ಬೆಳಗಾವಿ:
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದಲ್ಲಿರುವ ಆಸ್ತಿಗಳ ರಕ್ಷಣೆಗಾಗಿ ಪ್ರತ್ಯೇಕ ಕೋಶವನ್ನು ತೆರೆಯಲು ತೀರ್ಮಾನಿಸಲಾಗಿದೆ ಎಂದು ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಗುರುವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ಬಿಡಿಎ ವ್ಯಾಪ್ತಿಯಲ್ಲಿ ಸಾವಿರಾರು ಕೋಟಿ ಬೆಲೆ ಬಾಳುವ ಸ್ವತ್ತುಗಳಿವೆ. ಇವುಗಳನ್ನು ರಕ್ಷಣೆ ಮಾಡಿಕೊಳ್ಳುವುದು ನಮಗೆ ಸವಾಲೇ ಸರಿ. ಹೀಗಾಗಿ ಪ್ರತ್ಯೇಕ ಕೋಶ ತೆರೆಯುವ ಚಿಂತನೆ ಇದೆ ಎಂದರು.
ಬಿಡಿಎ ಭೂ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ತಮಗೆ ನ್ಯಾಯಾಲಯದಲ್ಲಿ ಸಾಕಷ್ಟು ಹಿನ್ನಡೆಯಾಗುತ್ತಿತ್ತು. ನಮ್ಮ ವಕೀಲರು ಸಮರ್ಥವಾಗಿ ವಾದ ಮಾಡಿದರೂ ತೀರ್ಪುಗಳು ಮಾತ್ರ ಖಾಸಗಿಯವರ ಪರವಾಗಿಯೇ ಬರುತ್ತಿದ್ದವು. ಹೀಗಾಗಿ ಇತ್ತೀಚೆಗೆ ಕಾನೂನು ಸಚಿವರಾದ ಎಚ್.ಕೆ.ಪಾಟೀಲ್ ಅವರು ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಸಭೆ ನಡೆಸಿದ್ದರು. ಈ ಸಭೆಗೆ ಬಿಡಿಎ ಹಾಗು ಬಿಬಿಎಂಪಿ ಪ್ರತಿನಿಧಿಸುವ ವಕೀಲರುಗಳನ್ನು ಕರೆಸಲಾಗಿತ್ತು. ಇನ್ನು ಮುಂದೆ ನ್ಯಾಯಾಲಯಗಳಲ್ಲಿ ನಮಗೆ ಹಿನ್ನಡೆಯಾಗದಂತೆ ಸಮರ್ಪಕ ವಾದ ಮಂಡಿಸಿ ಕಾನೂನು ಹೋರಾಟ ಮಾಡಬೇಕೆಂದು ಸೂಚನೆ ಕೊಡಲಾಗಿದೆ ಎಂದು ಅವರು ಉಲ್ಲೇಖಿಸಿದರು.