ಬೆಂಗಳೂರು ಗ್ರಾಮಾಂತರ ಜಿಲ್ಲೆ :
ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ರೂಪುಗೊಳಿಸಿರುವ ಮಹತ್ವಪೂರ್ಣ ಯೋಜನೆಯಾದ ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವನ್ನು ಕರ್ನಾಟಕದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಯೋಗದೊಂದಿಗೆ ನಡೆಸಲಾಗುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಾಸಿಸುತ್ತಿರುವ ಹಿರಿಯ ನಾಗರಿಕರು ಟೋಲ್ ಫ್ರೀ ಸಂಖ್ಯೆ 14567 ಗೆ ಕರೆ ಮಾಡಿ, ಹಿರಿಯ ನಾಗರಿಕರಿಗೆ ಇರುವ ಸರ್ಕಾರಿ ಸೌಲಭ್ಯಗಳ ಮಾಹಿತಿಯನ್ನು ಪಡೆಯಬಹುದು.
ಬೆಂಗಳೂರಿನಲ್ಲಿ 1998ರಿಂದ ಹಿರಿಯ ನಾಗರಿಕರ ಯೋಗಕ್ಷೇಮಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರೇತರ ಸಂಸ್ಥೆ ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ಕರ್ನಾಟಕದಲ್ಲಿ ಈ ಯೋಜನೆ ಅನುಷ್ಟಾನಗೊಳಿಸಲು ಪಾಲುದಾರರಾಗಿ ನಾಮನಿರ್ದೇಶನಗೊಂಡಿದ್ದು, ಪ್ರಸ್ತುತ ಹಿರಿಯ ನಾಗರಿಕರ ಸಹಾಯವಾಣಿ 14567 ಸಂಪರ್ಕ ಕೇಂದ್ರವು ಬೆಂಗಳೂರಿನಲ್ಲಿ ಸ್ಥಾಪಿತವಾಗಿದೆ ಹಾಗೂ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕ್ಷೇತ್ರ ಕಾರ್ಯನಿರ್ವಹಣ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ಹಿರಿಯ ನಾಗರಿಕರ ಸಹಾಯವಾಣಿ(ಎನ್.ಹೆಚ್.ಎಸ್.ಸಿ) ಎಲ್ಡರ್‌ಲೈನ್, ಟೋಲ್ ಫ್ರೀ ಸಂಖ್ಯೆ 14567 ಅಗತ್ಯ ಮಾಹಿತಿ ಮತ್ತು ಉತ್ತಮ ಕ್ಷೇತ್ರ ಕಾರ್ಯದ ಮೂಲಕ ಭಾರತದಲ್ಲಿ ಹಿರಿಯ ನಾಗರಿಕರ ಕುಂದು ಕೊರತೆಗಳನ್ನು ಪರಿಹರಿಸುವ ಒಂದು ಸಾರ್ವಜನಿಕ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿದೆ.
ಹಿರಿಯ ನಾಗರಿಕರಿಗೆ ಕೋವಿಡ್ ಸಂಬಂಧಿತ ವಿಷಯಗಳು ಕುರಿತು ಮಾಹಿತಿ, ಆಸ್ಪತ್ರೆಗಳ ಬಗ್ಗೆ, ವೃದ್ದಾಶ್ರಮಗಳ ಬಗ್ಗೆ, ಆರೈಕೆ ಕೇಂದ್ರಗಳು, ಹಗಲು ಯೋಗಕ್ಷೇಮ ಕೇಂದ್ರಗಳು ಇತ್ಯಾದಿ ವಿಚಾರಗಳ ಬಗ್ಗೆ ಮಾಹಿತಿಯನ್ನು ಒದಗಿಸಲಾಗುತ್ತದೆ ಹಾಗೂ ಹಿರಿಯ ನಾಗರಿಕರಿಗೆ ಇರುವ ಸರ್ಕಾರಿ ಸೌಲಭ್ಯಗಳು, ಪಿಂಚಣಿ ಯೋಜನೆಯ ಬಗ್ಗೆ ಮಾರ್ಗದರ್ಶನ ನೀಡುವುದಲ್ಲದೆ, ಹಿರಿಯ ನಾಗರಿಕರ ಪಾಲನೆ ಪೋಷಣೆ ಕಾಯಿದೆ ಕುರಿತು ಮತ್ತು ಕಾನೂನಾತ್ಮಕ ಸಮಸ್ಯೆಗಳ ಬಗ್ಗೆ ಮಾರ್ಗದರ್ಶನ ನೀಡಲಾಗುವುದು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಾಸಿಸುತ್ತಿರುವ ಹಿರಿಯ ನಾಗರಿಕರು ಟೋಲ್ ಫ್ರೀ ಸಂಖ್ಯೆ 14567 ಗೆ ಕರೆ ಮಾಡಿ, ಹಿರಿಯ ನಾಗರಿಕರಿಗೆ ಇರುವ ಸರ್ಕಾರಿ ಸೌಲಭ್ಯಗಳ ಮಾಹಿತಿಯನ್ನು ಪಡೆಯುವಂತೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.