ಬೆಂಗಳೂರು:
ನಕಲಿ ಅಂಕಪಟ್ಟಿ ತಯಾರಿಸಿ ಮಾರುತ್ತಿದ್ದ ಜಾಲವನ್ನು ಜಯನಗರ ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಜೆ. ರಘು (34), ಜಿ. ಧರ್ಮಕುಮಾರ್ (39), ಜೆ. ದೀಪಕ್ (32) ಹಾಗೂ ಸಿ. ನರೇಶ್ ರೆಡ್ಡಿ (37) ಬಂಧಿತರು. ಇವರಿಂದ 200 ನಕಲಿ ಅಂಕಪಟ್ಟಿಗಳು ಹಾಗೂ 4.60 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಕಾಲೇಜಿಗೆ ಹೋಗದೇ ಅಂಕಪಟ್ಟಿ ನೀಡುವುದಾಗಿ ಆರೋಪಿ ಆಮಿಷವೊಡ್ಡುತ್ತಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಆರೋಪಿಯನ್ನು ಬಂಧಿಸಲಾಯಿತು ಎಂದರು.
ಕಂಪ್ಯೂಟರ್, ಪ್ರಿಂಟರ್ ಹಾಗೂ ಇತರೆ ತಾಂತ್ರಿಕ ಸಾಧನಗಳನ್ನು ಹೊಂದಿದ್ದ ಆರೋಪಿಗಳು, ಅದರ ಮೂಲಕ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರ ತಯಾರಿಸುತ್ತಿದ್ದರು. ಒಂದು ಅಂಕಪಟ್ಟಿ ಅಥವಾ ಪ್ರಮಾಣಪತ್ರವನ್ನು 20 ಸಾವಿರದಿಂದ 40 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು ಎಂದರು.
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ, ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಕಲ್ ಸೈನ್ಸ್, ಡಾ. ಸಿ.ವಿ.ರಾಮನ್ ವಿಶ್ವವಿದ್ಯಾಲಯ, ರವೀಂದ್ರನಾಥ್ ಠಾಗೂರ್ ವಿಶ್ವವಿದ್ಯಾಲಯದ ಎಲ್ಲ ಕೋರ್ಸ್‌ಗಳ ಅಂಕಪಟ್ಟಿಗಳು ಆರೋಪಿಗಳ ಬಳಿ ಸಿಕ್ಕಿವೆ. ಇವುಗಳನ್ನು ಬಳಸಿ ಕೆಲ ಅಭ್ಯರ್ಥಿಗಳು, ಕೆಲಸ ಗಿಟ್ಟಿಸಿಕೊಂಡಿರುವುದು ಗೊತ್ತಾಗಿದೆ’ ಎಂದರು.