸಂಖ್ಯೆಯ ಹೆಚ್ಚಳ, ಮೆಟ್ರೋ ಸಂಚಾರ ವೇಳಾಪಟ್ಟಿ, ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಭದ್ರತಾ ವ್ಯವಸ್ಥೆಗಳ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಯಾವುದೇ ಸಣ್ಣ ಅಹಿತಕರ ಘಟನೆಗೂ ಅವಕಾಶ ನೀಡಬಾರದು ಎಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
IPL ಪಂದ್ಯಗಳ ಆಯೋಜನೆಗಾಗಿ ಸರ್ಕಾರ ವಿಧಿಸಿರುವ ನಿಯಮಗಳು ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ ಅವರು, ಸಂಬಂಧಿತ ಎಲ್ಲಾ ಇಲಾಖೆಗಳು ಹೈ ಅಲರ್ಟ್ನಲ್ಲಿ ಇರಬೇಕು ಮತ್ತು ಪರಸ್ಪರ ಮಾಹಿತಿಯನ್ನು ನಿಯಮಿತವಾಗಿ ಹಂಚಿಕೊಳ್ಳಬೇಕು ಎಂದು ಹೇಳಿದರು.
ಈ ಸಭೆಯಲ್ಲಿ KSCA ನಿರ್ದೇಶಕರು, ಪದಾಧಿಕಾರಿಗಳು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರತಿನಿಧಿಗಳು, ನಗರ ಪೊಲೀಸ್ ಆಯುಕ್ತರು, ಜಿಬಿಎ ಆಯುಕ್ತರು, ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಂಬಂಧಿತ ಇಲಾಖೆಗಳ ಮುಖ್ಯಸ್ಥರು ಭಾಗವಹಿಸಿದ್ದರು.
